ದೊಡ್ಡಬಳ್ಳಾಪುರ: ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಲ್ಲಿದ್ದ ಗೊಂದಲ, ಸಂದೇಹ, ಭಯವನ್ನು ಸೋಮವಾರ ನಡೆದ ‘ಪ್ರಜಾವಾಣಿ’ ನೇರ ಫೋನ್ ಇನ್ ಕಾರ್ಯಕ್ರಮ ನಿವಾರಿಸಿತು. ಜೊತೆಗೆ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ತುಂಬಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಹಯೋಗದಲ್ಲಿ ‘ಪ್ರಜಾವಾಣಿ’ ಸೋಮವಾರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಎನ್.ಶ್ರೀಕಂಠ ಮತ್ತು ವಿಷಯ ತಜ್ಞರು ವಿದ್ಯಾರ್ಥಿಗಳ ಕರೆ ಸ್ವೀಕರಿಸಿ ಸಮಾಧಾನದಿಂದ ಉತ್ತರಿಸಿದರು.
ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ 35ಕ್ಕೂ ಕರೆ ಬಂದವು. ಇದರಲ್ಲಿ ಗಣಿತ ಮತ್ತು ಇಂಗ್ಲಿಷ್ ಕುರಿತಾಗಿ ಹೆಚ್ಚು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರು.
‘ಕೋವಿಡ್ ನಂತರ ನಡೆಯುತ್ತಿರುವ ಮೊದಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದಾಗಿದೆ. ಹೀಗಾಗಿ 2019-20ನೇ ಸಾಲಿನಲ್ಲಿ ಇದ್ದ ಮಾದರಿಯಲ್ಲೇ ಪ್ರಶ್ನೆ ಪತ್ರಿಕೆ ಇರಲಿದೆ. ಪೂರ್ವಭಾವಿ ಪರೀಕ್ಷೆಯಲ್ಲೂ ಸಹ ಇದೇ ಮಾದರಿಯ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು’ ಎಂದು ಶ್ರೀಕಂಠ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಅಭ್ಯಾಸ ಹಾಗೂ ಅಂಕಗಳಿಗೆ ಅನುಕೂಲವಾಗುವಂತೆ ಪ್ರಶ್ನೆ, ಉತ್ತರಗಳನ್ನು ಒಳಗೊಂಡ ‘ಬೆಳಗು’ ಕಿರು ಹೊತ್ತಿಗೆಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಮುದ್ರಿಸಿದೆ. ಈ ಪುಸ್ತಕವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿದರೆ ಶೇ 100ರಷ್ಟು ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ನಿರಂತರವಾಗಿ ಭೇಟಿ ನೀಡುವ ಮೂಲಕ ಮಕ್ಕಳ ಕಲಿಕೆ, ಬೋಧನ ಬಗ್ಗೆ ನಿಗಾ ವಹಿಸಲಾಗಿದೆ. ಅನುಭವಿ ಶಿಕ್ಷಕರಿಂದ ಜಿಲ್ಲಾ ಮಟ್ಟದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ಪ್ರೇರಣಾತ್ಮಕ ಶಿಬಿರ ನಡೆಸಲಾಗಿದೆ ಎಂದರು.
ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಹನುಮಂತಪ್ಪ, ಕನ್ನಡ ವಿಷಯ ತಜ್ಞರಾದ ರಾಜು ಹೊಳೆಕಾರ್, ಇಂಗ್ಲೀಷ್ ವಿಷಯ ತಜ್ಞೆ ಎಂ.ಎಸ್.ವರ್ಧಿನಿ, ಗಣಿತ ವಿಷಯ ತಜ್ಞ ಎಚ್.ಆರ್.ಸ್ವಾಮಿ, ಎಚ್.ವಿ.ಸುರೇಶ್, ಸಮಾಜ ವಿಜ್ಞಾನ ವಿಷಯ ತಜ್ಞ ಆರ್.ಎನ್.ಭಾಸ್ಕರ್, ಹಿಂದಿ ವಿಷಯ ತಜ್ಞ ಡಿ.ಸುರೇಶ್‌ಕುಮಾರ್ ಇದ್ದರು.
ಕಾಯಿಲೆಯಿಂದ ಹೊರ ಬನ್ನಿ
ಪರೀಕ್ಷೆಗೆ ಪ್ರಯತ್ನ ದೃಢವಾಗಿರಬೇಕು. ರಾಹುಕಾಲ-ಗುಳಿಕಾಲ ನೋಡುತ್ತ ಕುಳಿತುಕೊಳ್ಳದೆ ಅಭ್ಯಾಸದಲ್ಲಿ ತೊಡಗಿಸಿಕೋಳ್ಳಬೇಕು. ಯೋಜನಾ ಬದ್ಧ ಸಿದ್ದತೆ ಇದ್ದರೆ ಮಾತ್ರ ಸುಲಭ ಯಶಸ್ಸು ಸಾಧ್ಯ.
ಡಾ.ರವಿ ಎಂ.ತಿರ್ಲಾಪುರ
ಸಿಇಒ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.