ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಬೀದಿನಾಯಿಗಳ ಹಾವಳಿ: ಮನೆಯಿಂದ ಹೊರ ಬರಲು ಭೀತಿ

Published 17 ನವೆಂಬರ್ 2023, 7:33 IST
Last Updated 17 ನವೆಂಬರ್ 2023, 7:33 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ಬೀದಿನಾಯಿಗಳ ಸಂತತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರು ಮನೆಯಿಂದ ಆತಂಕದಿಂದ ಹೊರ ಬರುವಂತಾಗಿದೆ.

ಪುರಸಭೆಯವರು ಬೀದಿನಾಯಿಗಳಿಗೆ ಕಡಿವಾಣ ಹಾಕಲು ನಡೆಸುತ್ತಿರುವ ಪ್ರಯತ್ನಗಳು ಫಲಿಸಿದ ಕಾರಣ ನಾಗರಿಕರು ಹೈರಾಣಾಗಿದ್ದಾರೆ.

ಮುಖ್ಯರಸ್ತೆಗಳು ಸೇರಿದಂತೆ ಪಟ್ಟಣದ ಬೀದಿ ಬೀದಿಗಳಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು, ಯಾವ ಸಮಯದಲ್ಲಿ ಜನರ ಮೇಲೆರಗುತ್ತವೆ ಎನ್ನುವುದು ಗೊತ್ತಾಗುವುದಿಲ್ಲ. ಕೋಲಾರ ಮುಖ್ಯರಸ್ತೆಯ ಕೂಬಾ ಮಸೀದಿಯ ಸಮೀಪ, ಶಿಡ್ಲಘಟ್ಟ ಕ್ರಾಸ್, ಮಂಡಿಬೆಲೆ ರಸ್ತೆ, ಭೈಪಾಸ್ ರಸ್ತೆ, ಮುಂತಾದ ಕಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮಲಗಿರುತ್ತವೆ. ಇದ್ದಕಿದ್ದಂತೆ ಜನರ ಮೇಲೆ ದಾಳಿ ಮಾಡುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉರ್ದು ಶಾಲೆ, ಬಾಲಕರ ಶಾಲೆ, ಮತ್ತು ರೂಬಿ ಶಾಲೆಯ ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಶಾಲೆ ಬಿಟ್ಟಾಗ ತುಂಬಾ ಭಯದಿಂದ ನಾಯಿಗಳ ನಡುವೆ ಓಡಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ತಿಳಿಸಿದರು.

10 ವರ್ಷಗಳ ಹಿಂದೆ ಪಟ್ಟಣದಲ್ಲಿ ಬೀದಿನಾಯಿಗಳು ಹಿಡಿಯುವುದಕ್ಕಾಗಿ ಒಂದೊಂದು ನಾಯಿಗೆ ₹125 ಟೆಂಡರ್ ನೀಡಿ, ಹಿಡಿಸಿದ್ದರು. ಆದರೆ, ನಾಯಿಗಳನ್ನು ಹಿಡಿದ ಅವರು, ರಾತ್ರಿಯ ವೇಳೆ ಪಟ್ಟಣಕ್ಕೆ ಸಮೀಪದ ಅರಣ್ಯ ಪ್ರದೇಶಗಳಲ್ಲಿ ಬಿಟ್ಟು ಹೋಗಿದ್ದರ ಪರಿಣಾಮ, ಪುನಃ ನಾಯಿಗಳೆಲ್ಲಾ ಪಟ್ಟಣಕ್ಕೆ ಬಂದಿದ್ದರಿಂದ ನಾಯಿಗಳ ಸಂಖ್ಯೆ ಹೆಚ್ಚಾಯಿತು ಎನ್ನುತ್ತಾರೆ ಸ್ಥಳೀಯರು.

ಮಾಂಸದ ಅಂಗಡಿಗಳ ಸಂಖ್ಯೆ ಏರಿಕೆ: ಪುರಸಭೆಯಿಂದ ಅಧಿಕೃತವಾಗಿ ಪರವಾನಗಿ ಪಡೆಯದೇ ಮುಖ್ಯರಸ್ತೆಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಮಾಂಸದ ಅಂಗಡಿಗಳಿಂದಾಗಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಮಾಂಸದ ಅಂಗಡಿಗಳಲ್ಲಿನ ತ್ಯಾಜ್ಯವನ್ನು ತಂದು ಬೈಪಾಸ್ ರಸ್ತೆ, ಚಿಕ್ಕಬಳ್ಳಾಪುರ ರಸ್ತೆಗಳಲ್ಲಿ ಸುರಿಯುತ್ತಿರುವ ಕಾರಣ, ಅಲ್ಲಿಯೂ ನಾಯಿಗಳು ಹೆಚ್ಚಾಗಿ ಬೀಡುಬಿಟ್ಟಿವೆ.

‘ಪ್ರತಿನಿತ್ಯ 2-3 ಜನ ಬೀದಿನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ಬರುತ್ತಾರೆ. ತಿಂಗಳಿಗೆ 115 ಕ್ಕೂ ಹೆಚ್ಚು ಮಂದಿಗೆ ಚುಚ್ಚುಮದ್ದು ಕೊಡುತ್ತೇವೆ. ಬೇರೆ ತಾಲ್ಲೂಕುಗಳಿಂದಲೂ ಬರುತ್ತಾರೆ. ಮಾನವೀಯತೆಯಿಂದ ಒಂದು ಚುಚ್ಚುಮದ್ದು ಕೊಡುತ್ತೇವೆ ಆದರೆ, ಅವರು ಹತ್ತಿರವಿದೆ ಎಂದು ಪದೇ ಪದೇ ಬರುತ್ತಿರುತ್ತಾರೆ ಅವರನ್ನು ವಾಪಸ್ಸು ಕಳುಹಿಸಲೇಬೇಕಾಗಿದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ತಿಳಿಸಿದ್ದಾರೆ.

ಸತತ ಪ್ರಯತ್ನ

‘ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಅವುಗಳನ್ನು ಹಿಡಿಯಲು ಅನುದಾನವನ್ನು ಮೀಸಲಿಟ್ಟಿದ್ದೇವೆ. ಟೆಂಡರ್ ಕರೆಯಬೇಕು. ಅವುಗಳನ್ನು ಹಿಡಿಸಿದರೆ ಎಬಿಸಿ ಮಾಡಿಸಬೇಕು ಅದಕ್ಕೆ ನಮ್ಮಲ್ಲಿ ಅವಕಾಶವಿಲ್ಲ’ ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT