ಗುರುವಾರ , ನವೆಂಬರ್ 21, 2019
21 °C
ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಡಾ.ಸಿ.ರಂಗರಾಜನ್ ಅಭಿಮತ

ಕೃಷಿ ನಿರ್ಲಕ್ಷ್ಯದಿಂದ ಆರ್ಥಿಕ ಅಸಮತೋಲನ: ಆರ್‌ಬಿಐ ನಿವೃತ್ತ ಗವರ್ನರ್‌ ರಂಗರಾಜನ್‌

Published:
Updated:
Prajavani

ದೇವನಹಳ್ಳಿ: ‘ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿ ವಿದೇಶಿ ಉತ್ಪನ್ನಗಳ ಮಾರುಕಟ್ಟೆಗೆ ಅವಕಾಶ ಮಾಡಿಕೊಡುತ್ತಿರುವುದರಿಂದ ದೇಶದಲ್ಲಿ ಆರ್ಥಿಕ ಅಸಮತೋಲನಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ರೈತಪರ ಯೋಜನೆಗಳನ್ನು ರೂಪಿಸಿ ಬ್ಯಾಂಕಿಂಗ್ ಸೇವೆ ಮೂಲಕ ಸಹಕಾರ ನೀಡಬೇಕು’ ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಡಾ.ಸಿ.ರಂಗರಾಜನ್ ಹೇಳಿದರು.

ಇಲ್ಲಿನ ಕ್ಲಾರ್ಕ್ ಎಕ್ಸಾಟಿಕ ಕನ್ವೆನ್ಷನ್ ರೆಸಾರ್ಟ್ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ‘ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸ್ವಸಹಾಯ ಸಂಘಗಳ ಹೆಜ್ಜೆ’ ಅಂತರರಾಷ್ಟ್ರೀಯ ಸಮ್ಮೇಳನದ 3ನೇ ದಿನದ ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪುಗಳ ಸಬಲೀಕರಣ ಮತ್ತು ಹಣಕಾಸಿನ ವಹಿವಾಟುಗಳು ವಿಷಯ ಕುರಿತು ನಡೆದ ಚರ್ಚೆ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.

‘ಬ್ಯಾಂಕಿಂಗ್ ವ್ಯವಸ್ಥೆ, ಕೃಷಿ, ಗುಡಿಕೈಗಾರಿಕೆ, ಸಹಕಾರ ಸಂಘಗಳು ಸಮನ್ವಯತೆಯಿಂದ ಸಾರ್ವಜನಿಕ ಸಹಭಾಗಿತ್ವದಲ್ಲಿ ವಿಶ್ವಾಸ ಮೂಡಿಸಬೇಕು. 1969ರಿಂದ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆ ಆರಂಭಗೊಂಡಿದೆ. ಬ್ಯಾಂಕ್‌ಗಳು ತಮ್ಮದೆ ಒಂದು ಗುರಿ ಇಟ್ಟುಕೊಂಡು ಗ್ರಾಹಕರಿಗೆ ಸ್ಪಂದಿಸಬೇಕು. ಒಂದು ಬ್ಯಾಂಕ್ ಅಳವಡಿಸಿಕೊಂಡ ಮಾನದಂಡವನ್ನೆ ಇನ್ನೊಂದು ಬ್ಯಾಂಕ್ ಅಳವಡಿಸಿಕೊಂಡಾಗ ವ್ಯತ್ಯಾಸ ಇರುವುದಿಲ್ಲ. ಕೇಂದ್ರ ಬ್ಯಾಂಕ್‌ನ ನಿಯಮ ಪಾಲಿಸಿದರೂ ಸ್ಥಳೀಯ ಬ್ಯಾಂಕ್‌ಗಳು ಸ್ಥಳೀಯರ ಅನುಕೂಲತೆ ಬಗ್ಗೆ ಚಿಂತಿಸಿ ಸಾಲ ನೀಡಬೇಕಾಗುತ್ತದೆ. ಇದಕ್ಕೆ ಖಾಸಗಿ ಬ್ಯಾಂಕ್‌ಗಳು ಹೊರತಲ್ಲ’ ಎಂದು ಹೇಳಿದರು.

‘ಕೃಷಿ, ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆ ಉತ್ಪನ್ನಗಳು ಹೆಚ್ಚಾಗಬೇಕು. ದೇಸಿ ಮಾರುಕಟ್ಟೆ ಬಲಗೊಳ್ಳಬೇಕು. ಕೃಷಿ ಇತರ ಉತ್ಪನ್ನಗಳು ಕಡಿಮೆಯಾದರೆ ಆರ್ಥಿಕ ವ್ಯವಸ್ಥೆ ಸಮತೋಲನ ಕಾಯ್ದುಕೊಳ್ಳಲು ಕಷ್ಟವಾಗಲಿದೆ. ಸ್ವಯಂ ಉತ್ಪಾದನೆಯ ಜೊತೆಗೆ ರೈತರಿಗೆ ಮಾರಾಟದ ವ್ಯವಸ್ಥೆ ಕಲ್ಪಿಸಬೇಕು. ಬೇಡಿಕೆ ಮತ್ತು ಪೂರೈಕೆ ನಡುವೆ ಸಮಾನಅಂತರ ಕಾಯ್ದುಕೊಳ್ಳಬೇಕು. ಅಂತರ ರಾಜ್ಯ ಸರಕು ಸಾಗಾಣಿಕೆ ಮತ್ತು ವಹಿವಾಟುಗಳಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಪರಸ್ಪರ ವಿಶ್ವಾಸ ಮೂಡಿಸಬೇಕು’ ಎಂದರು. 

ರಿಸರ್ವ್ ಬ್ಯಾಂಕ್‌ನ ಅಭಿವೃದ್ಧಿ ಸಂಶೋಧನ ತಾಂತ್ರಿಕ ಅಧಿಕಾರಿ ಪ್ರೊ.ಎಸ್.ಶ್ರೀರಾಮ್, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಯೋಜನೆ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಇದ್ದರು.

ಪ್ರತಿಕ್ರಿಯಿಸಿ (+)