ಬುಧವಾರ, ನವೆಂಬರ್ 13, 2019
23 °C

ಪ್ರವಾಸಿಗರ ಆಕರ್ಷಣೆಯ ತಾಣ ಮುತ್ಯಾಲಮಡುವು

Published:
Updated:
Prajavani

ಆನೇಕಲ್: ಮಳೆಗಾಲದಲ್ಲಿ ಮೈದುಂಬಿಕೊಳ್ಳುವ ತಾಲ್ಲೂಕಿನ ಮುತ್ಯಾಲಮಡುವು ಜಲಪಾತ ಇತ್ತೀಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಗತವೈಭವವನ್ನು ಮರಳಿ ಪಡೆಯುತ್ತಿದ್ದು ಹಸಿರಿನಿಂದ ಕಂಗೊಳಿಸುತ್ತಿದೆ.

ಉತ್ತಮ ಮಳೆಯಿಂದಾಗಿ ಮುತ್ಯಾಲಮಡುವು ಕಣಿವೆ ಹಸಿರಿನಿಂದ ಶೋಭಿಸುತ್ತಿದ್ದು ಜೀವಕಳೆ ತುಂಬಿದೆ. ಹಸಿರಿಗೆ ಕಳಶವಿಟ್ಟಂತೆ ಜಲಪಾತದಲ್ಲಿ ಮುತ್ತಿನಂತೆ ಧುಮುಕುತ್ತಿದ್ದ ನೀರು ಮಳೆಯಿಂದಾಗಿ ಭೋರ್ಗರೆಯುತ್ತಿದ್ದು ಪ್ರವಾಸಿಗರು ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಮುತ್ಯಾಲಮಡುವಿನ ಹಸಿರಿನ ಪ್ರಕೃತಿ ಸೌಂದರ್ಯವನ್ನು ನೋಡುವುದೇ ಒಂದು ಆನಂದ. ಜುಳುಜುಳು ಹರಿಯುವ ನೀರಿನ ನಿನಾದವನ್ನು ಆಲಿಸುತ್ತಾ ಹಸಿರಿನ ನಡುವೆ 400ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಇಳಿದು ಕಣಿವೆಯನ್ನು ತಲುಪಿದರೆ ಆಯಾಸ ಮರೆಯಾಗಿ ಆನಂದ ಉಂಟಾಗುತ್ತದೆ. 300ಅಡಿಗಳಿಗೂ ಎತ್ತರದಿಂದ ಮುತ್ತಿನೋಪಾದಿಯಲ್ಲಿ ಕಣಿವೆಯತ್ತ ಧುಮುಕುವ ನೀರಿನ ಜರಿ ಕೈಬೀಸಿ ಕರೆಯುತ್ತದೆ.

ಮುತ್ಯಾಲಮಡುವಿನಲ್ಲಿ ನೀರು ಮುತ್ತಿನಂತೆ ಧುಮುಕುವುದರಿಂದ ಈ ಜಲಪಾತಕ್ಕೆ ಮುತ್ಯಾಲಮಡುವು ಎಂದು ಹೆಸರು ಬಂದಿದೆ. ಕಣಿವೆಯ ಮೇಲಿನ ಮೆಟ್ಟಿಲುಗಳನ್ನು ಇಳಿಯಬೇಕಾದರೆ ಆಯಾಸವೆನಿಸುತ್ತದೆ. ಆದರೆ ಜುಳುಜುಳು ನೀರು ಪನ್ನೀರಿನ ಮುತ್ತಿನಂತೆ ಚಿಮ್ಮುವ ನೀರಿನ ಹನಿಗಳು ಆಯಾಸವನ್ನು ಮರೆಸಿ ಪ್ರವಾಸಿಗರಲ್ಲಿ ಉತ್ಸಾಹವನ್ನು ಮೂಡಿಸುತ್ತದೆ.

ಕಾಲಿನಲ್ಲಿ ಕಸುವುಳ್ಳವರು ಚಾರಣದಂತೆ ಮುತ್ಯಾಲಮಡುವಿನ ಬೆಟ್ಟವನ್ನು ಏರುವ ಪ್ರಯತ್ನವನ್ನು ಮಾಡುತ್ತಿದ್ದುದ್ದು ಕಂಡು ಬಂದಿತು. ಆಸಕ್ತಿ ಇರುವವರು ಕಣಿವೆಯಿಂದ ಕೆಲ ದೂರ ಅರಣ್ಯದಲ್ಲಿ ನಡೆದರೆ ಶಂಕುಚಕ್ರ ಜಲಪಾತವರೆಗೂ ಸಾಗಬಹುದು. ಒಂದು ಕಿ.ಮೀ.ಗೂ ಹೆಚ್ಚಿನ ದೂರ ಕಾಡಿನ ಮಧ್ಯೆ ನಡೆದು ಹೋಗುವುದು ಅದ್ಭುತ ಅನುಭವನ್ನು ಕಟ್ಟಿಕೊಡುತ್ತದೆ.

ಮುತ್ಯಾಲಮಡುವಿನ ಮೇಲ್ಭಾಗದಲ್ಲಿ ಮಯೂರ ಹೋಟೆಲ್ ಪಕ್ಕದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂನಲ್ಲಿ ಮಳೆಯಿಂದಾಗಿ ನೀರು ಭರ್ತಿಯಾಗಿದೆ. ಚೆಕ್ ಡ್ಯಾಂ ತುಂಬಿದ ನಂತರ ನೀರು ಕಣಿವೆಯತ್ತ ಸಾಗುತ್ತದೆ. ಹಾಗಾಗಿ ಕಣಿವೆಯಲ್ಲಿ ನೀರು ಮೇಲಿಂದ ಭೋರ್ಗರೆಯುತ್ತಾ ಜಲಪಾತದಂತೆ ಧುಮುಕುತ್ತಿದೆ. ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ನೀರಿನ ಜಲಪಾತ ತನ್ನ ವೈಭವವನ್ನು ಮರಳಿ ಪಡೆದಿದ್ದು ಪ್ರವಾಸಿಗರು ಭೇಟಿ ನೀಡಿದರೆ ಇಲ್ಲಿಯ ತಂಪನೆಯ ವಾತಾವರಣ ಹಾಗೂ ಜಲಪಾತ ಮನಸ್ಸಿಗೆ ಮುದ ನೀಡುತ್ತದೆ.

ಚೆಕ್‌ಡ್ಯಾಂನಲ್ಲಿ ನೀರು ತುಂಬಿರುವುದರಿಂದ ಬೋಟಿಂಗ್ ಪ್ರಾರಂಭಿಸಿದ್ದು ಯುವಕರು, ಮಕ್ಕಳಿಗೆ ಖುಷಿಯ ಅನುಭವ ನೀಡುತ್ತದೆ.

ಬೆಂಗಳೂರಿನಿಂದ ೪೦ಕಿ.ಮೀ. ದೂರದಲ್ಲಿರುವ ಮುತ್ಯಾಲಮಡುವಿಗೆ ಭೇಟಿ ನೀಡಲು ಸುಸಜ್ಜಿತವಾದ ರಸ್ತೆಯಿದೆ. ಆದರೆ ಬಸ್ ಸೌಕರ್ಯ ಇಲ್ಲ. ಸ್ವಂತ ವಾಹನಗಳಲ್ಲಿ ಬರಬಹುದು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಹಾಗೂ ವಸತಿ ಗೃಹಗಳು ಇಲ್ಲಿವೆ. ಒಂದು ದಿನದ ಹೊರ ಸಂಚಾರವನ್ನು ಸಂತಸದಿಂದ ಕಳೆಯಲು ಪ್ರಶಸ್ತ ಸ್ಥಳವಾಗಿದೆ. ಮಳೆ ಹಾಗೂ ಮೋಡದ ಈ ವಾತಾವರಣ ಮುತ್ಯಾಲಮಡುವು ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ. ಜೊತೆಗೆ ಭೋರ್ಗರೆಯುವ ಜಲಪಾತ ಮುತ್ತಿನ ನೀರಿನ ಹನಿಗಳ ಸಿಂಚನ ಪ್ರವಾಸಿಗರನ್ನು ವಾರಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು ಶನಿವಾರ ಭಾನುವಾರಗಳು ಜನಜಂಗುಳಿ ಜಮಾಯಿಸುತ್ತಿದೆ. ಹಲವು ವರ್ಷಗಳ ನಂತರ ಮುತ್ಯಾಲಮಡುವು ಮೈದುಂಬಿದ್ದು ಪ್ರವಾಸಿಗರ ಆಕರ್ಷಣೆಯಾಗಿದೆ.

ಹಲವು ವರ್ಷಗಳ ನಂತರ ಮುತ್ಯಾಲಮಡುವಿನಲ್ಲಿ ಕೆಲವು ಅಭಿವೃದ್ಧಿಯ ಕೆಲಸಗಳು ಪ್ರಾರಂಭವಾಗಿವೆ. ಮುತ್ಯಾಲಮಡುವು ಕಣಿವೆಗೆ ಮೆಟ್ಟಿಲುಗಳ ನಿರ್ಮಾಣ, ವೀಕ್ಷಣಾ ಗೋಪುರಗಳ ನಿರ್ಮಾಣ, ಸೇತುವೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಪ್ರಾರಂಭವಾಗಿದ್ದು ಸುಮಾರು ₹ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 4 ಕೋಟಿ ಹಣ ಮಂಜೂರಾಗಿದ್ದು ಇನ್ನೆರಡು ಕೋಟಿ ಹಣ ಬಿಡುಗಡೆಯಾಗಬೇಕಾಗಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಮುತ್ಯಾಲಮಡುವಿಗೆ ಸುಂದರ ರೂಪ ನೀಡುವ ಅವಶ್ಯಕತೆಯಿದೆ: ಬೆಂಗಳೂರಿನಿಂದ ಕೂಗಳತೆಯಲ್ಲಿ ಆನೇಕಲ್‌ನ ಸೆರಗಿನಲ್ಲಿರುವ ಮುತ್ಯಾಲಮಡುವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು ಇಲ್ಲಿಯ ಜಲಪಾತ ಹಾಗೂ ಕಣಿವೆಯನ್ನು ಕಣ್ತುಂಬಿಕೊಳ್ಳುವಂತಿದೆ. ಆದರೆ ಇಲ್ಲಿನ ಕೆಲವು ಅವ್ಯವಸ್ಥೆಗಳು ಪ್ರವಾಸಿಗರಲ್ಲಿ ಬೇಸರ ತರುತ್ತವೆ. ಇವುಗಳನ್ನು ಸರಿಪಡಿಸಿದರೆ ವರ್ಷವಿಡೀ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿ ಮುತ್ಯಾಲಮಡುವನ್ನು ರೂಪಿಸಬಹುದು.

ಮುತ್ಯಾಲಮಡುವಿನ ಕಣಿವೆಯ ಮೇಲ್ಭಾಗದಲ್ಲಿ ನಿರ್ಮಿಸಿರುವ ಉದ್ಯಾನ ಸೂಕ್ತ ನಿರ್ವಹಣೆಯಿಲ್ಲದೇ ಸೊರಗುತ್ತಿದೆ. ಸೂಕ್ತ ನಿರ್ವಹಣೆ ಮಾಡಿ ಕಾರಂಜಿ ವ್ಯವಸ್ಥೆ ಮಾಡಬಹುದು. ಮಕ್ಕಳಿಗಾಗಿ ಆಟದ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಭದ್ರತಾ ವ್ಯವಸ್ಥೆ ಮಾಡಬೇಕು. ಪ್ರವಾಸಿಗರು ನಿಶ್ಚಿಂತೆಯಿಂದ ಪ್ರಕೃತಿಯ ಸೊಬಗನ್ನು ಸವಿಯಲು ಸೂಕ್ತ ರಕ್ಷಣೆ ದೊರೆಯಬೇಕು. ಪ್ರವಾಸೋದ್ಯಮ ಇಲಾಖೆ ಮುತ್ಯಾಲಮಡುವಿನ ಕಾಯಕಲ್ಪಕ್ಕೆ ಸಂಕಲ್ಪ ಮಾಡಬೇಕಾಗಿದೆ ಪಡುತ್ತಾರೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುವ ಹಾಗೂ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುವ ಎಲ್ಲಾ ಅವಕಾಶಗಳಿದ್ದರೂ ಮುತ್ಯಾಲಮಡುವು ನಿರ್ಲಕ್ಷ್ಯಕ್ಕೆ ತುತ್ತಾಗಿ ಅಭಿವೃದ್ಧಿಯಿಂದ ದೂರಉಳಿದಿದೆ. ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಮುತ್ಯಾಲಮಡುವು ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್‌ ಪ್ಲಾನ್ ಸಿದ್ಧಗೊಳಿಸಬೇಕಾಗಿದೆ. ಪ್ಲಾಸ್ಟಿಕ್‌ ರಹಿತ ಹಾಗೂ ಮದ್ಯ ರಹಿತ ಮುತ್ಯಾಲಮಡುವನ್ನು ರೂಪಿಸಿ ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಇಲಾಖೆ ಹಾಗೂ ಜನಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ಪ್ರತಿಕ್ರಿಯಿಸಿ (+)