ಶನಿವಾರ, ಅಕ್ಟೋಬರ್ 16, 2021
22 °C
ನಿಯಮ ಪಾಲಿಸದೆ ವಿದ್ಯುತ್‌ ಕಂಬ ಅಳವಡಿಕೆ

ದೊಡ್ಡಬಳ್ಳಾಪುರ: ಕೆಪಿಟಿಸಿಎಲ್‌ ವಿರುದ್ಧ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಕಸಬಾ ಹೋಬಳಿಯ ತಳಗವಾರ, ಕೋಳೂರು,ಕಂಟನಕುಂಟೆ  ಗ್ರಾಮಗಳ ಮೂಲಕ ಹಾದು ಹೋಗಿದ್ದ ಅಲ್ಪ ಪ್ರಮಾಣದ ವಿದ್ಯುತ್‌ ಲೈನ್‌ಗೆ ಬದಲಾಗಿ ಬೃಹತ್‌ ಕಂಬಗಳು ಹಾಗೂ ಲೈನ್‌ ಅಳವಡಿಸಲು ಮುಂದಾಗಿರುವ ಕೆಪಿಟಿಸಿಎಲ್‌ ಕ್ರಮದ ವಿರುದ್ಧ ಹೋರಾಟ ರೂಪಿಸಲು ಅ.4ರಂದು ಸಂಜೆ ತಳಗವಾರದಲ್ಲಿ ಗ್ರಾಮ ಸಭೆ ನಡೆಸಲು ರೈತರು ನಿರ್ಧರಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಅಧ್ಯಕ್ಷ ಪ್ರಸನ್ನ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್‌, ರುದ್ರಪ್ಪ,ವಿಶ್ವನಾಥ್‌, ರೈತರಿಗೆ ಈಗ ಇರುವುದೇ ತುಂಡು ಭೂಮಿ. ಇಂತಹ ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಬೃಹತ್‌ ಗಾತ್ರದ ವಿದ್ಯುತ್‌ ಕಂಬ ಅಳವಡಿಸಿದರೆ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ ಎಂದರು. 

ವಿದ್ಯುತ್‌ ಕಂಬ ಅಳವಡಿಸಲು ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ರೈತರಿಗೆ ಯಾವುದೇ ಮಾಹಿತಿ ನೀಡದೆ ಕಂಬ ಅಳವಡಿಸಲು ಗುಂಡಿ ತೋಡುತ್ತಿರುವುದು ಖಂಡನೀಯ. ಭೂಮಿ ಕಳೆದುಕೊಳ್ಳುವ ರೈತರಿಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ನೀಡದೆ ಹಾಗೂ ರೈತರ ಅನುಮತಿ ಇಲ್ಲದೆ ಜಮೀನಿಗೆ ಪ್ರವೇಶ ಮಾಡುವವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದರು.

‌ವಿದ್ಯುತ್‌ ಇಲ್ಲದೆ ಯಾವುದೇ ಕೆಲಸ ಸಾಧ್ಯ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಅಭಿವೃದ್ಧಿಗೆ ಸಹಕಾರ ಸದಾ ಇರಲಿದೆ. ಆದರೆ, ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡದೆ ಯಾರದೋ ಪ್ರಗತಿಗೆ ನಾವೇಕೆ ತ್ಯಾಗ ಮಾಡಬೇಕು ಎಂದು ಪ್ರಶ್ನಿಸಿರುವ ರೈತರು, ಸೋಮವಾರದಿಂದ ವಿದ್ಯುತ್‌ ಕಂಬ ಅಳವಡಿಕೆಗೆ ಜಮೀನು ಕಳೆದುಕೊಳ್ಳುವ ಗ್ರಾಮಗಳಲ್ಲಿ ಸಭೆ ನಡೆಸಲಾಗುವುದು. ನಂತರ ಒತ್ತಾಯ ಕುರಿತಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕೆಪಿಟಿಸಿಎಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಕೇಳಿಕೊಳ್ಳಲಾಗುವುದು. ಈ ಹಿಂದೆ ತಾಲ್ಲೂಕಿನಲ್ಲಿ ಬೃಹತ್‌ ವಿದ್ಯುತ್‌ ಕಂಬ ಅಳವಡಿಸುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ವೇ ನಡೆಸಿ ಪರಿಹಾರ ನೀಡಲಾಗಿದೆ. ಈ ಬಾರಿಯೂ ನಿಯಮಗಳ ಪ್ರಕಾರ ಪರಿಹಾರ ನೀಡದೆ ಕಂಬ ಅಳವಡಿಕೆಗೆ ಮುಂದಾದರೆ ಅವಕಾಶ ನೀಡದೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು