ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಕಾರಾಗೃಹದಲ್ಲಿ ಕನ್ನಡ ದೀಪ

ತಾಲ್ಲೂಕು ಕನ್ನಡ ಕಲಾವಿದರ ಸಂಘದಿಂದ ಆಯೋಜನೆ
Last Updated 8 ಸೆಪ್ಟೆಂಬರ್ 2022, 7:11 IST
ಅಕ್ಷರ ಗಾತ್ರ

ವಿಜಯಪುರ (ಬೆಂ.ಗ್ರಾಮಾಂತರ): ತಾಲ್ಲೂಕು ಕನ್ನಡ ಕಲಾವಿದರ ಸಂಘದಿಂದ ಮಂಗಳವಾರ ಕೋರಮಂಗಲ ಬಯಲು ಕಾರಾಗೃಹದಲ್ಲಿ ಕನ್ನಡ ದೀಪ ಕಾರ್ಯಕ್ರಮ ನಡೆಯಿತು.

ಕಾರಾಗೃಹದ ಕೈದಿಗಳು ಕಲಾವಿದರೊಟ್ಟಿಗೆ ಜೋಗದ ಸಿರಿ ಬೆಳಕಿನಲ್ಲಿ..., ಒಳಿತು ಮಾಡು ಮನುಷ ಇರೋದೆ ಮೂರು ದಿವಸ. ಹಾಡುಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ಗಾಯಕರಾದ ಮಹಾತ್ಮಾಂಜನೇಯ, ನರಸಿಂಹಪ್ಪ ತಂಡದಿಂದ ರಂಗ ಗೀತೆಗಳ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ, ಕೋಪದಿಂದ ಆದ ಅನಾಹುತಕ್ಕೆ ನೋವು ಮತ್ತು ವಿಷಾದವೇ ಅಂತಿಮ ಎಂದರು.

ಬಯಲು ಬಂಧನ ಎಂಬುದು ನಿರ್ಬಂಧಗಳ ನಡುವಿನ ಸ್ವಾತಂತ್ರ್ಯ. ಇಲ್ಲಿ ಪರಿವರ್ತಿಸುವ ಕಾರ್ಯ ಆಗುತ್ತಿದೆ. ಇದು ಮಾನವೀಯ ಮೌಲ್ಯ ಸಾರುವ ಶಾಲೆಯಾಗಿದೆ. ಈ ದಿನಗಳು ಕಲಿಕೆಯ ದಿನಗಳೆಂದು ಭಾವಿಸಬೇಕು ಎಂದು ಸಲಹೆ ನೀಡಿದರು.

ಯಾವುದೇ ಅಪರಾಧವು ಶಿಕ್ಷೆಯಿಂದ ಸರಿಯಾಗದು. ಮುಂದೆ ಅಪರಾಧವಾಗದ ಹಾಗೆ ತಡೆಯಬಲ್ಲದು. ಬಹಳಷ್ಟು ಮಂದಿ ಕೈದಿಗಳಲ್ಲಿ ಉತ್ತಮ ಕಲಾವಿದರಿದ್ದಾರೆ. ಅವರಿಗೆ ಅವಕಾಶಗಳು ದೊರೆಯುತ್ತಿಲ್ಲ. ಕಲೆಯು ಪ್ರತಿಯೊಬ್ಬರಲ್ಲಿನ ನೋವನ್ನು ಮರೆಸುತ್ತದೆ. ಆದ್ದರಿಂದ ದೈನಂದಿನ ಚಟುವಟಿಕೆಯ ಜೊತೆಯಲ್ಲಿ ಕಲೆಯ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ಕಲಾವಿದ ಕಂಟನಕುಂಟೆ ಕೃಷ್ಣಮೂರ್ತಿ ಮಾತನಾಡಿ, ಕಲೆಯು ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನನ್ನಾಗಿ ಮಾಡುವ ಶಕ್ತಿ ಹೊಂದಿದೆ. ಕಲೆಯನ್ನು ಯಾರು ಪ್ರೀತಿಸುತ್ತಾರೋ, ಆರಾಧಿಸುತ್ತಾರೋ, ಅವರಲ್ಲಿ ಅಪರಾಧ ಮನೋಭಾವ ಹುಟ್ಟಲು ಸಾಧ್ಯವಿಲ್ಲ ಎಂದರು.

ಕಲೆಯು ಪ್ರತಿಯೊಬ್ಬರಲ್ಲಿ ಮಾನವೀಯತೆಯನ್ನು ಎತ್ತಿ ಹಿಡಿಯುತ್ತದೆ. ಪರೋಪಕಾರ ಗುಣವನ್ನು ಕಲಿಸುತ್ತದೆ. ಆದ್ದರಿಂದ ಕೈದಿಗಳು ಅಪರಾಧಿ ಮನೋಭಾವದಿಂದ ಹೊರಬಂದು ನಾವೂ ಸಮಾಜದ ಒಂದು ಭಾಗವಾಗಿದ್ದೇವೆ. ನಮಗೂ ದೊಡ್ಡ ಹೊಣೆಗಾರಿಕೆಯಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.

ಕಾರಾಗೃಹದ ಅಧೀಕ್ಷಕ ಮೋಹನ್ ಕುಮಾರ್, ಜೈಲರ್ ಬಸವರಾಜ್, ಚಿಕ್ಕೋಪ್ಪ, ಕಲಾವಿದ ರಬ್ಬನಹಳ್ಳಿ ಕೆಂಪಣ್ಣ, ವಾಸು, ಗೋವಿಂದರಾಜು. ಚಂದ್ರಶೇಖರ್, ದೇವನಹಳ್ಳಿ ತಾಲ್ಲೂಕು ಕಸಾಪ ಅಧ್ಯಕ್ಷ ನಂಜೇಗೌಡ, ಗೋವಿಂದರಾಜು, ಭೈರೇಗೌಡ, ಮುನಿವೀರಣ್ಣ, ಸುಭ್ರಮಣಿ, ಚೌಡೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT