ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಚಯ ಸ್ಥಳ: ತಾತ್ಸಾರ ಬೇಡ: ಡಾ.ನೆಲ್ಲುಕುಂಟೆ ವೆಂಕಟೇಶಯ್ಯ

Last Updated 21 ಅಕ್ಟೋಬರ್ 2021, 6:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ವಸಾಹತುಶಾಹಿ ಆಡಳಿತ ನಮ್ಮೊಳಗೆ ಬೆಳೆಸಿದ ಕೀಳರಿಮೆಯಿಂದಾಗಿ ನಮ್ಮ ಇತಿಹಾಸವನ್ನೇ ಮರೆತಿದ್ದೇವೆ. ನಮ್ಮ ಸುತ್ತಲಿನ ಪರಿಚಯದ ಸ್ಥಳಗಳ ಬಗ್ಗೆ ಸದಾ ನಮಗೆ ತಾತ್ಸಾರ. ಹೀಗಾಗಿಯೇ ನಿಖರವಾದ ಇತಿಹಾಸ ತಿಳಿಯುವುದು ಕಷ್ಟವಾಗುತ್ತಿದೆ’ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ‘ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತಿಹಾಸದ ಪ್ರತಿ ಹೆಜ್ಜೆಯಲ್ಲೂ ರಾಜಕೀಯ ಇದ್ದೇ ಇರುತ್ತದೆ. ಇಂದು ಹಲವಾರು ದೇಶಗಳು ತಮ್ಮ ಹಿಂದಿನ ಸಂಸ್ಕೃತಿಯನ್ನು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿವೆ. ಚರಿತ್ರೆಯನ್ನು ದಾಖಲಿಸುವಾಗ ವಿಮರ್ಶಾತ್ಮಕತೆ ಇಲ್ಲದೇ ಇದ್ದರೆ ರಕ್ತಪಾತಗಳಿಗೆ ಕಾರಣವಾಗಲಿದೆ
ಎಂದರು.

ಆಧುನಿಕ ಬದುಕಿನ ವೇಗದಲ್ಲಿ ಜನ ಮಾನಸದಲ್ಲಿ ಇರುವ ನಮ್ಮೂರಿನ ಹೆಸರಿನ (ಸ್ಥಳ ನಾಮಗಳ) ಇತಿಹಾಸವನ್ನೇ ಮರೆಯುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಥಳ ನಾಮಗಳ ಇತಿಹಾಸದ ದಾಖಲೆ ಶ್ಲಾಘನೀಯ. ಆದರೆ, ಸ್ಥಳ ನಾಮಗಳ ದಾಖಲೆ ಸಂದರ್ಭದಲ್ಲಿ ಹೇಳಿಕೆಯಾಗಿ ಬರೆಯದೆ ಹಲವಾರು ಆಯಾಮಗಳ ರೂಪದಲ್ಲಿ ಪರಿಶೀಲನೆಯ ಅಗತ್ಯವಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ.ಎಂ. ಜಮುನಾ ಮಾತನಾಡಿ, ಇತಿಹಾಸದ ಪುಸ್ತಕ ಬರೆಯುವಲ್ಲಿ ಕ್ಷೇತ್ರಾಧ್ಯಯನವೇ ಪ್ರಮುಖವಾಗಿದೆ. ಪ್ರತಿ ಗ್ರಾಮಗಳ ಹೆಸರಿಗೂ ಒಂದೊಂದು ಇತಿಹಾಸದ ಹಿನ್ನೆಲೆ ಇರಲಿದೆ. ಆದರೆ, ಬ್ರಿಟಿಷರ ಆಡಳಿತ ಪ್ರಾರಂಭವಾದ ನಂತರ ಅವರು ತಮ್ಮ ವ್ಯಾಪಾರದ ದೃಷ್ಟಿಯಿಂದ ಅನುಕೂಲಕ್ಕೆ ತಕ್ಕಂತೆ ಸ್ಥಳ ನಾಮಗಳನ್ನು ಸೂಚಿಸುತ್ತ ಈ ಹಿಂದಿನ ಹೆಸರುಗಳನ್ನು ಅಳಿಸುತ್ತ ಹೋಗಿರುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಚಿಂತಕ ಯೋಗೇಶ್‌ ಮಾಸ್ಟರ್ ಮಾತನಾಡಿ, ಇತಿಹಾಸ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲಾ ರೀತಿಯ ಅಧ್ಯಯನಗಳು ಸಹ ಜನಸಾಮಾನ್ಯರಿಗೆ ತಲುಪಿಸುವ ಕೆಲಸವಾಗಬೇಕು. ಅದು ವಿಶ್ವ ವಿದ್ಯಾಲಯಗಳಲ್ಲಿನ ಬೌದ್ಧಿಕ ವಲಯಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು.

ಪುಸ್ತಕದ ಲೇಖಕ ಡಾ.ಎಸ್‌. ವೆಂಕಟೇಶ್‌ ಮಾತನಾಡಿ, ‘ನಾನು ಬರೆದಿರುವುದೇ ಅಂತಿಮವಲ್ಲ. ನನ್ನ ಗ್ರಹಿಕೆಗೆ ಬಂದಿರುವ ಸಂಗತಿಗಳನ್ನು ಅಧ್ಯಯನದ ಮೂಲಕ ಓದುಗರ ಮುಂದಿಡಲಾಗಿದೆ’ ಎಂದರು.

ಶಾಸನ ತಜ್ಞ ಡಾ.ಎಚ್.ಎಸ್. ಗೋಪಾಲರಾವ್ ಅಧ್ಯಕ್ಷತೆವಹಿಸಿದ್ದರು. ಸಮಾರಂಭದಲ್ಲಿ ಚಿತ್ರ ಸಾಹಿತಿ ಜಗನ್ನಾಥ್‌ ಪ್ರಕಾಶ್‌, ಶಾಸನ ತಜ್ಞ ನರಸಿಂಹಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT