ಭಾನುವಾರ, ಮೇ 16, 2021
23 °C
ಕೆ.ಸಿ.ವ್ಯಾಲಿ ಯೋಜನೆ ಪ್ರಶ್ನಿಸಿದ ಪಿಐಎಲ್‌ ವಿಚಾರಣೆ ಬಳಿಕ ಹೈಕೋರ್ಟ್ ನಿರ್ದೇಶನ

ಕೋಲಾರ ಕೆರೆಗಳಿಗೆ ಹರಿಸಬೇಕೆಂದಿರುವ ಬೆಳ್ಳಂದೂರು ಕೆರೆ ನೀರಿನ ಗುಣಮಟ್ಟದ ವರದಿನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋಲಾರದ ಕೆರೆಗಳಿಗೆ ಹರಿಸಲು ಉದ್ದೇಶಿಸಿರುವ ಬೆಳ್ಳಂದೂರು ಕೆರೆ ನೀರನ್ನು ಮೊದಲು ಜಾಕ್‌ವೆಲ್‌ಗಳಿಗೆ (ನೀರು ಸಂಗ್ರಹಣೆಯ ಚಿಕ್ಕ ಬಾವಿ) ಹರಿಸಿ, ನಂತರ ನೀರಿನ ಗುಣಮಟ್ಟದ ವರದಿ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಕೋರಮಂಗಲ-ಚಲ್ಲಘಟ್ಟ ಕಣಿವೆ (ಕೆ.ಸಿ ವ್ಯಾಲಿ) ಯೋಜನೆ ಪ್ರಶ್ನಿಸಿ ಶಾಶ್ವತ ನೀರಾವರಿ ಯೋಜನೆ ಸಮಿತಿ ಅಧ್ಯಕ್ಷರೂ ಆದ ಚಿಕ್ಕಬಳ್ಳಾಪುರದ ಆರ್.ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ‘ಸಂಸ್ಕರಿಸಿದ ನೀರನ್ನು ಜಾಕ್‌ವೆಲ್‌ಗಳ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಬೆಳ್ಳಂದೂರು ಕೆರೆಯ ಸಂಸ್ಕರಿಸದೇ ಇರುವ ನೀರು ಜಾಕ್‌ವೆಲ್ ಸೇರಿದೆ. ಇದರ ಪರಿಣಾಮ ಜಾಕ್‌ವೆಲ್ ಉಕ್ಕಿ ಹರಿದಿತ್ತು. ಹಾಗಾಗಿ ಅಲ್ಲಿನ ಕೆರೆಗಳಲ್ಲಿ ನೊರೆ ಕಾಣಿಸಿಕೊಂಡಿತ್ತು’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಭವಿಷ್ಯದಲ್ಲೂ ಇದೇ ರೀತಿಯ ಸಮಸ್ಯೆ ಮರುಕಳಿಸಿದರೆ ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಹೊಳ್ಳ ಅವರು, ‘ಮೊದಲನೇ ಜಾಕ್‌ವೆಲ್‌ನಿಂದ 9.5 ಕಿ. ಮೀ. ದೂರದ ಬೆಳಗೆರೆ ಎಂಬಲ್ಲಿ 2ನೇ ಜಾಕ್‌ವೆಲ್ ಇದೆ. ಅಲ್ಲಿಗೆ ನೀರು ಹರಿಸಿ, ಪರೀಕ್ಷೆ ನಡೆಸಲಾಗುವುದು. ನೀರು ಹರಿದಷ್ಟೂ ಅದರಲ್ಲಿನ ರಾಸಾಯನಿಕ ವಸ್ತುಗಳು ಕಡಿಮೆಯಾಗುತ್ತವೆ. ಇದರ ಫಲಿತಾಂಶವನ್ನು ಕೋರ್ಟ್‌ಗೆ ತಿಳಿಸಲು ಕಾಲಾವಕಾಶ ಬೇಕು’ ಎಂದು ಮನವಿ ಮಾಡಿದರು.

ಮಧ್ಯಂತರ ಆದೇಶ ವಿಸ್ತರಣೆ:  ಇದೇ ವೇಳೆ ನ್ಯಾಯಪೀಠ, ಕೆ.ಸಿ. ವ್ಯಾಲಿ ಮೂಲಕ ಕೋಲಾರದ ಕೆರೆಗಳಿಗೆ ನೀರು ಹರಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿದೆ.

ಜಾಕ್‌ವೆಲ್‌ನಲ್ಲಿ ಸಂಗ್ರಹವಾಗುವ ನೀರನ್ನು ಯಾವುದೇ ಕಾರಣಕ್ಕೂ ಕೆರೆಗಳಿಗೆ ಬಿಡುಗಡೆ ಮಾಡುವಂತಿಲ್ಲ’ ಎಂದೂ ತಾಕೀತು ಮಾಡಿದೆ.

ಮಧ್ಯಂತರ ಆದೇಶ ತೆರವಿಗೆ ನಕಾರ: ಕೆ.ಸಿ ವ್ಯಾಲಿ ಮೂಲಕ ಕೋಲಾರದ ಕೆರೆಗಳಿಗೆ ನೀರು ಹರಿಸುವಂತೆ ಕೋರಿ ಕೆಲ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಪೀಠ ತಳ್ಳಿ ಹಾಕಿದೆ.

‘ನೀರಿನ ಗುಣಮಟ್ಟದ ಬಗ್ಗೆ ಖಾತ್ರಿಯಾಗುವತನಕ ಯಾವುದೇ ಕಾರಣಕ್ಕೂ ಕೆರೆಗಳಿಗೆ ನೀರು ಹರಿಸಲು ಬಿಡುವುದಿಲ್ಲ. ಇದು ಲಕ್ಷಾಂತರ ಜನರ ಆರೋಗ್ಯ ಮತ್ತು ಜೀವದ ಪ್ರಶ್ನೆಯಾಗಿದೆ. ನೀರು ಕುಡಿಯಲು ಹಾಗೂ ಕೃಷಿ ಚಟುವಟಿಕೆಗೆ ಯೋಗ್ಯ ಹೌದೋ ಅಲ್ಲವೋ ಎಂಬುದು ಮೊದಲು ಖಚಿತವಾಗಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.

‘ಕೆರೆಗಳಿಗೆ ನೀರು ಹರಿಸುವುದಿಲ್ಲ ಎಂದು ಸರ್ಕಾರವೇ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಇದರ ಆಧಾರದ ಮೇಲೆಯೇ ಮಧ್ಯಂತರ ಆದೇಶ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು