ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘10 ಪರ್ಸೆಂಟ್‌’ನ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಜಾತಿವಾದಿ ರಾಜಕಾರಣ ಮಾಡುತ್ತಿದೆ: ಮೋದಿ ಟೀಕೆ

Last Updated 8 ಫೆಬ್ರುವರಿ 2018, 8:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಗಳಿಸಲಿದೆ ಎಂಬ ವಿಶ್ವಾಸ ನಮಗಿದೆ. ‘ನವ ಭಾರತ ನಿರ್ಮಾಣ’ಕ್ಕೆ ‘ನವ ಕರ್ನಾಟಕ ನಿರ್ಮಾಣ’ ಮಾಡಬೇಕಿದೆ. ಅದಕ್ಕಾಗಿ ನೀವೆಲ್ಲಾ ಬೆಂಬಲಿಸಬೇಕು’ ಎಂದು ಕನ್ನಡದಲ್ಲೇ ಕರೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನಾಂದಿ ಆಡಿದರು.

ಅರಮನೆ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ 75 ದಿನಗಳ ಕಾಲ ನಡೆದ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಬದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ನದ್ದು 10 ಪರ್ಸೆಂಟ್‌ ಸರ್ಕಾರ. ಕಾಂಗ್ರೆಸ್‌ ಭ್ರಷ್ಟಾಚಾರ, ತುಷ್ಟೀಕರಣ ಮತ್ತು ಜಾತಿವಾದಿ ರಾಜಕಾರಣ ಮಾಡುತ್ತಿದೆ ಎಂದು ಮೋದಿ ಆಪಾದಿಸಿದರು.

ಬಿಜೆಪಿ ಕಾರ್ಯಕರ್ತರ ಹತ್ಯೆ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಾಜನೀತಿಗೆ ವಿರುದ್ಧವಾಗಿದೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಇದಕ್ಕೆ ಉತ್ತರವನ್ನು ಮತದಾರರು ನೀಡಬೇಕಿದೆ ಎಂದು ಮೋದಿ ಅವರು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.

ರೈತರ ಉದ್ಧಾರಕ್ಕೆ ಮೊದಲ ಆದ್ಯತೆ
ಕೇಂದ್ರ ಬಿಜೆಪಿ ಸರ್ಕಾರ ರೈತರ ಉದ್ಧಾರಕ್ಕೆ ಮೊದಲ ಆದ್ಯತೆ ನೀಡಿದೆ. ಹಸರೀಕರಣ, ಕ್ಷೀರ ಕ್ರಾಂತಿ ಆಗಿದೆ. ‘ಆಪರೇಶನ್‌ ಗ್ರೀನ್‌’ ಮೂಲಕ ರೈತರ ಬೆಳೆಗಳಿಗೆ ಕೊಡುಗೆ ನೀಡಿದ್ದೇವೆ ಎಂದು ಮೋದಿ ಅವರು ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ವಿವರಿಸಿದರು.

ಕರ್ನಾಟಕವನ್ನು ಅಪರಾದ, ಭ್ರಷ್ಟಾಚಾರ ಮುಕ್ತ ಮಾಡುವ ಸಮಯ ಬಂದಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಹೆಚ್ಚು ಸಮಯ ಉಳಿದಿಲ್ಲ. ವಂಶ ಪರಂಪರೆ ರಾಜಕಾರಣದಿಂದ ರಾಜ್ಯವನ್ನು ದೂರವಿಡಿ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಿದರೆ, ವಿಭಜನೆ ಕರ್ನಾಟಕದಿಂದ ಮುಕ್ತವಾಗಲಿದೆ ಎಂದರು.

ಬೆಂಗಳೂರಿನಲ್ಲಿ ಸ್ಟೀಲ್‌ ಬ್ರಿಡ್ಜ್ ನಿರ್ಮಾಣ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲು ಹೊರಟಿದ್ದರು ಎಂದು ಆಪಾದಿಸಿದ ಅವರು, ನಿರ್ವಸತಿಕರಿಗೆ ಮನೆ ನಿರ್ಮಿಸಿಕೊಡುವಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಆದರೆ, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮೂಲಕ ಲಕ್ಷಾಂತರ ಜನರಿಗೆ ಆಶ್ರಯ ಒದಗಿಸಿದೆ ಎಂದು ಹೇಳಿದರು.

ಮೋದಿ ಭಾಷಣದ ಸಾರ...

‘ಕರ್ನಾಟಕ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲವೆಂದು ಕೇಳಿದ್ದೇನೆ. ಇಲ್ಲಿ ಬಿಲ್ಡರ್ ಮಾಫಿಯಾ, ವರ್ಗಾವಣೆ ಮಾಫಿಯಾ, ಮರಳು ಮಾಫಿಯಾದವರ ರಾಜ್ಯಭಾರ (ನಂಗಾ ನಾಚ್) ನಡೆಯುತ್ತಿದೆ ಎಂದು ಮೋದಿ ಆಪಾದಿಸಿದರು.

‘ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಿಸಿ ಸಾವಿರಾರು ಕೋಟಿ ರೈಪಾಯಿ ಕಬಳಿಸಲು ಕಾಂಗ್ರೆಸ್ ನವರು ಯೋಚಿಸಿದ್ದರು. ನಮ್ಮ ಪಕ್ಷ ಅದನ್ನು ವಿರೋಧಿಸಿ, ಹಣ ಮತ್ತು ಪರಿಸರವನ್ನು ಉಳಿಸಿತು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧಿಗಳು ರಾಜಾರೋಷವಾಗಿ ಓಡಾಡುತ್ತಾರೆ. ಇಲ್ಲಿ ನಿಶ್ಚಿಂತ ಜೀವನಕ್ಕಿಂತ (ಈಝಿ ಆಫ್ ಲಿವೀಂಗ್) ಕೊಲೆಗಳನ್ನು ಮಾಡುವುದು ಸುಲಭ (ಈಝಿ ಆಫ್ ಡೂಯಿಂಗ್ ಮರ್ಡರ್). ಸೈದ್ಧಾಂತಿಕ ವಿರೋಧಿಗಳನ್ನು ಇಲ್ಲಿ ಮುಗಿಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಹತ್ಯೆಗಳು ಅಗುತ್ತಿವೆ. ಇದಕ್ಕೆ ತಕ್ಕ ಉತ್ತರ ನೀಡಬೇಕು. ಇಂತಹ ಸ್ಥಿತಿ ನಿರ್ಮಾಣ ಆಗಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.

‘ಭ್ರಷ್ಟಾಚಾರ, ವಂಶವಾದ, ಓಲೈಕೆ ಮತ್ತು ಒಡೆದು ಆಳುವ ನೀತಿಗಳು ಕಾಂಗ್ರೆಸ್‌ ಸಂಸ್ಕೃತಿಯ ಲಕ್ಷಣಗಳು. ರಾಜ್ಯವನ್ನು ಇವುಗಳಿಂದ ಮುಕ್ತವಾಗಿಸಲು ನಮ್ಮೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

‘ಇಲ್ಲಿನ ಆಡಳಿತ ಪಕ್ಷ ತನ್ನ ಮತ್ತು ತನ್ನ ದಳದ ಹಿತವನ್ನು ಮಾತ್ರ ಕಾಯುತ್ತಿದೆ. ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನೀಡಿದ ₹ 2 ಲಕ್ಷ ಕೋಟಿ ಅನುದಾನದ ಅಭಿವೃದ್ಧಿ ಕಾರ್ಯಗಳು ನಿಮಗೆ ಕಾಣುತ್ತಿವೆಯೇ? ಎಂದ ಅವರು, ಅನುದಾನ ಬಡವರಿಗೆ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇಲ್ಲಿನ ಸರ್ಕಾರಕ್ಕೆ ಬಡ ಜನರ ಬಗ್ಗೆ ಚಿಂತೆ ಇಲ್ಲ. ಕೇಂದ್ರ 3.64 ಲಕ್ಷ ಮನೆಗಳು ಕಟ್ಟಲು ಅನುದಾನ ನೀಡಿತು. ಅದರಲ್ಲಿ ಕೇವಲ 38 ಸಾವಿರ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇಂತಹ ನಿಧಾನಗತಿಯ ಸರ್ಕಾರ ನಿಮಗೆ ಬೇಕೇ?, ಅದನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.

‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ₹ 836 ಕೋಟಿ ನೀಡಿದ್ದೇವೆ. ಅದರಲ್ಲಿ ಕೇವಲ ₹ 143 ಕೋಟಿ ಕೆಲಸ ಆರಂಭವಾಗಿದೆ. ಉಳಿದದ್ದು ಖಜಾನೆಯಲ್ಲಿ ಕೊಳೆಯುತ್ತಿದೆ ಎಂದರು.

‘ಇಡೀ ದಕ್ಷಿಣ ಭಾರತದ ರಾಜ್ಯಗಳಲ್ಲಿ, ಕರ್ನಾಟಕ ಆರೋಗ್ಯ ಕ್ಷೇತ್ರಕ್ಕೆ ಅತಿ ಕಡಿಮೆ ಅನುದಾನ ಮೀಸಲಿಡುತ್ತಿದೆ. ನಾವು ಪರಿಚಯಿಸಿದ ಆಯುಷ್ಮಾನ್ ಯೋಜನೆಯಿಂದ ಪ್ರತಿಯೊಬ್ಬರಿಗೂ ₹5 ಲಕ್ಷದವರೆಗೆ ಆರೋಗ್ಯ ವಿಮೆ ಸಿಗಲಿದೆ.

‘ಜಾತಿವಾದ, ವಂಶವಾದದ ಕಾಂಗ್ರೆಸ್ ಬಿಟ್ಟು ಬಡವರ, ದಲಿತರ, ಮಹಿಳೆಯರ, ಮಕ್ಕಳ ಮತ್ತು ಯುವಕರ ಶ್ರೆಯೋಭಿವೃದ್ಧಿಗೆ ದೂರದೃಷ್ಟಿ ಇರುವ ಬಿಜೆಪಿಯನ್ನು ಬೆಂಬಲಿಸಿ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷವಿದ್ದರೆ ಅಭಿವೃದ್ಧಿ ವೇಗವಾಗಿ ಆಗುತ್ತದೆ ಎಂದು ಮೋದಿ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT