‘ಭವ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿ’

7
ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾರ್ಯಕ್ರಮ

‘ಭವ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿ’

Published:
Updated:
Deccan Herald

ಆನೇಕಲ್: ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿ ಹುತಾತ್ಮರಾದ ಮಹಾನ್ ಚೇತನಗಳನ್ನು ಸ್ಮರಿಸುವ ಮೂಲಕ ಅವರ ಕನಸುಗಳನ್ನು ನನಸು ಮಾಡುವ ದಿಸೆಯಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸಮಾಡಿ ಭವ್ಯ ಭಾರತವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಅವರು ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಎಂಬುದು ಸಹಸ್ರಾರು ದೇಶಭಕ್ತರ ಹೋರಾಟದ ಫಲ. ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡು ಸ್ವಾತಂತ್ರ್ಯ ಪಡೆದ ಸಂಭ್ರಮದ ದಿನವನ್ನು ಎಲ್ಲರೂ ಮನೆಯ ಹಬ್ಬವಾಗಿ ಆಚರಿಸುವ ಮೂಲಕ ದೇಶಭಕ್ತಿಗೆ ಸಾಕ್ಷಿಯಾಗಬೇಕು ಎಂದರು.

ಭಾರತದ ಅಭಿವೃದ್ಧಿಗೆ ಅಡ್ಡಿಯಾಗಿರುವ ನಿರುದ್ಯೋಗ, ಅನಕ್ಷರತೆ, ಮೂಢನಂಬಿಕೆ, ಭಯೋತ್ಪಾದನೆ, ಅಸಮಾನತೆಹೋಗಲಾಡಿಸಲು ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅವರ ಜೀವನದ ಭಾಗವನ್ನಾಗಿ ಮಾಡಿಕೊಂಡು ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಹಬ್ಬಗಳನ್ನು ರಚನಾತ್ಮಕ ಚಟುವಟಿಕೆಗಳ ಮೂಲಕ ಆಚರಿಸಬೇಕು. ರಕ್ತದಾನ, ಸ್ವಚ್ಛತೆ, ಸಸಿ ನೆಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ಅವಶ್ಯಕತೆಯಿದೆ ಎಂದರು.

‘ಎರಡನೇ ಬಾರಿಗೆ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ನನಗೆ ಹೆಚ್ಚಿನಜವಾಬ್ದಾರಿ ನೀಡಿದ್ದಾರೆ. ಕಳೆದ ಅವಧಿಗಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅವರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಲು ಸಂಕಲ್ಪ ಮಾಡಿದ್ದೇನೆ’ ಎಂದರು.

ಆನೇಕಲ್ ಕ್ರೀಡಾಂಗಣ ಅಭಿವೃದ್ಧಿಗೆ ₹5 ಕೋಟಿ ಅನುದಾನ ಮಂಜೂರಾಗಿದೆ. ಹೊಸ ಮಾಧ್ಯಮಿಕ ಶಾಲೆಯ ಮೈದಾನವನ್ನು ವಿಸ್ತರಿಸಿ ಕ್ರೀಡಾಂಗಣವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಉದ್ಯೋಗ ಮೇಳಗಳ ಮೂಲಕನಿರುದ್ಯೋಗ ನಿವಾರಣೆಗೆ ಶ್ರಮಿಸಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದರು.

ತಹಶೀಲ್ದಾರ್ ಸಿ.ಮಹದೇವಯ್ಯ ಧ್ವಜಾರೋಹಣ ನೆರವೇರಿಸಿ ಸಂದೇಶನೀಡಿದ ಅವರು, ವ್ಯಕ್ತಿ ಸ್ವಾಭಿಮಾನಿಯಾಗಿ ಜೀವಿಸಬೇಕಾದರೆ ಸ್ವಾತಂತ್ರ್ಯ ಅವಶ್ಯಕ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ದಾಸ್ಯದಿಂದ ಭಾರತೀಯರು ಬಳಲಿದ್ದರು ಎಂದರು.

‘ದಾಸ್ಯದಿಂದ ಬಿಡುಗಡೆಯಾಗಲು ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸಿದರು. ಸ್ವಾತಂತ್ರ್ಯ ಪಡೆದ ನಂತರ ಭಾರತ ವಿಶ್ವದಲ್ಲಿಯೇ ಶಕ್ತಿಯಾಗಿ ಬೆಳೆದಿದೆ. ಈ ಸ್ವಾತಂತ್ರ್ಯವನ್ನು ಜೋಪಾನ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.

ಪುರಸಭಾ ಅಧ್ಯಕ್ಷ ಪಿ.ಶಂಕರ್‌ಕುಮಾರ್ ಮಾತನಾಡಿ, ಆನೇಕಲ್ ಪಟ್ಟಣವನ್ನು ಮಾದರಿ ಪುರಸಭೆಯನ್ನಾಗಿ ಮಾಡಲು ಎಲ್ಲರ ಸಹಕಾರದಿಂದ ಶ್ರಮಿಸಲಾಗುವುದು. ಶಾಸಕರು ಆನೇಕಲ್‌ಗೆ ಹೆಚ್ಚಿನ ಅನುದಾನ ನೀಡಿದ್ದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ನಾರಾಯಣ್, ಉಪಾಧ್ಯಕ್ಷೆ ಚಂದ್ರಕಲಾ ಮುನಿರಾಜು, ಸದಸ್ಯರಾದ ಪುಷ್ಪರಾಜು, ಶಂಕರ್‌ರೆಡ್ಡಿ, ಪುರಸಭಾ ಉಪಾಧ್ಯಕ್ಷೆ ರೇಣುಕಾ ಮಲ್ಲಿಕಾರ್ಜುನ್, ಸದಸ್ಯರಾದ ಬಿ.ಮಲ್ಲಿಕಾರ್ಜುನ್, ಮುನಾವರ್, ಚಂದ್ರಿಕಾ ಹನುಮಂತರಾವ್, ಜಯಲಕ್ಷ್ಮೀಮುನಿರಾಜು, ಪವಿತ್ರ ರಘು, ಸವಿತಾ ಶ್ರೀನಿವಾಸ್, ರೇಣುಕಾ ಶೇಷಾದ್ರಪ್ಪ, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ.ಗೋಪಾಲ್, ವಿಶೇಷ ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಟಿ.ಕೆ.ರಮೇಶ್, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಹಾಜರಿದ್ದರು.

ತುಂತುರು ಮಳೆಯ ನಡುವೆ ವಿದ್ಯಾರ್ಥಿಗಳು ದೇಶಪ್ರೇಮ ಬಿಂಬಿಸುವ ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಧ್ವಜಾರೋಹಣದ ನಂತರ ಆಕರ್ಷಕ ಪಥಸಂಚಲನ ನಡೆಸಿದರು. ಇತ್ತೀಚಿಗೆ ನಿಧನರಾದ ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಅಶ್ವಥ್‌ನಾರಾಯಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !