ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ಕಾರ್ಯಕರ್ತರ ಆಕ್ರೋಶ
Last Updated 1 ಅಕ್ಟೋಬರ್ 2019, 12:58 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ಕಾರ್ಯಕರ್ತರು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಡಾ.ಹರೀಶ್‍ನಾಯಕ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪಿವಿಸಿ ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜನಪ್ಪ, ‘ಕಸಬಾ ಹೋಬಳಿ ನಾಗಸಂದ್ರ ಗ್ರಾಮದ ಸರ್ವೆ ನಂಬರ್ 24ರಲ್ಲಿನ ಎರಡು ಎಕರೆ ಭೂಮಿಯಲ್ಲಿ ಈ ಹಿಂದೆ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಕಕ್ಕೇಹಳ್ಳಿ ಗ್ರಾಮದಲ್ಲಿನ ನಿವೇಶನ ರಹಿತ ಪರಿಶಿಷ್ಟ ಜಾತಿಯ ಬಡವರಿಗೆ ಹಕ್ಕು ಪತ್ರಗಳನ್ನು ನೀಡಿ ಖಾತೆಗಳನ್ನು ಮಾಡಿಕೊಡಲಾಗಿತ್ತು’ ಎಂದರು.

‘ಆದರೆ ಇದುವರೆಗೂ ನಿವೇಶನ ನೀಡಿರುವುದಿಲ್ಲ. ಈ ಕುರಿತು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದ ವೇಳೆ ತಹಶೀಲ್ದಾರ್ ಅವರಿಗೆ ಪತ್ರಬರೆಯುವುದಾಗಿ ಇಇಒ ದ್ಯಾಮಪ್ಪ ತಿಳಿಸಿ ಪತ್ರ ಬರೆದಿದ್ದರು. ಆದರೆ ತಹಶೀಲ್ದಾರ್ ರಮೇಶ್ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಿವಿಸಿ-ಸ್ವಾಭಿಮಾನ ಸಂಘಟನೆ ಜಿಲ್ಲಾ ಅಧ್ಯಕ್ಷ ಗೂಳ್ಯ ಹನುಮಣ್ಣ ಮಾತನಾಡಿ, ‘ತಾಲ್ಲೂಕಿನ ಚೊಕ್ಕನಹಳ್ಳಿಯ 4 ಎಕರೆ ಜಮೀನಿನಲ್ಲಿ ನೆಲ್ಲುಕುಂಟೆ ಗ್ರಾಮದ ಎಲ್ಲ ಜಾತಿಯ ಬಡವರಿಗೆ ನಿವೇಶನ ಕಲ್ಪಿಸುವುದು ಮತ್ತು ಸರ್ವೆ ನಂ12 ರಲ್ಲಿ ಫಾರಂ ನಂ53 ಅರ್ಜಿ ಸಲ್ಲಿಸಿದ್ದು ರೈತರಿಗೆ ಹಕ್ಕುಪತ್ರ ನೀಡಬೇಕು’ ಎಂದರು.

ಸಾಸಲು ಹೋಬಳಿಯ ಕನಕೇನಹಳ್ಳಿ ಗ್ರಾಮದ ಸರ್ವೆ ನಂ.58ರಲ್ಲಿನ 3 ಎಕರೆ 20 ಗುಂಟೆ ಶಾನುಬೋಗ ಇನಾಂತಿ ಜಮೀನನನ್ನು ಪ್ರಬಲರೊಬ್ಬರು ವಶಪಡಿಸಿಕೊಂಡಿದ್ದು ತೆರವುಗೊಳಿಸಿ ಅರ್ಹ ಬಡವರಿಗೆ ವಿತರಿಸಬೇಕಿದೆ ಎಂದರು.

ಅಲ್ಲದೆ ತೂಬಗೆರೆ ಹೋಬಳಿಯ ಕಾವಲಹಳ್ಳಿ ಸರ್ವೆ ನಂ 25,46,47,49 ಮತ್ತು 83 ರಲ್ಲಿನ 47 ಎಕರೆ 36 ಗುಂಟೆ ಪರಿಶಿಷ್ಟ ಜಾತಿ ವರ್ಗಗಳಿಗೆ ಮಂಜೂರಾಗಿರುವ ಜಮೀನಲ್ಲಿ ಅಕ್ರಮವಾಗಿ ಸೋಲಾರ್ ಪ್ಲಾಂಟ್ ನಿರ್ಮಾಣ ಕಾಮಗಾರಿಯನ್ನು ತಡೆಯುವುದು ಮತ್ತು ಸಾಸಲು ಹೋಬಳಿಯ ಹೊಸಕೋಟೆಯ 3 ಎಕರೆ ಜಮೀನನು ರಾಜಸ್ವ ನಿರೀಕ್ಷಕರು ನೀಡಿರುವ ವರದಿಯಂತೆ ಕೂಡಲೆ ದಲಿತ ಕುಟುಂಬಕ್ಕೆ ಖಾತೆ ದಾಖಲೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಬಿಬಿಎಂಪಿ ಶಾಖೆ ಅಧ್ಯಕ್ಷ ಮಧುರೈ, ತಾಲ್ಲೂಕು ಅಧ್ಯಕ್ಷ ಮದ್ದೂರಪ್ಪ, ಪ್ರಧಾನ ಕಾರ್ಯದರ್ಶಿ ರಾಮು, ಉಪಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಮೂರ್ತಿ ನೆಲ್ಲುಕುಂಟೆ, ಸಂಘಟನಾ ಕಾರ್ಯದರ್ಶಿ ನೆಲ್ಲುಕುಂಟೆ ಮೂರ್ತಿ, ನಗರ ಅಧ್ಯಕ್ಷ ಅಯೂಬ್ಖಾನ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಜಿಲ್ಲಾ ಉಪಾಧ್ಯಕ್ಷೆ ಲಕ್ಷಮ್ಮ, ನಗರ ಕಾರ್ಯದರ್ಶಿ ಜಬ್ಬಿ ಇದ್ದರು.

ಪ್ರತಿಭಟನೆಯ ವೇಳೆ ಮನವಿ ಸ್ವೀಕರಿಸಲು ತಹಶೀಲ್ದಾರ್ ಬಾರದ ಕುರಿತಂತೆ ಪ್ರತಿಭಟನಾಕಾರರು ಆಕ್ರೊಷ ವ್ಯಕ್ತಪಡಿಸಿ, ಹಿರಿಯ ಅಧಿಕಾರಿಗಳು ಬಾರದೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.

ನಂತರ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಡಾ.ಹರೀಶ್‍ನಾಯಕ್ ಮನವಿ ಪತ್ರ ಸ್ವೀಕರಿಸಿ ಹತ್ತು ದಿನಗಳ ಒಳಗಾಗಿ ದಾಖಲೆ ಪರಿಶೀಲಿಸಿ, ನಂತರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT