ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಟಂನಲ್ಲೂರು ಗೇಟ್ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ

ವೆಂಕಟೇಶ್.ಡಿ.ಎನ್
Published : 30 ಸೆಪ್ಟೆಂಬರ್ 2024, 5:57 IST
Last Updated : 30 ಸೆಪ್ಟೆಂಬರ್ 2024, 5:57 IST
ಫಾಲೋ ಮಾಡಿ
Comments

ಹೊಸಕೋಟೆ: ಬೆಂಗಳೂರು–ಚೆನ್ನೈ ಹೆದ್ದಾರಿ ಎನ್‌ಎಚ್‌–75 ಹಾದು ಹೋಗುವ ತಾಲ್ಲೂಕಿನ ಕಾಟಂನಲ್ಲೂರು ಗೇಟ್‌ ಬಳಿ ಆರಂಭವಾದ ಮೇಲ್ಸೇತುವೆ ಕಾಮಗಾರಿ ಹಲವು ತಿಂಗಳಿಂದ ನೆನಗುದಿಗೆ ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಕಾಮಗಾರಿಗಾಗಿ ಹೆದ್ದಾರಿ ಬಂದ್ ಮಾಡಿ, ಸರ್ವಿಸ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ನಿತ್ಯ ಗಂಟೆಗಟ್ಟಲೆ ವಾಹನದಟ್ಟಣೆ ಉಂಟಾಗುತ್ತಿದೆ.

ದಿನೇ ದಿನೇ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ತಪ್ಪಿಸಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಗರದ ಟೋಲ್ ಸಮೀಪ ಕಾಟಂನಲ್ಲೂರು ಗೇಟ್ ಬಳಿಯಲ್ಲಿ ಮೇಲ್ಸೆತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಹಲವು ತಿಂಗಳಿಂದ ಸ್ಥಗಿತವಾಗಿದೆ. ಇದರಿಂದ ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ. ವಾಹನ ದಟ್ಟಣೆಯಿಂದ ಕಾಟಂನಲ್ಲೂರು ಗೇಟ್‌ನಿಂದ ಹೊಸಕೋಟೆ ತಲುಪಲು ಗಂಟೆಗಟ್ಟಲೆ ಕಾಲ ಕಾಯಬೇಕಾಗಿದೆ.

ಬೆಂಗಳೂರು, ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಮದನಪಲ್ಲಿ, ಚಿತ್ತೂರು, ಕದಿರಿ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಜೊತೆಗೆ ಚಿಂತಾಮಣಿ, ಕೋಲಾರ, ಕೆಜಿಎಪ್, ಮಾಲೂರು ಸೇರಿದಂತೆ ನಮ್ಮದೇ ಸ್ಥಳೀಯ ಪ್ರಮುಖ ನಗರಗಳಿಗೆ ಈ ರಸ್ತೆ ಸಂಪರ್ಕ ಕೊಂಡಿಯಾಗಿದೆ.

ಕಾಟಂನಲ್ಲೂರು ಗೇಟ್ ಬಳಿ ಹೊಸಕೋಟೆ–ಬೆಂಗಳೂರಿಗೆ ಹೋಗುವ ಒಂದು ಮಾರ್ಗದ ಮೇಲ್ಸೇತುವೆ ಮಾತ್ರ ಈ ಹಿಂದೆ ನಿರ್ಮಾಣ ಮಾಡಲಾಗಿತ್ತು. ವಾಹನ ದಟ್ಟಣೆ ನಿವಾರಣೆಗಾಗಿ ಬೆಂಗಳೂರಿನಿಂದ ಬರುವ ಮಾರ್ಗದಲ್ಲಿಯೂ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಾಮಗಾರಿ ಸಹ ಪ್ರಾರಂಭಿಸಲಾಗಿತ್ತು. ಇಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಸಂಚರಿಸಲು ಸೂಚಿಸಲಾಗಿದೆ. ಹೀಗಾಗಿ ನಿತ್ಯ ವಾಹನ ದಟ್ಟಣೆಯಲ್ಲಿ ಗಂಟೆ ಗಟ್ಟಲೆ ಜನ ಕಾಯಬೇಕಿದೆ.

ಕಾಮಗಾರಿ ನಡೆಯುತ್ತಿರುವ ಕಾರಣ ಮೇಲೆತ್ಸುವೆ ಕೆಳಗಿನ ಸಂಚಾರ ಸ್ಥಗಿತಗೊಳಿಸಿರುವ ಕಾರಣ ವೈಟ್‌ಪೀಲ್ಡ್‌ನಿಂದ ಬರುವ ವಾಹನಗಳು ಸುತ್ತಿ ಬಳಸಿ ಹೋಗಬೇಕಾಗಿದೆ.

ಕಾಮಗಾರಿಯ ಸಲುವಾಗಿ ಮಾಡಲಾಗಿರುವ ಸಂಚಾರ ತಿರುವು
ಕಾಮಗಾರಿಯ ಸಲುವಾಗಿ ಮಾಡಲಾಗಿರುವ ಸಂಚಾರ ತಿರುವು

ಇನ್ನೇನು ಮೇಲ್ಸೇತುವೆ ನಿರ್ಮಾಣ ಆಗುತ್ತಿದೆಯಲ್ಲ ಎಂದು ವಾಹನ ಸವಾರರು ಟ್ರಾಫಿಕ್‌ ಕಿರಿಕಿರಿ ಸಹಿಸಿಕೊಂಡು ತಾಳ್ಮೆಯಿಂದ ವಾಹನ ಚಲಾಯಿಸುತ್ತಿದ್ದರು. ಆದರೆ ಈಗ ಕಾಮಗಾರಿ ಸ್ಥಗಿತವಾಗಿದ್ದು, ವಾಹನ ದಟ್ಟಣೆ ಸಮಸ್ಯೆಯೂ ತ್ರೀವ್ರಗೊಂಡಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಳಿಸಿರುವವರ ವಿರುದ್ಧ ವಾಹನ ಸವಾರರು ಆಕ್ರೋಶ ಪಡಿಸಿದ್ದಾರೆ. ಕಾಮಗಾರಿ ಯಾವಾಗ ಮುಗಿಯುತ್ತದೋ ಎಂದು ಶಾಪ ಹಾಕುತ್ತಾ ಜನ ಓಡಾಡುತ್ತಿದ್ದಾರೆ.

ಸರ್ವೀಸ್ ರಸ್ತೆಯಲ್ಲಿ ದೊಡ್ಡದೊಡ್ಡ ಅಪಾರ್ಟ್ಮೆಂಟ್‌ ಮತ್ತು ಮಾಲ್‌ ಇರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಸಂಚಾರ ಮಾಡುತ್ತಾರೆ. ಅಲ್ಲದೆ ಹುಸ್ಕೂರು, ಮಂಡೂರು ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ಇದೇ ಮಾರ್ಗದಲ್ಲಿ ತಿರುವು ತೆಗೆದುಕೊಳ್ಳಬೇಕಿರುವುದರಿಂದ ಅಪಘಾತದ ಸಾಧ್ಯತೆಗಳು ಹೆಚ್ಚಾಗಿದೆ. ಇಲ್ಲಿನ ಸಂಚಾರ ಸಮಸ್ಯೆಯನ್ನು ನಿಭಾಯಿಸುವುದು ಸಂಚಾರ ಪೊಲೀಸರಿಗೆ ಒಂದು ಸವಾಲಾಗಿ ಪರಿಣಮಿಸಿದೆ.

ರಸ್ತೆ ದಾಟಲು ವಿದ್ಯಾರ್ಥಿಗಳ ಪರದಾಟ

ಕಾಟಂನಲ್ಲೂರು ಗೇಟ್ ಬಳಿಯಲ್ಲಿ ವೈಟ್‌ಪೀಲ್ಡ್ ಸರ್ಜಾಪುರ ಹೊಸೂರು ಮಾರ್ಗದಿಂದ ಬರುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹ ಸಡುತ್ತಿದ್ದಾರೆ. ಒಮ್ಮೆಮ್ಮೊ ವಾಹನ ದಟ್ಟಣೆ ತಾಸುಗಟ್ಟಲೆ ಉಂಟಾದರೆ ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಶಾಲಾ–ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ. ಹದಗೆಟ್ಟ ಸರ್ವಿಸ್‌ ರಸ್ತೆ ಮೇಲ್ಸೇತುವೆ ನಿರ್ಮಾಣದಿಂದ ವಾಹನ ಸವಾರರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲಿರುತ್ತದೆ. ಆದರೆ ಕಾಮಗಾರಿ ಪ್ರಾರಂಭಿಸಿದರೂ ವಾಹನಗಳು ಸಂಚರಿಸಲು ಸೂಕ್ತ ಸರ್ವೀಸ್ ರಸ್ತೆ ವ್ಯವಸ್ಥೆ ಮಾಡಿಲ್ಲ. ಇರುವ ಸರ್ವಿಸ್‌ ರಸ್ತೆಯೂ ಹಳ್ಳಗಳಿಂದ ಕೂಡಿದೆ. ಹದಗೆಟ್ಟ ರಸ್ತೆಯ ಸಂಚಾರ ಅಪಾಯ ತರುವಂತಿದೆ ಎಂದು ಸವಾರರು ಅಳಲು ತೋಡಿಕೊಂಡಿದ್ದಾರೆ.

ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ವಿದ್ಯಾರ್ಥಿಗಳಿಗೆ ಪಾದಚಾರಿಗಳಿಗೆ ಬಹು ದೊಡ್ಡ ಸಮಸ್ಯೆಯಾಗಿದೆ. ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಸಹ ಬಂದು ಕಾಮಗಾರಿಯನ್ನು ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. ಈ ಸ್ಥಿತಿಯನ್ನು ಕಂಡ ಅವರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಹೇಳಿದ್ದರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಜಯರಾಂ ಸ್ಥಳೀಯರು ಕೋಡಿ ಹೊಸಕೋಟೆ
ಸ್ಥಳೀಯ ವಾಹನ ಓಡಾಟಕ್ಕೆ ಅಡಚಣೆ ನಿತ್ಯ ನಮ್ಮ ಮಕ್ಕಳನ್ನು ಹೊಸಕೋಟೆ ಶಾಲೆಗೆ ಕರೆದುಕೊಂಡು ಹೋಗುತ್ತೇವೆ. ಕಾಟಂನಲ್ಲೂರು ಕ್ರಾಸ್ ಬಳಿ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿರುವ ಕಾರಣದಿಂದ ದುಪ್ಪಟ್ಟು ವಾಹನ ದಟ್ಟಣೆ ಉಂಟಾಗುತ್ತದೆ. ಎರಡೂ ಬದಿಯಿಂದ ವಾಹನಗಳು ಸಂಚರಿಸುವುದರಿಂದ ಸ್ಥಳೀಯರ ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ.
ಅನಿತಾ ಗೃಹಿಣಿ ಹುಸ್ಕೂರು ಗ್ರಾಮ
ತ್ವರಿತಗತಿಯಲ್ಲಿ ಆರಂಭವಾದ ರಸ್ತೆ ಮೇಲ್ಸೇತುವೆ ಕಾಮಗಾರಿ ಏಕಾಏಕಿ ಸ್ಥಗಿತಗೊಳ್ಳಲು ಕಾರಣ ತಿಳಿಯುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ಸವಾರರು ಇದೊಂದು ಶುಭಸುದ್ದಿ ಎಂದು ಸಂತಸಪಟ್ಟುಕೊಳ್ಳುವುದೋ ಅಥವಾ ಸ್ಥಗಿತಗೊಂಡು ಸಂಚಾರಕ್ಕೆ ಮತ್ತಷ್ಟು ಸಮಸ್ಯೆ ತಂದೊಡ್ಡಿದ್ದಾರೆ ಎಂದು ದುಃಖಿಸುವುದೋ ಒಂದು ತಿಳಿಯದೆ ಆಯೋಮಯ ಸ್ಥಿತಿಯಲ್ಲಿದ್ದಾರೆ. ಮೇಲ್ಸೇತುವೆ ನನೆಗುದಿಗೆ ಬಿದ್ದಿರುವುದರಿಂದ ಸಂಚಾರ ಸಮಸ್ಯೆ ತೀವ್ರಗೊಂಡಿದೆ.
ಶ್ರೀನಿವಾಸ್ ಆಚಾರ್ ಹೊಸಕೋಟೆ
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆದಷ್ಟು ಬೇಗ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ನಿಗಸಲಿ
ಎಂ.ಮುನಿಸುಬ್ಬಯ್ಯ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT