ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ

ಅಧಿಕಾರಿಗಳಿಗೆ ತರಾಟೆ, ಕೃಷಿ ಹೊಂಡ ಯೋಜನೆಯಲ್ಲಿ ಅವ್ಯವಹಾರ ಆರೋಪ
Last Updated 19 ಜನವರಿ 2019, 13:51 IST
ಅಕ್ಷರ ಗಾತ್ರ

ವಿಜಯಪುರ : ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಕೊಡಿಸಿದ್ದೀರಿ ಅವರಿಂದ ಸಾಲ ಮರು ಪಾವತಿಸುವವರೆಗೂ ಸಂಬಳ ಡ್ರಾ ಮಾಡಲು ಸಾಧ್ಯ ಇಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ ಎಂದು ಅಂಗವಾಡಿ ಶಿಕ್ಷಕಿ ಕಲಾವತಿ ಅವಲತ್ತುಕೊಂಡರೆ, ಶಾಲೆ ಆವರಣದಲ್ಲಿ ಶೌಚಾಲಯವಿಲ್ಲ, ಕೋತಿಗಳ ಹಾವಳಿ ಹೆಚ್ಚಾಗಿದೆ ಎಂದು ಶಿಕ್ಷಕ ದಿನೇಶ್ ಕುಮಾರ್ ದೂರಿದರು. ಹೀಗೆ; ಹಲವು ಸಮಸ್ಯೆಗಳನ್ನು ಗ್ರಾಮ ಸಭೆಯಲ್ಲಿ ತೆರೆದಿಟ್ಟರು.

ಮಂಡಿಬೆಲೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2018–19 ನೇ ಸಾಲಿನ ಗ್ರಾಮಸಭೆಯಲ್ಲಿ ಸಮಸ್ಯೆಗಳನ್ನು ಹೇಳಿಕೊಂಡರು.

ಧರ್ಮಪುರ ಗ್ರಾಮದಲ್ಲಿ 2009–10ನೇ ಸಾಲಿನಲ್ಲಿ ಅಡುಗೆ ಕೋಣೆ ನಿರ್ಮಿಸಲಾಗಿದೆ. ಯಾವುದೇ ಸಮಯದಲ್ಲಾದರೂ ನೆಲಕ್ಕುರುಳುವ ಸ್ಥಿತಿಯಲ್ಲಿದೆ. ಅದನ್ನು ತೆರವುಗೊಳಿಸುವಂತೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಮುಖ್ಯಶಿಕ್ಷಕ ಗೋಪಾಲಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ, ಈ ಕುರಿತು ಶಿಕ್ಷಣ ಇಲಾಖೆ ಸಂಪನ್ಮೂಲ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಎಲ್ಲ ವಿಚಾರಗಳನ್ನು ಇಲಾಖೆ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಅಂಗನವಾಡಿ ಕಾರ್ಯಕರ್ತೆಗೆ ಬ್ಯಾಂಕಿನಲ್ಲಿ ವೇತನ ನೀಡದಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಅವರು ದೂರವಾಣಿ ಮೂಲಕ ಸಿಡಿಪಿಒ ಅಶ್ವಥಮ್ಮ ಅವರಿಂದ ಉತ್ತರ ಪಡೆಯಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.

ಮಂಡಿಬೆಲೆ ಗ್ರಾಮದಲ್ಲಿ ಜಲಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಏಕಾಏಕಿ ಪಂಚಾಯಿತಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಮುಖಂಡ ನಾರಾಯಣಪ್ಪ ದೂರಿದರು.

ಇದಕ್ಕೆ ಕೆರಳಿದ ಜನರು, ಅಸಮರ್ಪಕ ಕಾರ್ಯದ ವಿರುದ್ಧ ಈಗಾಗಲೇ ಜಲಗಾರನ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮರುನೇಮಕ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಇಲಾಖೆ ಅಧಿಕಾರಿ ಬೇವಿನಕಟ್ಟಿ ಅವರು, ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಳಿಯೂರು ಸದಸ್ಯ ರಘುಪತಿ, ಕೃಷಿ ಹೊಂಡದಲ್ಲಿ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿದರು. ‌

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಮಾತನಾಡಿ, ಗ್ರಾಮ ಸಭೆಗಳು ಜನರಿಗೆ ಉಪಯುಕ್ತ ಮಾಹಿತಿ ಒದಗಿಸುವುದರ ಜತೆಗೆ ಯೋಜನೆಗಳು ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕೋತಿಗಳು, ಬೀದಿನಾಯಿಗಳ ಹಾವಳಿ ತಪ್ಪಿಸಲು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು, ಪ್ರಾಣಿದಯಾ ಸಂಘಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT