ವಾಕಿಂಗ್‌ ಪ್ರಿಯರ ನೆಚ್ಚಿನ ತಾಣ ನಂದಿ ಬೆಟ್ಟ

7
ವಾರದ ಸುಸ್ತು ಮರೆಸುವ ಭಾನುವಾರದ ವಿಹಾರ–1,700 ಮೆಟ್ಟಿಲು ಹತ್ತುವ ಚಾರಣಿಗರು

ವಾಕಿಂಗ್‌ ಪ್ರಿಯರ ನೆಚ್ಚಿನ ತಾಣ ನಂದಿ ಬೆಟ್ಟ

Published:
Updated:
Deccan Herald

ದೊಡ್ಡಬಳ್ಳಾಪುರ: ನಂದಿ ಬೆಟ್ಟ ಅಂದರೆ ಬೇಸಿಗೆಯಲ್ಲೂ ಊಟಿಯ ಅನುಭವ. ತಣ್ಣನೆ ಗಾಳಿಯಲ್ಲಿ ವಿಶ್ರಾಂತಿಗಾಗಿ, ಗಿಡ ಮರಗಳ ಮಧ್ಯೆ ಒಂದಿಷ್ಟು ಸಮಯ ತಿರುಗಾಡಿ ಬರಲು ಪ್ರವಾಸಿಗರು ಮಾತ್ರ ಹೋಗುತ್ತಿದ್ದರು. ಆದರೆ ಈಗ, ವಾಂಕಿಗ್‌ ಪ್ರಿಯರ ನೆಚ್ಚಿನ ತಾಣವಾಗಿದೆ ನಂದಿ ಬೆಟ್ಟ.

ಹೌದು, ದೊಡ್ಡಬಳ್ಳಾಪುರ ತಾಲ್ಲೂಕಿಗೆ ಅತ್ಯಂತ ಸಮೀಪ ಇರುವ ನಂದಿ ಬೆಟ್ಟಕ್ಕೆ ಸುಲ್ತಾನ್‌ ಪೇಟೆಯ ಕಲ್ಲು ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವವರ ಸಂಖ್ಯೆ ಹೆಚ್ಚಾಗಿದೆ. ಇಡೀ ವಾರ ಸರ್ಕಾರಿ ಕಚೇರಿಗಳು, ಕೈಗಾರಿಕೆಗಳು, ನೇಕಾರಿಕೆ ಉದ್ಯಮದಲ್ಲಿ ಮುಳುಗಿ ಹೋಗಿರುವ ಜನ ಭಾನುವಾರ ಬೆಳಿಗ್ಗೆ 5.30ರ ವೇಳೆಗೆ ಬೈಕ್‌, ಕಾರುಗಳನ್ನು ಏರಿ ಸುಲ್ತಾನ್‌ಪೇಟೆ ತಲುಪಿ, ಅಲ್ಲಿಂದ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಲು ಪ್ರಾರಂಭಿಸುತ್ತಾರೆ. 2.5 ಕಿ.ಮೀ ದೂರದ 1,700 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿ ತಲುಪಲು 60 ರಿಂದ 75 ನಿಮಿಷ ಬೇಕಾಗುತ್ತದೆ ಎನ್ನುತ್ತಾರೆ ಪ್ರತಿ ಭಾನುವಾರ ಬೆಳಿಗ್ಗೆ ಮೆಟ್ಟಿಲುಗಳ ಮೂಲಕ ನಂದಿ ಬೆಟ್ಟಕ್ಕೆ ವಾಕಿಂಗ್‌ ಹೋಗುವ ಗಂಗಾಧರಪ್ಪ.

ತುಂತುರು ಹನಿಗಳ ನಡುವೆ ವಾಕಿಂಗ್‌: ‘ವಾರಕ್ಕೆ ಒಮ್ಮೆ ಮೆಟ್ಟಿಲುಗಳ ಮೇಲೆ ಬೆಟ್ಟಕ್ಕೆ ಹತ್ತುವುದೇ ಒಂದು ರೋಮಾಂಚನಕಾರಿ ಅನುಭವ. ಅದರಲ್ಲೂ ಆಷಾಢಮಾಸ ಆರಂಭವಾದ ಮೇಲಂತು ನಮ್ಮ ತಲೆಯನ್ನು ತಾಗಿಸಿಕೊಂಡು ಬಿಳಿ, ಕಪ್ಪು ಮೋಡಗಳು ತುಂತುರು ಹನಿಗಳನ್ನು ಚುಮುಕಿಸುತ್ತ ಹೋಗುತ್ತವೆ. ಬೆಟ್ಟದ ಮೇಲಕ್ಕೆ ಮೇಲಕ್ಕೆ ಹೋಗುತ್ತಿರುವಂತೆ ಗಾಳಿ ಹಗುರವಾಗುತ್ತ ಹೋಗುತ್ತದೆ. ಬೆಟ್ಟದ ತುದಿ ತಲುಪಿ ಅಲ್ಲಿನ ಮರ ಗಿಡಗಳ ಮಧ್ಯದಲ್ಲಿ ಒಂದು ಸುತ್ತು ಹಾಕುತ್ತಿದ್ದಂತೆ ವಾರದ ಆಯಾಸವೆಲ್ಲ ಮಂಜಿನ ಹನಿಗಳಂತೆ ಕರಗಿ ಹೋಗುತ್ತದೆ’ ಎನ್ನುತ್ತಾರೆ ಯಲ್ಲಪ್ಪ.

ವಾರಪೂರ್ತಿ ಉಲ್ಲಾಸದ ದುಡಿಮೆ: ಸೋಮವಾರದಿಂದ ಶನಿವಾರ ಸಂಜೆವರೆಗೂ ಮಗ್ಗಗಳ ಮುಂದೆ ನಿಂತು ಕಾಲುಗಳು ಜೋಮು ಹಿಡಿದಂತೆ ಆಗಿರುತ್ತವೆ. ಭಾನುವಾರ ಬೆಳಿಗ್ಗೆ ಬೆಟ್ಟ ಹತ್ತಿ ಬರುವುದರಿಂದ ಇಡೀ ದೇಹಕ್ಕೆ ವ್ಯಾಯಾಮ ಆಗುವುದಲ್ಲದೆ, ಉಸಿರಾಟಕ್ಕೆ ಶುದ್ಧ ಗಾಳಿ ದೊರೆಯುತ್ತದೆ. ಇದರಿಂದ ದೇಹ ಹಗುರವಾಗಿ ವಾರವಿಡೀ ಉಲ್ಲಾಸದಿಂದ ದುಡಿಮೆಯಲ್ಲಿ ತೊಡಗಲು ಉತ್ಸಾಹ ಮೂಡುತ್ತದೆ ಎನ್ನುತ್ತಾರೆ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್‌.

ಹಣ್ಣಿನ ಉಪಹಾರ: ‘ನಂದಿ ಬೆಟ್ಟಕ್ಕೆ ವಾಕಿಂಗ್‌ ಹೋಗುವ ಒಂದಿಷ್ಟು ಸಮಾನ ಮನಸ್ಕರ ಗುಂಪುಗಳಿವೆ. ಗುಂಪಿನ ಎಲ್ಲ ಸದಸ್ಯರು ಹಣ್ಣುಗಳನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಾರೆ. ಬೆಟ್ಟ ಹತ್ತಿದ ಮೇಲೆ ಎಲ್ಲ ಹಣ್ಣುಗಳನ್ನು ಒಂದೆಡೆ ಸೇರಿಸಿ ಕಲ್ಲು ಬೆಂಚಿನ ಮೇಲೆ ಕುಳಿತು ಬೆಟ್ಟದಲ್ಲಿ ದೊರೆಯುವ ಗೋಣಿ, ಮುತ್ತುಗ, ಅರಳು ಮತ್ತಿತರೆ ಕಾಡು ಎಲೆಗಳಲ್ಲಿ ಹಾಕಿಕೊಂಡು ಮುಂಜಾನೆ ಉಪಾಹಾರ ಮುಗಿಸಿ ಬೆಟ್ಟ ಇಳಿಯುತ್ತೇವೆ’ ಎಂದು ಬೆಳಗಿನ ಹಣ್ಣಿನ ಉಪಹಾರದ ರುಚಿಯ ಬಗ್ಗೆ ನೆನಪು ಮಾಡಿಕೊಳ್ಳುತ್ತಾರೆ ರಾಜಘಟ್ಟ ನವೀನ್‌.

ಮಂಜಿನಲ್ಲಿ ಮಿಂದೇಳುವ ಯುವ ಸಮೂಹ: ಬೇಸಿಗೆಯ ಒಂದಿಷ್ಟು ತಿಂಗಳುಗಳನ್ನು ಹೊರತು ಪಡಿಸಿದರೆ ಸಾಮಾನ್ಯವಾಗಿ ನಂದಿ ಬೆಟ್ಟದಲ್ಲಿ ಮಂಜು ಮುಸುಕಿದ ವಾತಾವರಣ ಇದ್ದೇ ಇರುತ್ತದೆ. ಆದರೆ ಮುಂಗಾರು ಆರಂಭವಾಯಿತೆಂದರೆ ಮುಗಿಯಿತು, ಬೆಟ್ಟದಲ್ಲಿ ಹತ್ತು ಅಡಿಗಷ್ಟು ದೂರದಲ್ಲಿದ್ದರು ಯಾರು ಎಂದು ಕಾಣದಷ್ಟು ದಟ್ಟವಾದ ಮಂಜು ಮುಸುಕಿರುತ್ತದೆ. ತುಂತುರು ಮಳೆ ಹನಿಗಳು ಬೀಳುತ್ತಲೇ ಇರುತ್ತವೆ. ಹೀಗಾಗಿ ಭಾನುವಾರ ಇರಲಿ, ವಾರದ ಯಾವುದೇ ದಿನವಿರಲಿ ನಂದಿ ಬೆಟ್ಟ ಯುವಕ, ಯುವತಿಯರಿಂದ ತುಂಬಿ ಹೋಗಿರುತ್ತದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !