ಗುರುವಾರ , ಆಗಸ್ಟ್ 11, 2022
23 °C
ಟೋಕನ್‌ ವ್ಯವಸ್ಥೆ ಜಾರಿಗೆ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಸೂಚನೆ

ರಾಗಿ ಖರೀದಿಗೆ ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ರಾಗಿ ಖರೀದಿಗೆ ನೋಂದಣಿ ಮಾಡಿಸಿಕೊಳ್ಳುವಾಗ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವ ಮೂಲಕ ಕಡ್ಡಾಯವಾಗಿ ಕೋವಿಡ್-19 ನಿಯಮ ಪಾಲಿಸಲು‌ ಟೋಕನ್ ವ್ಯವಸ್ಥೆ ಮಾಡಬೇಕು. ನೂಕುನುಗ್ಗಲು ಉಂಟಾಗದಂತೆ ಎಚ್ಚರವಹಿಸಬೇಕು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ರಾಗಿ ಖರೀದಿ ಕೇಂದ್ರ, ಶೇಖರಣೆಗೆ ಅಗತ್ಯ ಗೋದಾಮು ಮತ್ತು ಮುಂಜಾಗ್ರತಾ ಕ್ರಮಗಳ ಟಾಸ್ಕ್‌ಫೋರ್ಸ್‌ ಸಮಿತಿ‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿ ಜೊತೆಗೆ ಉಗ್ರಾಣಗಳ ಸ್ವಚ್ಛತಾ ಕಾರ್ಯ ನಡೆಸಬೇಕು. ಕೃಷಿ ಇಲಾಖೆ ಮತ್ತು ಮಾರ್ಕೆಟ್ ಫೆಡರೇಷನ್ ಸಹಯೋಗದಡಿ ಈ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕೋವಿಡ್ ಹಿನ್ನೆಲೆಯಲ್ಲಿ ರಾಗಿ ನೋಂದಣಿ ಕೇಂದ್ರಗಳಲ್ಲಿ ನೋಂದಣಿಗಾಗಿ ಹೆಚ್ಚು ಕೌಂಟರ್‌ ತೆರೆಯಲಾಗುವುದು. ಬೆಳೆ ಸಮೀಕ್ಷೆ ಸಂದರ್ಭದಲ್ಲಿ ನಮೂದಿಸಲಾಗದ ಪಹಣಿ ಸಂಖ್ಯೆಯಲ್ಲಿ ರಾಗಿ ಬೆಳೆದಿದ್ದಲ್ಲಿ, ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಹೆಲ್ಪ್‌ಡೆಸ್ಕ್ ನಂತಹ ಪ್ರತ್ಯೇಕ ಕೇಂದ್ರ ತೆರೆಯಬೇಕು ಎಂದು ಸೂಚಿಸಿದರು.

ಎಪಿಎಂಸಿಯಿಂದ ನೋಂದಣಿ ಮತ್ತು ಗುಣಮಟ್ಟ ಪರಿಶೀಲನೆ ಮಾಡಬೇಕು. ಒಬ್ಬ ರೈತರು ಒಂದು ಎಕರೆಗೆ ಹತ್ತು ಕ್ವಿಂಟಲ್, ಐದು ಎಕರೆಗೆ ಐವತ್ತು ಕ್ವಿಂಟಲ್ ರಾಗಿ ಕೊಡಬಹುದು. ಆದರೆ ನೋಂದಣಿ ಮಾಡಿಸಿದ ನಂತರ ತಿಳಿಸಲಾಗುವ ದಿನಾಂಕದಂದೇ ಖರೀದಿ ಕೇಂದ್ರಕ್ಕೆ ರಾಗಿ ತರಬೇಕು
ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್‌ ಕೆ. ನಾಯಕ್‌ ಮಾತನಾಡಿ, ರಾಗಿ ನೋಂದಣಿ ಕೇಂದ್ರದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ಸೌಲಭ್ಯ ಒದಗಿಸಲು ಕೈಗೊಳ್ಳಬೇಕು. ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಹೇಳಿದರು.‌

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಗಿರಿಜಾದೇವಿ, ಡಿವೈಎಸ್‌ಪಿ ಟಿ. ರಂಗಪ್ಪ, ಕೃಷಿ ಇಲಾಖೆಯ ಅಧಿಕಾರಿಗಳು, ಮಾರ್ಕೆಟಿಂಗ್ ಫೆಡರೇಷನ್‌ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.