ಭಾನುವಾರ, ಡಿಸೆಂಬರ್ 15, 2019
17 °C
ಚನ್ನಪಟ್ಟಣದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ

ವಕೀಲರು ವೃತ್ತಿ ಗೌರವ ಕಾಪಾಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ವಕೀಲರು ವೃತ್ತಿ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಯರಮಾಲ್ ಕಲ್ಪನ ಅವರು ಕರೆ ನೀಡಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲ್ಲೂಕು ವಕೀಲರ ಸಂಘ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಇವರ ವತಿಯಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ವಕೀಲ ವೃತ್ತಿ ತುಂಬಾ ಶ್ರೇಷ್ಠ ಮತ್ತು ಗೌರವಯುತವಾದುದು. ವಕೀಲರು ವೃತ್ತಿ ಧರ್ಮವನ್ನು ಪಾಲಿಸಿ ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಮೂಲಕ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬೇಕು. ರಾಷ್ಟ್ರಪತಿಗಳಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ.ರಾಜೇಂದ್ರ ಪ್ರಸಾದ್ ಅವರು ವಕೀಲ ವೃತ್ತಿಯನ್ನು ‘ನೋಬಲ್‌ ಪ್ರೊಫೆಷನ್’ ಎಂದು ತಿಳಿಸಿಕೊಟ್ಟಿದ್ದಾರೆ. ಅಂತಹ ಮಹಾನ್ ಚೇತನಗಳ ತತ್ವ ಆದರ್ಶ ಸಿದ್ಧಾಂತಗಳನ್ನು ವಕೀಲರು ಮೈಗೂಡಿಸಿಕೊಳ್ಳಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಮಾತನಾಡಿ, ವಕೀಲರು, ಯುವ ವಕೀಲರು ವೃತ್ತಿಯನ್ನು ಬಹಳ ಪ್ರೀತಿಯಿಂದ ಹಾಗೂ ಜವಾಬ್ದಾರಿಯುತವಾಗಿ ತೆಗೆದುಕೊಳ್ಳಬೇಕು. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಮೊಕದ್ದಮೆಗಳ ಬಗ್ಗೆ ಕಾಳಜಿ ವಹಿಸಿ ವಾದ ವಿವಾದದ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅನುಭವವನ್ನು ಪಡೆದುಕೊಂಡು ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡುವ ಮೂಲಕ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್ ಮಾತನಾಡಿ, ‘ಹಿರಿಯ ಚೇತನಗಳು ಹಾಕಿಕೊಟ್ಟಿರುವ ದಾರಿಯಲ್ಲಿ ನಾವೆಲ್ಲರೂ ಸಾಗಿ ವೃತ್ತಿಧರ್ಮವನ್ನು ಕಾಪಾಡಿಕೊಂಡು ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಬೇಕಾಗಿದೆ’ ಎಂದರು.

ಹಿರಿಯ ವಕೀಲರಾದ ಟಿ.ಎಂ.ಲಕ್ಷ್ಮಣ್, ಜೆ.ಟಿ.ಪ್ರಕಾಶ್, ನಾರಾಯಣಗೌಡ, ಧನಂಜಯ, ಸಿದ್ದರಾಜು, ಶಿವರಾಜ್, ಬೋಜೇಗೌಡ, ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ವಕೀಲ ರಂಗಸ್ವಾಮಿ ವಕೀಲರ ಕುರಿತು ಕವನ ವಾಚಿಸಿದರು.

ನ್ಯಾಯಾಧೀಶೆ ಬಿ.ಟಿ.ಅನ್ನಪೂರ್ಣೇಶ್ವರಿ, ಸಹಾಯಕ ಸರ್ಕಾರಿ ಅಭಿಯೋಜಕಿ ರೂಪ ಉಪಸ್ಥಿತರಿದ್ದರು. ವಕೀಲರಾದ ಬಿ.ಕೃಷ್ಣಪ್ಪ ನಿರೂಪಿಸಿದರು. ಬಿ.ವಿ.ಅಂಬಿಕಾ ಸ್ವಾಗತಿಸಿದರು. ಶಿವರಾಜು ವಂದಿಸಿದರು.

ಪ್ರತಿಕ್ರಿಯಿಸಿ (+)