‘ಆದಾಯ ಮೂಲ ಇಲ್ಲದೆ ಅಭಿವೃದ್ಧಿ ಕುಂಟಿತ’

7
ನೂತನ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಗೆ ಅಭಿನಂದನೆ

‘ಆದಾಯ ಮೂಲ ಇಲ್ಲದೆ ಅಭಿವೃದ್ಧಿ ಕುಂಟಿತ’

Published:
Updated:
Prajavani

ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದರ ಜತೆಗೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಎಸ್.ಅನಂತಕುಮಾರಿ ಚಿನ್ನಪ್ಪ, ನೂತನ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಅವರಿಗೆ ಮನವಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶನಿವಾರ, ನೂತನ ಉಪಾಧ್ಯಕ್ಷೆ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಿ ಮನವಿ ಸಲ್ಲಿಸಿದರು.

ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಬರಗಾಲ ಪೀಡಿತ ಪ್ರದೇಶವಾಗಿರುವುದರಿಂದ ದನಕರು ಮೇವುಗಳಿಗೆ ತಾತ್ವಾರ ಉಂಟಾಗುತ್ತಿದೆ. ಈ ಕುರಿತು ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಹಾರೋಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಹರೀಶ್ ಮಾತನಾಡಿ, ಹಾರೋಹಳ್ಳಿ ಗ್ರಾಮ ಪಂಚಾಯಿತಿಗೆ ಆದಾಯದ ಮೂಲಗಳಿಲ್ಲದ ಕಾರಣ ಪಂಚಾಯಿತಿ ಅಭಿವೃದ್ಧಿಯಿಂದ ಹಿಂದುಳಿದಿದೆ‌. ಪಂಚಾಯಿತಿಗೆ ಕಟ್ಟಬೇಕಾಗಿರುವ ತೆರಿಗೆ ಹಣ ಕಟ್ಟಲು ಜನರು ಕಷ್ಟಪಡುವಂತಾಗಿದೆ. ನರೇಗಾ ಯೋಜನೆ ಬಿಟ್ಟರೆ ಬೇರೆ ಯಾವ ಕೆಲಸಗಳೂ ಆಗುತ್ತಿಲ್ಲ. ಪಂಚಾಯಿತಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ‘ಪಂಚಾಯಿತಿಗೆ ಸೇರಿದ ಕೆರೆ ಪ್ರದೇಶವನ್ನು ವೆಂಕಟಗಿರಿಕೋಟೆ ಪಂಚಾಯಿತಿ ಉಪಯೋಗ ಮಾಡಿಕೊಳ್ಳುತ್ತಿದೆ. ಇದರಿಂದ ಪಂಚಾಯಿತಿಗೆ ಅನ್ಯಾಯವಾಗುತ್ತಿದೆ. ಆದಾಯದ ಮೂಲಗಳೂ ಇಲ್ಲ’ ಎಂದು ದೂರಿದರು.

‘ಪಂಚಾಯಿತಿಯಲ್ಲಿ ತಯಾರಿಸಲಾಗುತ್ತಿರುವ ಕ್ರಿಯಾಯೋಜನೆ ಮಂಜೂರಾತಿಗಾಗಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಿದರೂ ಅನುಮೋದನೆ ಕೊಡುವುದು ವಿಳಂಬ ಮಾಡಲಾಗುತ್ತಿದೆ. ಹೊಸದಾಗಿ ಆಯ್ಕೆಯಾಗಿರುವ ಪಂಚಾಯಿತಿ ಸದಸ್ಯರಿಗೆ ಸೂಕ್ತ ತರಬೇತಿ ಕೊಟ್ಟಿಲ್ಲ. ಇದರಿಂದ ಜವಾಬ್ದಾರಿಗಳ ಬಗ್ಗೆ ಮಾಹಿತಿ ಇಲ್ಲವಾಗಿದೆ. ಈ ಬಗ್ಗೆ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾ ಅವರಿಗೆ ಮನವಿ ಪತ್ರ ಸಲ್ಲಿಸಿ, ಅಭಿನಂದಿಸಿದರು.‌ ಚನ್ನರಾಯಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಲಕ್ಷ್ಮೀನಾರಾಯಣಪ್ಪ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ವರಲಕ್ಷ್ಮಮ್ಮ, ಮಾಲಾ, ಮುನಿರಾಜು, ಪ್ರಭಾಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !