ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ವರ್ಷ ಪೂರೈಸಿದರೂ, ಆಗದ ಅಭಿವೃದ್ಧಿ: ಹಳ್ಳಿಯಾಗಿಯೇ ಉಳಿದ ದೇವನಹಳ್ಳಿ

। ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ
ಸಂದೀಪ್‌
Published 17 ಜೂನ್ 2024, 6:07 IST
Last Updated 17 ಜೂನ್ 2024, 6:07 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ದೇವನಹಳ್ಳಿ ಜಾಗತಿಕ ಮಟ್ಟದದಲ್ಲಿ ಗುರುತಿಸಿ ಕೊಂಡಿದೆ. ಆದರೆ ಒಂದು ತಾಲ್ಲೂಕು ಕೇಂದ್ರಕ್ಕೆ ಬೇಕಾದ ಕನಿಷ್ಠ ಸೌಕರ್ಯಗಳು ಇಲ್ಲದೆ ದೇವನಹಳ್ಳಿ ಹಳ್ಳಿಯಾಗಿಯೇ ಉಳಿದಿದ್ದು, ಹೆಸರಿಗೆ ಮಾತ್ರ ಪಟ್ಟಣ ಎಂದೆನಿಸಿದೆ.

ದೇವನಹಳ್ಳಿಗೆ ವಿಶ್ವದರ್ಜೆಯ ಸವಲತ್ತು, ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಣ್ಣ ಮಳೆಗೆ ಪಟ್ಟಣ ನಲುಗುತ್ತಿದೆ. ಪ್ರಾಥಮಿಕವಾಗಿ ಬೇಕಾಗಿರುವ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ನೈರ್ಮಲ್ಯತೆ ಕಣ್ಮರೆಯಾಗಿದೆ. ದಿನನಿತ್ಯ ಸಮಸ್ಯೆಗಳಿಗೆ ಜನ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ.

ಅಧಿಕಾರಕ್ಕೆ ಬರುವ ರಾಜಕೀಯ ಮುತ್ಸದ್ಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿವನ್ನು ಭಾಷಣಕಷ್ಟೇ ಸೀಮಿತಗೊಳಿಸಿದ್ದಾರೆ. ಕ್ಷೇತ್ರದ ಪ್ರಗತಿಯನ್ನು ಕಡೆಗಣಿಸಿದ್ದಾರೆ ಎನ್ನುವುದು ಸಾರ್ವಜನಿಕರ ದಶಕದ ಆರೋಪ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದೆ. ಚುನಾವಣೆಗೂ ಮುನ್ನ ಕೆ.ಎಚ್‌.ಮುನಿಯಪ್ಪ ಅವರು ದೇವನಹಳ್ಳಿಯನ್ನು ಜಾಗತಿಕ ಮಟ್ಟದ ‌ನಗರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಅವರೇ ವಿಜೇತರಾಗಿ, ಜಿಲ್ಲಾ ಉಸ್ತುವಾರಿ ಸಚಿವರೂ ಆದರೂ, ಆದರೆ ಅವರ ನೀಡಿದ ಭರವಸೆಗಳು ಯಾವುದು ಈಡೇರಲಿಲ್ಲ. ಅವರ ಒಂದು ವರ್ಷದ ಅವದಿಯಲ್ಲಿ ಯಾವುದೇ ದೊಡ್ಡಮಟ್ಟದ ಅಭಿವೃದ್ಧಿ ಕಾರ್ಯ ಮತ್ತು ಕಾಮಗಾರಿಗಳಿಗೆ ಚಾಲನೆಯೂ ಸಿಗಲಿಲ್ಲ. ಕ್ಷೇತ್ರ ಜನರ ನಿರೀಕ್ಷೆಯಂತೆ ಪ್ರಗತಿಯೂ ಕಾಣಲಿಲ್ಲ.

ಜಿಲ್ಲಾ  ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಬಂದರೂ, ಅದು ಸಭೆ, ಸಮಾರಂಭಕ್ಕೆ ಮಾತ್ರ ಸೀಮಿತವಾಗಿರುತ್ತಾರೆ.

ದೇವನಹಳ್ಳಿ ವಿಧಾನ ಸಭಾ ಕ್ಷೇತ್ರವೂ ಉಳಿದ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಿಗೆ ಹೊಲಿಸಿಕೊಂಡರೇ ಅತ್ಯಂತ ಕಳಪೆಯಾಗಿದೆ. ಸೌಕರ್ಯ ಕೊರತೆಯೊಂದಿಗೆ ಜನ ಬದುಕುವನ್ನು ರೂಢಿಸಿಕೊಂಡಿದ್ದಾರೆ.

ಪಟ್ಟಣದ ತಾಲ್ಲೂಕು ಆಡಳಿತಸೌಧದ ಉಪ ನೋಂದಣಾಧಿಕಾರಿ ಕಚೇರಿಯಿಂದ ನಿತ್ಯ ಕೋಟಿ ಕೋಟಿ, ವರಮಾನ ಸರ್ಕಾರದ ಖಜಾನೆಗೆ ಜಮೆ ಆಗುತ್ತಿದ್ದರೂ, ಯಾವುದೇ ಉಪಯೋಗವಿಲ್ಲದಂತಾಗಿದೆ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯ, ಲಿಫ್ಟ್‌ ವ್ಯವಸ್ಥೆ ಇಲ್ಲದೇ ಹಿಡಿ ಶಾಪ ಹಾಕುವುದು ಸರ್ವೇ ಸಾಮಾನ್ಯವಾಗಿದೆ.

ಸರ್ಕಾರಿ ಭೂಮಿ ರಕ್ಷಣೆಯಲ್ಲಿ ಅಧಿಕಾರಿಗಳು ಸೋತ್ತಿದ್ದು, ಯೋಜನಾ ಪ್ರಾಧಿಕಾರದ ಸಿಬ್ಬಂದಿಯೇ ನಕಲಿ ದಾಖಲೆ ನಕ್ಷೆ ಅನುಮೋದನೆ ಕೊಟ್ಟು, ಅನಧಿಕೃತ ನಿವೇಶನ ಸೃಷ್ಟಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಗಂಭೀರ ಆರೋಪ.

ಸ್ಥಳೀಯ ಗ್ರಾಮ ಪಂಚಾಯಿತಿ, ಪುರಸಭೆ ವ್ಯಾಪ್ತಿಯ ಉದ್ಯಾನಗಳು ಅವ್ಯವಸ್ಥೆಯ ಕೂಪವಾಗಿದೆ. ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೆ ಪಾಳು ಬಿದ್ದಿವೆ.

ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ವ್ಯವಧಾನ ಅಧಿಕಾರಿಗಳಿಗೆ ಇಲ್ಲದಂತೆ ಆಗಿದೆ. ರಾಜಕೀಯ ವ್ಯಕ್ತಿಗಳ ಗೊಂಬೆಗಳಂತೆ ಅಧಿಕಾರಿಗಳು ಕುಣಿಯುತ್ತಿದ್ದಾರೆ ಎಂಬುದು ಸ್ಥಳೀಯ ನಿವಾಸಿಗಳ ದೂರು.

ದೇವನಹಳ್ಳಿ ಶಾಸಕರಿಗೆ ಕರ್ಮ ಭೂಮಿ ದೇವನಹಳ್ಳಿ ಆದರೂ ಪುಣ್ಯ ಭೂಮಿ ಕೋಲಾರ ಕ್ಷೇತ್ರವಾಗಿರುವುದರಿಂದ ಇಲ್ಲಿರುವ ಮತದಾರರು ಮಲತಾಯಿ ಧೋರಣೆ ಅನುಭವಿಸುವ ಸ್ಥಿತಿಯಲ್ಲಿದ್ದಾರೆ. ಪ್ರಶಾಂತ್‌ ದೇವನಹಳ್ಳಿ ನಿವಾಸಿ
ಮುಂದಿನ ಚುನಾವಣೆ ವೇಳೆಗೆ ಕೆ.ಎಚ್‌.ಮುನಿಯಪ್ಪ ಅವರು ರಾಜಕೀಯವಾಗಿ ನಿವೃತ್ತಿ ಆಗುವ ಸಾಧ್ಯತೆ ಹೆಚ್ಚಿದ್ದು ಅವರಿಗೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಮತ್ತೊಂದು ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಆಸೆ ಇಲ್ಲದಂತಾಗಿದೆ
ಅರವಿಂದ್‌ ದೇವನಹಳ್ಳಿ
ಆಗಬೇಕಿರುವ ಕೆಲಸಗಳು
ಸುಸಜ್ಜಿತ ರಸ್ತೆ ಒಳ ಚರಂಡಿ ವ್ಯವಸ್ಥೆ ಮತ್ತು ಬಸ್ ನಿಲ್ದಾಣ ಯುವಕರಿಗೆ ಉದ್ಯೋಗ ಸೃಷ್ಟಿ ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರ್ಕಾರ ಕಚೇರಿಯಲ್ಲಿ ಲಿಫ್ಟ್ ಶೌಚಾಲಯ ಕೈಗಾರಿಕೆಗಳ ಪಾಲಾಗುತ್ತಿರುವ ಫಲವತ್ತಾದ ಕೃಷಿ ಭೂಮಿ ಉಳಿಸುವುದು ನಕಲಿ ದಾಖಲೆ ಸೃಷ್ಟಿ ಅಕ್ರಮವಾಗಿ ಸರ್ಕಾರ ಜಾಗ ಒತ್ತುವರಿ ತಡೆ ದೇವನಹಳ್ಳಿ- ವಿಜಯಪುರ ಅವಳಿ ನಗರವಾಗಿ ಅಭಿವೃದ್ಧಿಪಡಿಸುವುದು ಕ್ರೀಡಾಂಗಣ ಅಭಿವೃದ್ಧಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಉದ್ಯಾನ ನಿರ್ವಹಣೆ ಹಸಿರೀಕರಣ ಹೆಚ್ಚಿಸಬೇಕು. ತೆರದ ವ್ಯಾಯಾಮ ಶಾಲೆ ನಿರ್ಮಿಸಬೇಕು ಸಂತೆ ಜಾಗದ‌‌ ಸದ್ಬಳಕೆಗೆ ಯೋಜನೆ ರೂಪಿಸುವುದು ಪುರಸಭೆಗೆ ಹೆಚ್ಚುವರಿ‌ ಅನುದಾನ ತಂದು ಹಳೇ‌ ಪಟ್ಟಣದ ಅಭಿವೃದ್ಧಿ
ಸಮಗ್ರ ಅಭಿವೃದ್ಧಿಗೆ ಒತ್ತು
‘ನಾನು ಶಾಸಕನಾದ ಬಳಿಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ರಸ್ತೆ ಕೆರೆ ಮತ್ತು ಶಾಲೆ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ದೇವನಹಳ್ಳಿ-ವಿಜಯಪುರ-ವೇಮಗಲ್ ಎಚ್.ಕ್ರಾಸ್ ನರಸಾಪುರದ ಮೂಲಕ ಹಾದು ಹೋಗುವ ರಸ್ತೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹1400 ಕೋಟಿ ಅನುದಾನ ಘೋಷಣೆ ಮಾಡಿಸಿದ್ದೇನೆ. ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ ಸರ್ಕಾರಿ ಶಾಲೆಯನ್ನು ಸಿಎಸ್‌ಆರ್ ಅನುದಾನದಡಿ ಕಾನ್ವೆಂಟ್‌ನಂತೆ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ದೇವನಹಳ್ಳಿ ವರೆಗೆಗೂ ಮೆಟ್ರೊ ರೈಲು ತರಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆಲೂರು ದುದ್ದನಹಳ್ಳಿ ಕೆರೆ ಅಭಿವೃದ್ಧಿಗೆ ₹4 ಕೋಟಿ ನೀಡಲಾಗಿದೆ ಎಂದು ತಿಳಿಸಿದರು. ವಾಲ್ಮೀಕಿ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಗಂಗವಾರ ಚೌಡಪ್ಪನಹಳ್ಳಿ–ಹೊಸಕೋಟೆ ರಸ್ತೆ ಅಭಿವೃದ್ಧಿ ಗೋಖರೆ ರಸ್ತೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 50 ಲಕ್ಷ ಬಿಡುಗಡೆಯಾಗಿದೆ. ಇರಿಗೇನಹಳ್ಳಿಯ ಬಳಿ ಕಸವಿಲೇವಾರಿ ಘಟಕ ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT