‘ಜನಪ್ರತಿನಿಧಿಗಳು ಕಾಣೆಯಾಗಿದ್ದಾರೆ!’

7
ಸ್ಥಳೀಯ ಸಂಸ್ಥೆ ಚುನಾವಣೆಗೂ ಮೊದಲೇ ಪ್ರತಿನಿಧಿಗಳಿಂದ ಬೇರೆ ವಾರ್ಡ್‌ಗಳ ಕಾಳಜಿ

‘ಜನಪ್ರತಿನಿಧಿಗಳು ಕಾಣೆಯಾಗಿದ್ದಾರೆ!’

Published:
Updated:
Prajavani

ವಿಜಯಪುರ: ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಆಗುವ ಮೊದಲೇ ನಮ್ಮ ಪ್ರತಿನಿಧಿಗಳು ಕಾಣೆಯಾಗಿದ್ದಾರೆ’ ಎಂದು ಸ್ಥಳೀಯ ಮುಖಂಡ ಸೀನಪ್ಪ ಆರೋಪಿಸಿದರು.

‘ನಮ್ಮ ವಾರ್ಡ್‌ಗಳ ಪ್ರತಿನಿಧಿಗಳು ನಮ್ಮ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಬೇರೆ ವಾರ್ಡ್‌ಗಳ ಕಡೆಗೆ ಕಾಳಜಿ ತೋರಿಸುತ್ತಿದ್ದಾರೆ. ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಸ್ತೆಗಳು ಸರಿಯಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡಿಸುವಂತೆ ಕೇಳೋಣ ಎಂದರೆ, ಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ’ ಎಂದು ದೂರಿದರು.

ಅಧಿಕಾರಿಗಳ ಬಳಿಯಲ್ಲಾದರೂ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳೋಣ ಎಂದರೆ ಅವರೂ ಸ್ಪಂದಿಸುತ್ತಿಲ್ಲ. ನೀವು ಮೊದಲು ಕಂದಾಯ ಕಟ್ಟಿ ಆಮೇಲೆ ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತೇವೆ ಎನ್ನುತ್ತಾರೆ. ನಾವು ಪ್ರತಿ ವರ್ಷ ಕಂದಾಯ ಕಟ್ಟಿದರೂ ನೀವು ಕಡಿಮೆ ಕಟ್ಟಿದ್ದೀರಿ ಎಂದು ಪುನಃ ರಸೀದಿಗಳನ್ನು ಕೊಟ್ಟು ಹೋಗ್ತಾರೆ ಎಂದು ಆರೋಪಿಸಿದರು.

ಮುಖಂಡ ಚಂದ್ರು ಮಾತನಾಡಿ, ‘ಕಂದಾಯ ಇಲಾಖೆಯ ಭೂಮಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವವರಿಂದ ಒಂದು ವರ್ಷದ ಮಟ್ಟಿಗೆ ಕಂದಾಯವನ್ನು ಕಟ್ಟಿಸಿಕೊಂಡು ಪುರಸಭೆಯ ಖಾತೆಗಳಿಗೆ ಸೇರಿಸಿಕೊಳ್ಳಿ. ನಂತರ ಪ್ರತಿ ವರ್ಷ ಕಂದಾಯ ಕಟ್ಟಿಕೊಂಡು ಹೋಗ್ತಾರೆ, ಪುರಸಭೆಯವರು ಹತ್ತು ವರ್ಷಗಳ ಕಂದಾಯವನ್ನು ಒಮ್ಮೆಗೆ ಕಟ್ಟಿ ಎಂದು ಬಂದ್ರೆ ಕಟ್ಟಲಿಕ್ಕೆ ಸಾಧ್ಯನಾ’ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘ನಮ್ಮಲ್ಲಿ ವಾಸದ ಮನೆಗಳು 3,432 ಅಂಗಡಿಗಳೂ ಸೇರಿ 6,469 ಕಟ್ಟಡಗಳಿವೆ. ಕಂದಾಯ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಮತ್ತು ನಿವೇಶಗಳ ಸಂಖ್ಯೆ 5,591 ಆಸ್ತಿಗಳು ಖಾತೆ ಆಗಬೇಕು. ಇವುಗಳಿಂದ ಮಾತ್ರವೇ ಕಂದಾಯ ವಸೂಲಿಯಾಗುತ್ತವೆ. ನಮಗೆ ಒಟ್ಟು ₹6 ಕೋಟಿವರೆಗೂ ತೆರಿಗೆ ವಸೂಲಿಯಾಗಬೇಕು. ಒಂದು ತಿಂಗಳಿಗೆ ಪೌರಕಾರ್ಮಿಕರ ಸಂಬಳ, ಕಚೇರಿ ಖರ್ಚುಗಳು, ಸೇರಿದಂತೆ ₹15 ಲಕ್ಷ ಖರ್ಚಾಗುತ್ತಿದೆ. ನಮಗೆ ವಸೂಲಿಯಾಗುತ್ತಿರುವ ತೆರಿಗೆ ಹಣ 5 ಲಕ್ಷ. ಆದ್ದರಿಂದ ನಾವು ಸಮಸ್ಯೆ ಎದುರಿಸುವಂತಾಗಿದೆ’ ಎಂದರು.

‘ಕಂದಾಯ ಜಮೀನುಗಳಲ್ಲಿ ನಿರ್ಮಾಣ ಮಾಡಿಕೊಂಡಿರುವ ಮನೆಗಳು, ನಿವೇಶನಗಳನ್ನು ಬಿಟ್ಟು ನಮ್ಮ ಖಾತೆಯಾಗಿರುವ ಮನೆಗಳು, ನಿವೇಶಗಳಿಂದ ₹75 ಲಕ್ಷ ಗುರಿಯಿಟ್ಟುಕೊಂಡಿದ್ದೇವೆ. ಅದೂ ವಸೂಲಿಯಾಗುತ್ತಿಲ್ಲ. ಎನ್.ಓ.ಸಿ. ಸೇರಿದಂತೆ ಇತರೆ ಕೆಲಸಗಳಿಗೆ ಬಂದಾಗ ವಸೂಲಿ ಮಾಡಿಕೊಳ್ಳಬೇಕಾಗಿದೆ. ನಮ್ಮ ಪುರಸಭೆಯಿಂದ ಎಲ್ಲರಿಗೂ ಸೌಲಭ್ಯಗಳನ್ನು ಕೊಡುತ್ತಾ ಬಂದಿದ್ದೇವೆ’ ಎಂದರು. ಜನರು ಕಂದಾಯ ಕಟ್ಟಿದ್ದರೆ ಇನ್ನಷ್ಟು ಸೌಲಭ್ಯಗಳನ್ನು ಅವರಿಗೆ ಕೊಡಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !