ಮಂಗಳವಾರ, ನವೆಂಬರ್ 19, 2019
26 °C

‘ರಾಮಾಯಣ ಮೌಲ್ಯಗಳ ಮರು ವಿಮರ್ಶೆ ಅಗತ್ಯ’

Published:
Updated:
Prajavani

ದೊಡ್ಡಬಳ್ಳಾಪುರ: ವಾಲ್ಮೀಕಿ ರಾಮಾಯಣದ ಅನೇಕ ವಿಚಾರಗಳು ಸಾಂಸ್ಕೃತಿಕ ವೈರುಧ್ಯತೆ ಹಾಗೂ ವರ್ಗ, ಪ್ರಾದೇಶಿಕ ಮೌಲ್ಯೀಕರಣವನ್ನು ಸಮಕಾಲೀನ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಇಲ್ಲಿನ ಪಾತ್ರಗಳು ಪ್ರತಿನಿಧಿಸುವ ಸಾಮಾಜಿಕ ಸ್ಥಿತಿಗತಿ ಹಾಗೂ ಪ್ರತಿಪಾದಿಸುವ ಮೌಲ್ಯಗಳ ಕುರಿತ ಮರು ಓದು ಇಂದಿನ ಅಗತ್ಯ ಎಂದು ಶ್ರೀದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಪ್ರತಿಪಾದಿಸಿದರು.

ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಮತ್ತು ಇಂಗ್ಲಿಷ್ ಭಾಷಾ ವಿಭಾಗಗಳ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ರಾಮಾಯಣ ಹಾಗೂ ಜೀವನ ಮೌಲ್ಯಗಳು ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರ್ಯ ಮತ್ತು ದ್ರಾವಿಡ ಪರಂಪರೆಯ ಪ್ರಾತಿನಿಧಿಕ ವ್ಯಕ್ತಿತ್ವಗಳ ನಡುವೆ ಇರುವ ಭಿನ್ನತೆ ಪ್ರಸ್ತುತ ಸನ್ನಿವೇಶದ ಅನೇಕ ಬೆಳವಣಿಗೆಗಳಿಗೆ ಪೂರಕವಾಗಿವೆ. ರಾಮಾಯಣದಲ್ಲಿ ಪ್ರಸ್ತಾಪವಾಗಿರುವ ಸ್ತ್ರೀ ಸಂವೇದನೆ, ಪುರುಷ ಪ್ರಧಾನ ವ್ಯವಸ್ಥೆ, ರಾಜನೀತಿಯ ತತ್ವಗಳು, ಅರಸೊತ್ತಿಗೆ ಒಳ ಹೊರಗುಗಳ ಬಗೆಗಿನ ವಿಮರ್ಶಾತ್ಮಕ ಚಿಂತನೆ ನಡೆಸಬೇಕಿದೆ. ಜತೆಗೆ ನಿರ್ಲಕ್ಷಿತ ವರ್ಗ, ವಸ್ತು ವಿಶೇಷತೆಗಳ ಕುರಿತು ಅಧ್ಯಯನಕ್ಕೆ ಪ್ರಚೋದಿಸುವ ಅಗತ್ಯವಿದೆ ಎಂದ ಅಭಿಪ್ರಾಯಪಟ್ಟರು.

ಎನ್‍ಎಸ್‍ಎಸ್ ಅಧಿಕಾರಿ ಡಾ.ಎಂ.ಚಿಕ್ಕಣ್ಣ ಮಾತನಾಡಿ, ವಾಲ್ಮೀಕಿ ಈ ಜಗತ್ತಿನ ಎದುರು  ದಾರ್ಶನಿಕವಾಗಿ ನಿಲ್ಲುವ ಮಹಾನ್ ವ್ಯಕ್ತಿ. ದಾರ್ಶನಿಕ ವ್ಯಕ್ತಿತ್ವಗಳನ್ನು ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತವಾಗಿ ನೋಡುವ ದೃಷ್ಟಿಕೋನ ಸರಿಯಲ್ಲ ಎಂದರು.

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜಯಂತಿ: ಇದೇ ಸಂದರ್ಭದಲ್ಲಿ ದೇಶದ ಕ್ಷಿಪಣಿ ವಿಜ್ಞಾನಿ, ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ 87ನೇ ಜನ್ಮದಿನ ಹಾಗೂ ಅಂತರರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಕಲಾಂ ಅವರ ಜೀವನ ಸಾಧನೆಗಳ ಪರಿಚಯ ಮಾಡಿಕೊಡಲಾಯಿತು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಿ.ಚೈತ್ರ, ಐಕ್ಯೂಎಸಿ ಸಂಯೋಜಕ ಆರ್.ಉಮೇಶ್, ಸಹಾಯಕ ಪ್ರಾಧ್ಯಾಪಕರಾದ ದಕ್ಷಿಣಾಮೂರ್ತಿ, ಪ್ರಕಾಶ್, ದಿವ್ಯ, ಶೃತಿ, ನವಾಜ್ ಷರೀಫ್, ರಮ್ಯ, ನಿಶಾತ್ ಸುಲ್ತಾನಾ, ಭವ್ಯ, ಸ್ವಾತಿ, ಗಿರೀಶ್ ಇದ್ದರು.

ಪ್ರತಿಕ್ರಿಯಿಸಿ (+)