ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ

ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತ ನಡುವೆ ಮಾತಿನ ಚಕಮಕಿ, ಕೆಲವೆಡೆ ಗುರುತಿನ ಚೀಟಿ ಗೊಂದಲ
Last Updated 19 ಏಪ್ರಿಲ್ 2019, 9:25 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಿಸಿಲಿನ ತೀವ್ರತೆಗೆ ಬೆಚ್ಚಿಬಿದ್ದ ಕ್ಷೇತ್ರದ ಮತದಾರರು ಬೆಳಿಗ್ಗೆ 7.30ರಿಂದಲೇ ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೂ ಮತದಾನ ಮಂದಗತಿಯಲ್ಲಿಯೇ ನಡೆದಿತ್ತು. ಬಿಸಿಲಿನ ತಾಪ ಕಡಿಮೆಯಾಗುತ್ತಲೇ ಮತ್ತೆ ಸಂಜೆ ಮತದಾನ ಚುರುಕುಗೊಂಡು ಮತದಾರರು ಸಾಲುಗಟ್ಟಿನಿಂತಿದ್ದರು.

ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ನಗರದ ಅಂಚಿನ ರಾಜಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಂಡಕೂರುತಿಮ್ಮನಹಳ್ಳಿ ಗ್ರಾಮದಿಂದ ನಗರಕ್ಕೆ ಹೋಗಲು ಸೂಕ್ತ ರಸ್ತೆ ಸೌಕರ್ಯ ಇಲ್ಲ. ಈ ಬಗ್ಗೆ ಕ್ಷೇತ್ರದ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳದ ಹೊರತು ಮತದಾನ ಮಾಡುವುದಿಲ್ಲ ಎಂದು ಗ್ರಾಮದ ಸಾರ್ವಜನಿಕರು ಮತದಾನ ಬಹಿಷ್ಕರಿಸಿದರು. ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಚ್‌.ದ್ಯಾಮಪ್ಪ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದ ನಂತರ 9 ಗಂಟೆಯಿಂದ ಮತಚಲಾಯಿಸಲು ಪ್ರಾರಂಭವಾಯಿತು.

ಅಂಗವಿಕಲರಿಗೆ ಆಟೊ: ದೂರವಾಣಿ ಕರೆ ಮಾಡಿದರೆ ನಗರಸಭೆಯಿಂದ ಅಂಗವಿಕಲರ ಮನೆಗೆ ಹೋಗಿ ಮತದಾರರನ್ನು ಆಟೊಗಳಲ್ಲಿ ಮತಗಟ್ಟೆಗೆ ಕರೆತಂದು ಮತಚಲಾಯಿಸಿದ ನಂತರ ಮತ್ತೆ ಮನೆಗೆ ಬಿಟ್ಟುಬರುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲ ಮತಗಟ್ಟೆಗಳಲ್ಲಿ ಸ್ಥಳೀಯ ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಗವಿಕಲರು ಸ್ವಂತ ಆಟೊಗಳಲ್ಲಿಯೇ ಮತಗಟ್ಟೆಗೆ ಬಂದು ತೆವಳುತ್ತ, ಕುಂಟುತ್ತಲೇ ಸುಡುಬಿಸಿಲಿನಲ್ಲಿಯೇ ಮತಗಟ್ಟೆಗೆ ಹೋಗಿ ಮತಚಲಾಯಿಸಿದರು.

ಮತದಾನ ಕೇಂದ್ರಕ್ಕೆ 95 ವರ್ಷದ ವಯೋವೃದ್ಧರು, ಅಂಗವಿಕಲರು, ಸಹಾಯಕರ ನೆರವಿನಿಂದ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಅಸಹಾಯಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಬಾಲಕರು ನೆರವಾದರು.

ಅಭಿನಂದನೆ: ನಗರದ ಮೂತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ 167ನೇ ಮತಗಟ್ಟೆಯಲ್ಲಿ ಅಂಧರೊಬ್ಬರು ತಮ್ಮ ಪತ್ನಿ ಸಹಾಯದಿಂದ ಮತಚಲಾಯಿಸಿದರು. ಇದೇ ಸಂದರ್ಭಕ್ಕೆ ಮತಗಟ್ಟೆ ವೀಕ್ಷಣೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕರೀಗೌಡ ಅವರು ಅಂಧರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸಿದ್ದನ್ನು ಬೆನ್ನುತಟ್ಟಿ ಅಭಿನಂದಿಸಿದರು. ಇದೇ ಶಾಲಾ ಆವರಣದಲ್ಲಿನ 169ನೇ ಬೂತ್‌ನಲ್ಲಿ ಮತಚಲಾಯಿಸಲು ಬೆಳಿಗ್ಗೆ 9ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಲುಗಟ್ಟಿನಿಂತಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಈ ಮತಗಟ್ಟೆಗೆ ಹೆಚ್ಚುವರಿ ಮತಚಲಾವಣೆ ಸಿಬ್ಬಂದಿ ನಿಯೋಜಿಸಿ ಮತದಾನ ವೇಗವಾಗಿ ನಡೆಯುವಂತೆ ಮಾಡಿದರು.

ಮತದಾನ ಸ್ಥಗಿತ: ವಿವಿ ಪ್ಯಾಟ್‌ ಯಂತ್ರದಲ್ಲಿನ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ತಾಲ್ಲೂಕಿನ 4 ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗಿ ಆರಂಭವಾಯಿತು. ಮತಗಟ್ಟೆ 45ರ ಖಾಲಿಪಾಳ್ಯ, 49 ಕಾಮನಅಗ್ರಹಾರ, 143 ನಗರದ ಕೋಟೆ ರಸ್ತೆ ಮತಗಟ್ಟೆ ಹಾಗೂ 152 ಮತಗಟ್ಟೆ ಸೋಮೇಶ್ವರ ಬಡಾವಣೆಯಲ್ಲಿ ವಿವಿ ಪ್ಯಾಟ್‌ ಬದಲಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಕತ್ತಿಹೊಸಹಳ್ಳಿ ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಚುನಾವಾಣೆ ಆರಂಭದ ವೇಳೆ ವಿವಿ ಪ್ಯಾಟ್‌ನಲ್ಲಿ ದೋಷಕೊಂಡು ಬಂದ ಕಾರಣ ಎರಡು ಗಂಟೆ ತಡವಾಗಿ ಆರಂಭವಾಯಿತು.

ಗಣ್ಯರಿಂದ ಮತದಾನ: ಶಾಸಕ ಟಿ.ವೆಂಕಟರಮಣಯ್ಯ ತಮ್ಮ ಸ್ವಗ್ರಾಮ ಅಪ್ಪಕಾರನಹಳ್ಳಿ ಮತಗಟ್ಟೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿದರು. ಮುಖಂಡ ಆರ್‌.ಎಲ್‌.ಜಾಲಪ್ಪ ಅವರು ತಾಲ್ಲೂಕಿಗೆ ಸಮೀಪದ ಅಲಿಪುರದಲ್ಲಿನ ಮತಗಟ್ಟೆಯಲ್ಲಿ, ಮುಖಂಡ ಆರ್.ಜಿ.ವೆಂಕಟಾಚಲಯ್ಯ ಹಣಬೆ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮುಖಂಡ ಜೆ.ನರಸಿಂಹಸ್ವಾಮಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿದರು.

ಗುರುತಿನ ಚೀಟಿ ಗೊಂದಲ:ಮತದಾರರಿಗೆ ಆಯೋಗದ ಗುರುತಿನ ಚೀಟಿ ಹಾಗೂ ಇತರೆ ಗುರುತಿನ ಚೀಟಿ ಕಡ್ಡಾಯಗೊಳಿಸಿದ್ದರಿಂದ ನಕಲಿ ಮತದಾನ ನಡೆಯಲು ಅಸ್ಪದವಿಲ್ಲದಂತಾಗಿತ್ತು. ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಚುನಾವಣಾ ಆಯೋಗವೇ ವಿತರಿಸಿದ್ದರಿಂದ ಮತಗಟ್ಟೆಗಳ ಬಳಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಡಿಮೆ ಸಂಖ್ಯೆಯಲ್ಲಿದ್ದ ದೃಶ್ಯ ಕಂಡುಬಂತು.

ಮತದಾರರ ಭಾವಚಿತ್ರ ಇಲ್ಲದ ಗುರುತಿನ ಚೀಟಿ ಇದ್ದವರಿಗೆ ಮತದಾನ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಇದು ಮತದಾರರ ಹಾಗೂ ಮತಗಟ್ಟೆ ಅಧಿಕಾರಿಗಳ ನಡುವೆ ಮಾತಿನ ಚಕಮುಕಿಗೂ ಕಾರಣವಾಗಿತ್ತು. ಆದರೆ, ಕೆಲವು ಮತಗಟ್ಟೆಗಳಲ್ಲಿ ಗುರುತಿನ ಚೀಟಿ ಪರಿಗಣಿಸಿ ಮತ ಚಲಾಯಿಸಲು ಅನುವು ಮಾಡಿಕೊಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT