ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸಕ್ಕೆ ಸಿಹಿ ಇರಲಿ, ಪರಿಸರವೂ ಉಳಿಯಲಿ

ಪರಿಸರಕ್ಕೆ ಮಾರಕವಾಗುವ ಪಟಾಕಿ ಮಾರಾಟ ನಿಷೇಧವೇ ಸೂಕ್ತ– ಜನಾಭಿಪ್ರಾಯ; ಈಗ ನಿಷೇಧಿಸಿದರೆ ಆರ್ಥಿಕ ನಷ್ಟ– ಮಾರಾಟಗಾರರು
Last Updated 12 ನವೆಂಬರ್ 2020, 6:58 IST
ಅಕ್ಷರ ಗಾತ್ರ

ದೇವನಹಳ್ಳಿ: ಜೀವ ಸಂಕುಲಗಳಿಗೆ ಮಾರಕವಾಗಿರುವ ಪರಿಸರ ಮಾಲಿನ್ಯ ತಡೆಗೆ ಪಟಾಕಿ ಮಾರಾಟ ನಿಷೇಧವೇ ಸೂಕ್ತ ಕ್ರಮ ಎಂಬುದು ಸ್ಥಳೀಯರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯ.

ಪರಿಸರ ಮಾಲಿನ್ಯದ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ 2018ರಲ್ಲಿ ಸುಪ್ರೀಂ ಕೋರ್ಟ್‌ ದೇಶದಾದ್ಯಂತ ಪಟಾಕಿ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಲು ಸಲ್ಲಿಸಲಾಗಿದ್ದ ಮನವಿಗೆ ಸ್ಪಂದಿಸಿ ತೀರ್ಪು ನೀಡಿದ್ದ ದ್ವಿಸದಸ್ಯ ಪೀಠ, ಕೆಲವು ಷರತ್ತಿನ ಅವಕಾಶ ನೀಡಿತ್ತು. ಹಾನಿಕಾರಕ ರಾಸಾಯನಿಕ ಪಟಾಕಿ ಆಗಿಬಾರದು, ಕನಿಷ್ಠ ಮಾಲಿನ್ಯವನ್ನೂ ಉಂಟು ಮಾಡುವ ಪಟಾಕಿಯನ್ನು ಉತ್ಪಾದಿಸಿ ಮಾರಾಟ ಮಾಡುವಂತೆ ಸಲಹೆ ನೀಡಿತ್ತು. ಆದರೂ ಉತ್ಪಾದನೆ ಮತ್ತು ಮಾರಾಟ ಎಗ್ಗಿಲ್ಲದೆ ನಡೆದಿದ್ದವು. ಪಟಾಕಿ ನಿಷೇಧ ಮತ್ತು ಕಠಿಣ ನಿಯಮಗಳ ಪಾಲನೆ ಎಂಬುದು ದೀಪಾವಳಿ ಹಬ್ಬದ ಹತ್ತಿರದ ದಿನಗಳಲ್ಲಿ ಚರ್ಚೆಗೆ ಬರುತ್ತದೆ. ಸರ್ಕಾರ ನಾಲ್ಕೈದು ತಿಂಗಳ ಮೊದಲೇ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಯ.

ರಾಸಾಯನಿಕ ಬಳಕೆ ಮಾಡಲೇಬೇಕು: ಕೊರೊನಾ ಸೋಂಕಿನ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ
ಸಾಧ‍್ಯತೆ ಇರುವುದರಿಂದ ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಲಾಗುವುದೆಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಸಂಜೆ ವೇಳೆಗೆ ಹಸಿರು ಪಟಾಕಿಗೆ ಅವಕಾಶ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಸಿರು ಪಟಾಕಿಗಳು ಇತರೆ ಪಟಾಕಿಗಳಲ್ಲಿ ವ್ಯತ್ಯಾಸಗೊತ್ತಿಲ್ಲ. ಯಾವುದೇ ಪಟಾಕಿ ಸಿಡಿಯಬೇಕಾದರೆ ರಾಸಾಯನಿಕ ಬಳಕೆ ಮಾಡಲೇಬೇಕು. ಪಟಾಕಿ ಸಂಪೂರ್ಣ ನಿಷೇಧದ ಬದಲು ಹಸಿರು ಪಟಾಕಿ ಎಂಬುದನ್ನು ಮುಂಚೂಣಿಗೆ ತಂದು ಹಾನಿಕಾರಕಕ್ಕೆ ಸರ್ಕಾರವೇ ಎಡೆ ಮಾಡಿಕೊಟ್ಟಾಂತಾಗಿದೆ ಎಂಬುದು ಪರಿಸರಪ್ರೇಮಿಗಳ ಆಕ್ರೋಶ.

‘ಪ್ರಸ್ತುತ ವರ್ಷದ ದೀಪಾವಳಿ ಹಬ್ಬಕ್ಕೆ ಉತ್ಪಾದನೆಯಾಗಿರುವ ಪಟಾಕಿಗಳು ಈಗಾಗಲೇ ಮಾರಾಟ ಕೇಂದ್ರಗಳಿಗೆ ತಲುಪಿ ದಾಸ್ತಾನುಗೊಂಡಿವೆ. ವಾರ್ಷಿಕ ಬೆಳಕಿನ ಹಬ್ಬಕ್ಕೆಂದೇ ಪಟಾಕಿ ಚೀಟಿ ಮಾಲಿಕರು ತಮ್ಮ ಗ್ರಾಹಕರಿಗೆ ಪಟಾಕಿ ಬಾಕ್ಸ್ ವಿತರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಸಿರು ಪಟಾಕಿ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ಈಗ ನೀಡಿದರೆ ಪ್ರಯೋಜನವೇನು? ಆರೇಳು ತಿಂಗಳಿಂದ
ಉತ್ಪಾದನೆ ಮಾಡಿರುವ ನೂರಾರು ಕೋಟಿ ಮೌಲ್ಯದ ಪಟಾಕಿಗಳ ಗತಿಏನು? ಕನಿಷ್ಠ ಒಂದೆರಡು ತಿಂಗಳು ಮೊದಲೇ ಸರ್ಕಾರದ ಸ್ಪಷ್ಟ ನಿಲವು ಪ್ರಕಟಿಸಿದ್ದರೆ, ಕನಿಷ್ಠ ಶೇ 50ರಷ್ಟು ರಾಸಾಯನಿಕಯುಕ್ತ ಪಟಾಕಿ ಮಾರಾಟ ಕಡಿಮೆಯಾಗುತ್ತಿತ್ತು. ಸರ್ಕಾರಕ್ಕೆ ಪರಿಸರದ ಕಾಳಜಿ ಇಲ್ಲ’ ಎನ್ನುತ್ತಾರೆ ರಾಧಾಕೃಷ್ಣ.

ವಾರ್ಷಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವಾಹನಗಳ ಬಳಕೆಯಿಂದ ಪರಿಸರದಲ್ಲಿ ವಾಯು ಮತ್ತು ಶಬ್ದಮಾಲಿನ್ಯ ಹೆಚ್ಚುತ್ತಿದೆ. ಕಾರ್ಖಾನೆಗಳ ರಾಸಾಯನಿಕಯುಕ್ತ ತ್ಯಾಜ್ಯದಿಂದ ಜಲ ಮತ್ತು ಪರಿಸರ ಕಲುಷಿತಗೊಳ್ಳುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ, ಪರ್ಯಾಯ ಪರಿಸರ ರಕ್ಷಣೆ ಇಲ್ಲದೆ ತಾಪಮಾನ ಹೆಚ್ಚುತ್ತಲೇ ಇದೆ. ಭವಿಷ್ಯದ ದೃಷ್ಟಿಯಿಂದ ಪಟಾಕಿ ಸಂಪೂರ್ಣ ನಿಷೇಧದಂತಹ ಕಠಿಣ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕಿತ್ತು ಎನ್ನುತ್ತಾರೆ ಪರಿಸರವಾದಿ ಶಿವನಾಪುರ ರಮೇಶ್.

ಆರೇಳು ತಿಂಗಳಿಂದ ಕೊರೊನಾ ಸೋಂಕು ಭೂತದ ನೆರಳಿನಂತೆ ಕಾಡುತ್ತಿದೆ. ಯಾವ ಸಂದರ್ಭದಲ್ಲಿ ಸೋಂಕು ಅಂಟಿಕೊಳ್ಳಲಿದೆ ಎಂಬುದೇ ಅರ್ಥವಾಗುತ್ತಿಲ್ಲ. ರಾಸಾಯನಿಕ ಪಟಾಕಿ ಸುಡುವುದರಿಂದ ಅನೇಕ ರೋಗಗಳನ್ನು ಆಹ್ವಾನಿಸಿದಂತಾಗುತ್ತದೆ. ಶಬ್ದದಿಂದ ಹೃದಯಾಘಾತ, ರಕ್ತದೊತ್ತಡ, ಆಸ್ತಮಾ ರೋಗಗಳು ಉಲ್ಬಣಗೊಳ್ಳುತ್ತದೆ. ವಾರ್ಷಿಕವಾಗಿ ದೇಶದಲ್ಲಿ ಸಾವಿರಾರು ಮಕ್ಕಳು ದೃಷ್ಟಿದೋಷ, ಅಂಗಾಂಗ ಕಳೆದುಕೊಳ್ಳುತ್ತಿದ್ದಾರೆ. ಪಟಾಕಿ ಸಿಡಿಸಿದರೆ ಮಾತ್ರ ದೀಪಾವಳಿ ಹಬ್ಬವಲ್ಲ. ಮಣ್ಣಿನ ಹಣತೆ ಹಚ್ಚಿ ಸಿಹಿ ಸವಿದು ಸಾರ್ಥಕ ದೀಪಾವಳಿ ಆಚರಿಸಬಹುದು. ನಿಮಿಷದ ಪಟಾಕಿ ಸಿಡಿತಕ್ಕೆ ಜೀವನವೆಲ್ಲ ನರಕಯಾತನೆ ಯಾಕೆ ಬೇಕು? ಸರ್ಕಾರದ ಕ್ರಮ ಏನೇ ಇರಲ್ಲಿ ನಾವು ನಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಕರ್ನಾಟಕ ಬಹುಜನ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ನರಸಿಂಹ.

ಕಳೆದ ಮೂರು ವರ್ಷಗಳಿಂದ ಯಾವುದೇ ಪಟಾಕಿ ಮಾರಾಟ ಮಾಡುತ್ತಿಲ್ಲ. ಪುರಸಭೆ ಅನುಮತಿಯನ್ನು ನೀಡುತ್ತಿಲ್ಲ. ಹಸಿರು ಪಟಾಕಿ ಎಂದರೆ ಏನು ಎಂಬುದು ಗೊತ್ತಿಲ್ಲ ಎಂದು ಪಟಾಕಿ ಮಾರಾಟಗಾರ ಬಾಬು ಅಸಹಾಯಕತೆ ವ್ಯಕ್ತಪಡಿಸಿದರು.

ಕಳೆದ ವರ್ಷ ತಮಿಳುನಾಡಿನ ಹೊಸೂರಿಗೆ ಹೋಗಿ ಪಟಾಕಿ ಖರೀದಿ ಮಾಡಿದ್ದೆವು. ಈ ಬಾರಿ ಸರ್ಕಾರ ಪಟಾಕಿ ಸಿಡಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ ಎಂದು ಆದೇಶ ಮಾಡಿದಯಂತೆ. ಇದರಿಂದ ಈ ಬಾರಿ ಪಟಾಕಿ ಇಲ್ಲದೆ ದೀಪಾವಳಿ ಆಚರಿಸುತ್ತಿದ್ದೇವೆ. ದೇವನಹಳ್ಳಿ ನಗರದಲ್ಲಿ ಯಾವುದೇ ಪಟಾಕಿ ಅಂಗಡಿಗಳಿಲ್ಲ ಎಂದು ದೇವನಹಳ್ಳಿ ನಿವಾಸಿ ಮಂಜುಳಾದೇವಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT