ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಸಾಮಾನ್ಯ ಸಭೆಯಲ್ಲಿ ಶಿಷ್ಟಾಚಾರದ ಪ್ರತಿಧ್ವನಿ

ಜಿಲ್ಲಾ ಪಂಚಾಯಿತಿಯಲ್ಲಿ ಬಿಸಿಯೇರಿದ ಚರ್ಚೆ
Last Updated 6 ನವೆಂಬರ್ 2019, 20:00 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಿಷ್ಟಾಚಾರದ ವಿಚಾರ ಪ್ರತಿಧ್ವನಿಸಿತು.

ಸಾಮಾನ್ಯ ಆರಂಭದಲ್ಲಿ ಅನುಪಾಲನ ವರದಿ ಮಂಡನೆಗೆ ಮೊದಲು ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್ ಹೊಸಕೋಟೆಯಲ್ಲಿ ₹ 150 ಕೋಟಿ ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಇಲಾಖೆ ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆ ಕಾಮಗಾರಿಗೆ ಅನುದಾನ ನೀಡಲಾಗಿದೆ. ಅದೇನು ತಾಲ್ಲೂಕು ಪಂಚಾಯಿತಿ ಕಾರ್ಯಕ್ರವೇ? ಕಾರ್ಯಕ್ರಮ ಅಹ್ವಾನಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎಂದು ಸಿ.ಇ.ಓ. ಎಂ.ಎನ್.ನಾಗರಾಜ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಪ್ರಶ್ನಿಸಿದರು.

ಈ ಮಾತಿಗೆ ಸದಸ್ಯರಾದ ಲಕ್ಷ್ಮೀನಾರಾಯಣ್, ಕೆ.ಸಿ.ಮಂಜುನಾಥ್ ಧ್ವನಿಗೂಡಿಸಿ ಅಸಮಾಧಾನ ವ್ಯಕ್ತಪಡಿಸಿದರು. ನಾವು ಅನೇಕ ಕಾಮಗಾರಿಗಳನ್ನು ಶಿಫಾರಸು ಮಾಡಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ಅನುದಾನ ತಂದಿದ್ದೇವೆ. ಜಿಲ್ಲಾ ಪಂಚಾಯಿತಿ ಸದಸ್ಯರ ಗೌರವ ಉಳಿಸುವ ಕೆಲಸ ಅಧ್ಯಕ್ಷರಾದವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಡಬೇಕಿತ್ತು, ಆದರೆ ಈ ಶಿಷ್ಟಾಚಾರ ಸಿದ್ಧಪಡಿಸಿದವರು ಯಾರು ಕರೆಯಿಸಿ ಎಂದು ಪಟ್ಟು ಹಿಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಮಾತನಾಡಿ, ನನ್ನನ್ನು ಆಹ್ವಾನಿಸಿದ್ದರೂ ಭಾಗವಹಿಸಿರಲಿಲ್ಲ, ಇದರ ಬಗ್ಗೆ ಮಾಹಿತಿ ಇಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಆಹ್ವಾನಿಸಬೇಕಿತ್ತು ಎಂದು ಸಮಜಾಯಿಸಿ ನೀಡಲು ಪ್ರಯತ್ನಿಸಿದರು.

ಸಿಇಒ ನಾಗರಾಜ್ ಮಾತನಾಡಿ, ‘ಆಹ್ವಾನ ಪತ್ರಿಕೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸುವಂತೆ ಪ್ರಕಟಿಸಲಾಗಿತ್ತು, ಮುಂದೆ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಷ್ಟಕ್ಕೆ ತೃಪ್ತರಾಗದ ಸದಸ್ಯರು, ಶಿಷ್ಟಾಚಾರ ಉಲ್ಲಂಘನೆಯಾಗಿರುವ ಕುರಿತು ಹಾಗೂ ಇಂದು ನಡೆದ ಸಭಾ ನಡವಳಿಕೆಯಲ್ಲಿ ಈ ವಿಷಯ ದಾಖಲಾಗಬೇಕು. ಸಭೆಯ ಠರಾವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಲುಪಿಸಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷೆ ಜಯಮ್ಮ ಮತ್ತು ಉಪಾಧ್ಯಕ್ಷೆ ಕನ್ಯಾಕುಮಾರಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲೇಬೇಕು. ಯಾವ ಯೋಜನೆ ಯಾವ ಕಾಮಗಾರಿ ಎಂಬುವುದೆ ಅರ್ಥವಾಗುತ್ತಿಲ್ಲ. ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸದಸ್ಯರಾದ ವಿ. ಪ್ರಸಾದ್‌, ಲಕ್ಷ್ಮೀನಾರಾಯಣ ಮಾತನಾಡಿ, ಪಿಡಿಒಗಳನ್ನು ಪದೇಪದೇ ವರ್ಗಾವಣೆ ಮಾಡುವ ಅಧಿಕಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಿದವರು ಯಾರು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇಲ್ಲದ ಅಧಿಕಾರ ಇವರಿಗೆ ಹೇಗೆ ಬಂತು ಎಂದು ಪ್ರಶ್ನಿಸಿದರು.

ಜಿ.ಪಂ.ಅಧ್ಯಕ್ಷೆ ಜಯಮ್ಮ ಮಾತನಾಡಿ, ಇದರ ಬಗ್ಗೆ ನನಗೆ ಗೊತ್ತಿಲ್ಲ, ವರ್ಗಾವಣೆಯಿಂದ ಅಭಿವೃದ್ಧಿ ಕುಂಠಿತವಾಗಲಿದೆ ಎಂದರು.

ಬೂದಿಗೆರೆಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಿಸುವ ಬಗ್ಗೆ ಡಿಎಚ್ಒ ಮಂಜುಳಾ ಮಾತನಾಡಿ, ‘ಆಸ್ಪತ್ರೆ ಆರಂಭ ಮಾಡಲು ಯಾವುದೇ ಅಡ್ಡಿ ಇಲ್ಲ. ಕಡತ ಸರ್ಕಾರದ ಮಟ್ಟದಲ್ಲಿದೆ, ಶೀಘ್ರ ಅರಂಭಿಸಲಾಗುವುದು’ ಎಂದು ಹೇಳಿದರು.

ಸದಸ್ಯ ನಂಜುಂಡಯ್ಯ ಮಾತನಾಡಿ ದಾಬಸ್ ಪೇಟೆಯಲ್ಲಿ ಮರಣೋತ್ತರ ಪರೀಕ್ಷೆ ಕೇಂದ್ರ ತ್ವರಿತವಾಗಿ ಆಗಬೇಕು ಎಂದು ಹೇಳಿದರು.

ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ‘ಉಗನವಾಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು ನಿವೇಶನ ನೀಡಲಾಗಿದೆ, ಈವರೆಗೆ ಕಟ್ಟಡ ಆರಂಭವಾಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT