ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾದಿಗರು ಚುನಾವಣಾ ವಸ್ತುವಲ್ಲ’

ಪಟ್ಟಣದ ಗುರುಭವನದಲ್ಲಿ ಆದಿ ಜಾಂಬವ ಜಯಂತ್ಯುತ್ಸವ
Last Updated 21 ಜನವರಿ 2023, 5:10 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಮಾದಿಗರು ಚುನಾವಣೆಯ ವಸ್ತುವಲ್ಲ. ರಾಜಕೀಯ ಶಕ್ತಿ ಎಂಬುದನ್ನು ನಿರೂಪಿಸಬೇಕು’ ಎಂದು ಕರ್ನಾಟಕ ಮಾದಿಗ ದಂಡೋರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಂ. ಶಂಕರಪ್ಪ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಕರ್ನಾಟಕ ಮಾದಿಗ ದಂಡೋರದ ತಾಲ್ಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಆದಿ ಜಾಂಬವ ಜಯಂತ್ಯುತ್ಸವದಲ್ಲಿ ಭಾಗವಹಿಸಿದ ಅವರು ಮಾತನಾಡಿದರು.

75 ವರ್ಷಗಳ ಕಾಲ ಸಮುದಾಯದ ಬೆಂಬಲದಿಂದ ರಾಜಕೀಯಕ್ಕೆ ಬಂದವರು ಇಂದು ಸಮುದಾಯವನ್ನು ಕಡೆಗಣಿಸಿದ್ದಾರೆ. ಸಮುದಾಯಕ್ಕೆ ಕನಿಷ್ಠ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಮಹಿಳೆಯರು ಹೋರಾಟಕ್ಕೆ ಇಳಿಯುವ ಮೂಲಕ ಸರ್ಕಾರದ ಮೇಲೆ ಒತ್ತಡ ತರಬೇತು. ಸ್ತ್ರೀಯರ ಸಂಘಟನೆಯಿಂದ ಮಕ್ಕಳು ಮತ್ತು ನೆರೆಹೊರೆಯರಿಗೆ ಮಾದಿಗರ ಅಸ್ತಿತ್ವ ತಿಳಿಯುತ್ತದೆ ಎಂದು ಪ್ರತಿಪಾದಿಸಿದರು.

95 ವರ್ಷಗಳ ಹಿಂದೆ ಪ್ರಾರಂಭವಾದ ಆದಿಜಾಂಬವ ಸಂಘಕ್ಕೆ ಇಂದು ಬೆಂಗಳೂರಿನಲ್ಲಿ ಒಂದು ಸ್ವಂತ ನಿವೇಶನವೂ ಇಲ್ಲವಾಗಿದೆ. ಬಿಜೆಪಿಯಿಂದಾಗಿ ಹಿಂದೂ ಜಾಗರಣ ವೇದಿಕೆ, ಆರ್‌ಎಸ್‌ಎಸ್‌ ಸಂಘಟನೆಗಳು ಇಂದು ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿವೆ. ಅವರನ್ನು ಆದರ್ಶವಾಗಿಟ್ಟುಕೊಂಡು ಮಾದಿಗ ಸಂಘಟನೆಗಳು ಬೆಳೆಯಬೇಕು ಎಂದು ಹೇಳಿದರು.

ಮೂಲ ಪುರುಷ ಆದಿ ಜಾಂಬವ ಅಸ್ತಿತ್ವದಿಂದ ರಾಮ ಪ್ರಪಂಚಕ್ಕೆ ಪರಿಚಿತನಾದ, ಹನುಮಂತನ ಶಾಪ ವಿಮೋಚನೆಯಾಯಿತು. ಭಾರತ ಶ್ರೀಲಂಕಾದ ನಡುವೆ ರಾಮ ಸೇತು ನಿರ್ಮಾಣವಾಗಿದೆ. ಸಂಜೀವಿನಿ ಔಷಧದಿಂದ ಲಕ್ಷ್ಮಣನ ಜೀವ ಉಳಿಯಿತು. ರಾವಣನ ವಧೆಯಲ್ಲಿ ಆದಿಜಾಂಬವ ಪ್ರಮುಖ ಪಾತ್ರ ವಹಿಸಿದ್ದಾನೆ. ಕೋತಿಗಳಾದ ವಾಲಿ, ಸುಗ್ರೀವರು ಅರಮನೆಯಲ್ಲಿದ್ದರು ಎನ್ನುವವರು, ಜಾಂಬವ ಮಾತ್ರ ಗುಹೆಯಲ್ಲಿದ್ದಾನೆ ಎಂದು ವರ್ಣಿಸುತ್ತಾರೆ. ಈ ಮೂಲಕ ಮಹಾ ಗ್ರಂಥಗಳಲ್ಲೂ ಅಸ್ಪೃಶ್ಯತೆಯ ಛಾಯೆ ಕಾಣುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯವಾಗಿ ಮೀಸಲಾತಿ ಅಗತ್ಯತೆಗಳನ್ನು ಬಹಳ ಎಚ್ಚರಿಕೆಯಿಂದ ಮಾದಿಗ ಸಮುದಾಯ ಬಳಸಿಕೊಳ್ಳಬೇಕು. ಮತದಾನದಲ್ಲಿ ಸಮಾಜದ ಹಿತಾಸಕ್ತಿ, ಕ್ಷೇಮಾಭಿವೃದ್ಧಿಯ ಕುರಿತು ಗಮನ ಹರಿಸುವ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ ಸಂಘಟನೆಗಳ ಬಲ ಹೆಚ್ಚಿದ್ದಾಗ ಮಾತ್ರ ಎಲ್ಲರೂ ಒಟ್ಟಾಗಿ ಅಭ್ಯುದಯದೆಡೆಗೆ ಸಾಗಬಹುದು ಎಂದು ದಂಡೋರಾದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಲ್ಲಿ ರಾಜಪ್ಪ ತಿಳಿಸಿದರು.

ತಾಲ್ಲೂಕು ಮಾದಿಗ ದಂಡೋರದ ಅಧ್ಯಕ್ಷ ಎಂ.ಎನ್‌. ರಾಜಣ್ಣ ಬೈಚಾಪುರ, ಪದಾಧಿಕಾರಿಗಳಾದ ವೆಂಕಟೇಶ್‌, ಕೆ.ಎನ್‌. ಚಂದ್ರಶೇಖರ್‌, ಅನಿಲ್‌ ಕುಮಾರ್‌, ಮಂಜುನಾಥ ವಿ, ಸಿ. ರಾಘವ, ಮುನಿ ಚಿನ್ನಪ್ಪ, ಮಹೇಶ್‌, ಆನಂದ್‌ ಕುಮಾರ್‌, ಡಿ.ಸಿ. ಹೇಮಂತ್‌ ಕುಮಾರ್‌, ಚನ್ನಕೇಶವ, ಮುನಿಕೃಷ್ಣಪ್ಪ, ಮಂಜುನಾಥ್‌, ಬಿ.ಎನ್‌. ಮುನಿರಾಜು, ಶ್ರೀನಿವಾಸ್‌, ಸಿ.ಟಿ.ಎಂ. ನಾಗರಾಜ್‌, ಡಿ.ಆರ್‌. ಬಾಲರಾಜ್‌, ಮುನಿಯಪ್ಪ, ಮುನಿರಾಜಪ್ಪ, ಎಂ. ಜಗದೀಶ್‌ ಇದ್ದರು.

ಸಮುದಾಯಕ್ಕೆ ರಾಜಕೀಯ ಶಕ್ತಿ ಅಗತ್ಯ

ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾತನಾಡಿ, ‘ಸರ್ಕಾರಿ ಸೌಲಭ್ಯಗಳ ಸಮರ್ಪಕ ಸದುಪಯೋಗದಲ್ಲಿ ಸೋತ ಕಾರಣ ಇಂದಿಗೂ ಮಾದಿಗರು ಹಿಂದುಳಿದಿದ್ದಾರೆ. ರಾಜಕೀಯ ಶಕ್ತಿ ಇರುವ ಮುಖಂಡರು ಒಗ್ಗಟ್ಟಿನಿಂದ ಬೇಡಿಕೆಗಳನ್ನು ಸರ್ಕಾರ ಮುಂದೆ ಮಂಡಿಸಬೇಕು’ ಎಂದು ಒತ್ತಾಯಿಸಿದರು.

ಮುಂದಿನ ಚುನಾವಣೆಯಲ್ಲಿ ಪಕ್ಷಾತೀತವಾಗಿ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡುವ ಮೂಲಕ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT