ಶುಕ್ರವಾರ, ಅಕ್ಟೋಬರ್ 18, 2019
27 °C

ಸ್ವಚ್ಛತಾ ಜಾಗೃತಿ ಮೂಲಕ ಗಾಂಧಿ ಜಯಂತಿ

Published:
Updated:
Prajavani

ದೊಡ್ಡಬಳ್ಳಾಪುರ: ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ವಚ್ಛ ಭಾರತ್ ಅಭಿಮಾನ ಘಟಕದ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನವನ್ನು ಸ್ವಚ್ಛತಾ ಜಾಗೃತಿ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.

ಕ್ಯಾಂಪಸ್ ಆವರಣವನ್ನು ಶುಚಿಗೊಳಿಸಿದ ವಿದ್ಯಾರ್ಥಿಗಳು ಸ್ವಚ್ಛ ಭಾರತ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತದ ಸಂದೇಶವನ್ನು ಸಾರಿದರು. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿರುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಇದಕ್ಕೂ ಮುನ್ನ ನಡೆದ ಮಹಾತ್ಮ ಗಾಂಧೀಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್, ‘ಗಾಂಧಿ ಮಾರ್ಗ ದೇಶದ ಭವಿಷ್ಯದ ದಿಕ್ಸೂಚಿ. ಸರಳ ಸತ್ಯಗಳು ಸಾಮ್ರಾಜ್ಯಗಳಿಗಿಂತ ಹೆಚ್ಚು ಶಕ್ತಿಶಾಲಿ ಎಂದು ನಂಬಿದ್ದ ಗಾಂಧೀಜಿ ಸಾಮಾಜಿಕ ಕ್ರಾಂತಿಗಿಂತಲೂ ಮುಖ್ಯವಾಗಿ ಬದಲಾವಣೆಯ ಬೇರುಗಳನ್ನು ಸಶಕ್ತಗೊಳಿಸಲು ಪ್ರಾಮುಖ್ಯತೆ ನೀಡಿದರು. ಕ್ರೌರ್ಯದಿಂದ ಸತ್ಯವನ್ನು ಪ್ರಚುರಪಡಿಸಲು ಸಾಧ್ಯವಿಲ್ಲ ಎಂದು ನಂಬಿದ್ದ ಗಾಂಧಿ ದೇಶದ ಸಮಗ್ರತೆಯ ಪ್ರತೀಕವಾಗಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‍ಎಸ್‍ಎಸ್ ಅಧಿಕಾರಿ ಡಾ.ಎಂ.ಚಿಕ್ಕಣ್ಣ, ‘ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿಯ ನೇತಾರರಾಗಿ ದೇಶಕ್ಕೆ ದಾಸ್ಯದಿಂದ ಮುಕ್ತಿ ಸಿಗುವಂತೆ ಮಾಡಿದ ಮುಂಚೂಣಿ ನಾಯಕರು. ಸತ್ಯ, ಧರ್ಮ, ಅಹಿಂಸೆಗಳೆಂಬ ತ್ರಿಸೂತ್ರಗಳನ್ನು ಜಗತ್ತಿಗೆ ಕೊಟ್ಟ ದಾರ್ಶನಿಕ’ ಎಂದರು.

ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಸಹಾಯಕ ಅಧಿಕಾರಿ ಕೆ.ದಕ್ಷಿಣಾಮೂರ್ತಿ, ಐಕ್ಯೂಎಸಿ ಸಂಯೋಜಕ ಆರ್.ಉಮೇಶ್, ಸಾಂಸ್ಕೃತಿಕ ಘಟಕದ ಸಂಚಾಲಕ ಸಿ.ಪಿ.ಪ್ರಕಾಶ್, ಸ್ವಚ್ಛ ಭಾರತ ಘಟಕದ ಸಂಯೋಜಕಿ ನಿಶಾತ್ ಸುಲ್ತಾನಾ ಇದ್ದರು.

Post Comments (+)