ದಲಿತರ ಹಕ್ಕು ಕಸಿಯುವ ಯತ್ನಕ್ಕೆ ವಿರೋಧ

7
ಕೇಂದ್ರ ಸರ್ಕಾರದ ನಡೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ದಲಿತರ ಹಕ್ಕು ಕಸಿಯುವ ಯತ್ನಕ್ಕೆ ವಿರೋಧ

Published:
Updated:
Deccan Herald

ದೇವನಹಳ್ಳಿ: ದಲಿತರ ಹಕ್ಕು ರಕ್ಷಣೆ ಮಾಡದೆ ಅವರ ಹಕ್ಕುಗಳನ್ನು ಕಸಿಯಲು ಪ್ರಯತ್ನ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಮಹಾ ಜಾಥಾ ನಡೆಸಲಾಗುವುದು ಎಂದು ಎಂದು ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ದೂರಿದರು.

ಸೋಮವಾರ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನಾ ಜಾಥಾಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರ ಕೊಲೆ ನಡೆಯುತ್ತಿದೆ. ಅವರ ಮೇಲೆ ದೌರ್ಜನ್ಯ, ಅತ್ಯಾಚಾರ, ಸುಲಿಗೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಕಾಟಾಚಾರಕ್ಕೆ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಖುಲಾಸೆಯಾಗುವಂತೆ ಸ್ಥಳೀಯ ಸರ್ಕಾರ ನೋಡಿಕೊಳ್ಳುತ್ತಿದೆ. ಈ ವಿಚಾರದಲ್ಲಿ ಪ್ರಧಾನಿ ತುಟಿ ಬಿಚ್ಚುತ್ತಿಲ್ಲ ಎಂದು ಆರೋಪಿಸಿದರು.

ಅಲ್ಪ ಸಂಖ್ಯಾತ, ಮುಸ್ಲಿಂ ಹಾಗೂ ಕ್ರೈಸ್ತರ ವಿರುದ್ಧ ಕೋಮು ದ್ವೇಷವನ್ನು ಬಿತ್ತುವ ಸಂಚನ್ನು ಕೆಲ ಹಿಂದೂಪರ ಎಂದು ಹೇಳಿಕೊಳ್ಳುತ್ತಿರುವ ಸಂಘಟನೆಗಳು ಮಾಡುತ್ತಿವೆ ಎಂದು ದೂರಿದರು.

ದೇಶಭಕ್ತಿ ಹಾಗೂ ಗೋರಕ್ಷಣೆಯ ನೆಪದಲ್ಲಿ ಅಮಾಯಕರನ್ನು ಹತ್ಯೆ ಮಾಡುತ್ತಿರುವುದು ಅತ್ಯಂತ ದುರಂತ. ಪ್ರತಿಯೊಬ್ಬರ ರಕ್ಷಣೆಗೆ ಕೇಂದ್ರ ಸರ್ಕಾರ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಮಿತಿ ಸದಸ್ಯ ಎಚ್.ಕೆ. ವೆಂಕಟೇಶಪ್ಪ ಮಾತನಾಡಿ, ಕೇಂದ್ರ ಸರ್ಕಾರ ದಲಿತರ ಸಂರಕ್ಷಣೆಗಾಗಿ ಇರುವ ಕಾಯ್ದೆಯನ್ನು ಅಮಾಯಕ ಸವರ್ಣೀಯರ ಮೇಲೆ ಬಳಸಲಾಗುತ್ತಿದೆ ಎಂದು ದೂರಲಾಗುತ್ತಿದೆ. ಕಾಯ್ದೆಗೆ ತಿದ್ದುಪಡಿ ಮಾಡಿ ಆದೇಶಿಸಿರುವುದು ದಲಿತ ಸಮುದಾಯದಲ್ಲಿ ಅಭದ್ರತೆ ಉಂಟು ಮಾಡಿದೆ ಎಂದರು.

ಸಾಮಾಜಿಕ ನ್ಯಾಯದ ಪ್ರಾತಿನಿಧ್ಯ ನೀಡಲು ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಕಾರ್ಯಸೂಚಿ ಪ್ರಕಟಿಸಬೇಕು. ಕರ್ನಾಟಕ ಶಾಶ್ವತ ಹಿಂದುಳಿದ ಜಾತಿಗಳ ಆಯೋಗದ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಕ್ಕೊತ್ತಾಯ ಮಂಡಿಸಲಾಗುತ್ತಿದೆ’ ಎಂದರು.

ವಿಭಾಗೀಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ಜಿಲ್ಲಾ ಘಟಕ ಸಂಚಾಲಕರಾದ ಸಿ.ಮುನಿರಾಜು, ರಮೇಶ್, ಮುರುಳಿ, ಹಾರೋಹಳ್ಳಿ ವೆಂಕಟೇಶ್‌, ಸಿ.ಕೆಂಪರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !