ಭಾನುವಾರ, ಆಗಸ್ಟ್ 18, 2019
23 °C
ಜಲಶಕ್ತಿ ಅಭಿಯಾನದ ಮಹತ್ವ ಕುರಿತು ಪದವಿ ಮತ್ತು ಪಿ.ಯು. ಕಾಲೇಜುಗಳ ಪ್ರಾಂಶುಪಾಲರ ಸಭೆ

‘ಮಳೆ ನೀರು ಸಂಗ್ರಹ ಜವಾಬ್ದಾರಿ ಎಲ್ಲರದು’ 

Published:
Updated:
Prajavani

ದೇವನಹಳ್ಳಿ: ‘ಮಳೆ ನೀರು ಸಂಗ್ರಹ ವ್ಯವಸ್ಥೆ ಮೂಲಕ ನೀರು ಸಂಗ್ರಹಿಸಿ ಬಳಸುವ ಜವಾಬ್ದಾರಿಯನ್ನು ಎಲ್ಲರೂ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಲಶಕ್ತಿ ಅಭಿಯಾನದ ಮಹತ್ವ, ನೀರು ವ್ಯರ್ಥವಾಗದಂತೆ ತಡೆಯುವ ಕ್ರಮ, ವಿದ್ಯಾರ್ಥಿಗೊಂದು ಸಸಿ ಕುರಿತು ನಡೆದ ಜಿಲ್ಲೆಯಲ್ಲಿನ ಪದವಿ ಮತ್ತು ಪಿ.ಯು. ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಆರು ಸಾವಿರಕ್ಕಿಂತ ಹೆಚ್ಚು ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಒಬ್ಬ ವಿದ್ಯಾರ್ಥಿ ಕನಿಷ್ಠ ಹತ್ತು ಕುಟುಂಬಗಳಿಗೆ ಮಳೆ ನೀರಿನ ಸಂಗ್ರಹ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕೆಲಸ ಅಯಾ ಕಾಲೇಜಿನ ಪ್ರಾಂಶುಪಾಲರು ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಜಲಮೂಲ ರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಸಕ್ರಿಯವಾಗಿ ತೊಡಗಿಸಿಕೊಳ್ಳವಂತೆ ಮನವರಿಕೆ ಮಾಡಬೇಕಾಗಿದೆ’ ಎಂದು ಹೇಳಿದರು.

‘ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಜನ ಜಾನುವಾರು ತತ್ತರಿಸಿ ಹೋಗಿವೆ. ಇಲ್ಲಿ ತೀವ್ರ ಬರದ ಛಾಯೆ ಮುಂದುವರೆದಿದೆ. ವಾಡಿಕೆ ಕನಿಷ್ಠ ಮಳೆಯೂ ಸುರಿದಿಲ್ಲ. ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ವಾರ್ಷಿಕ 900 ಮಿ.ಮೀ ಮಳೆಯಾಗಬೇಕು. ದೇವನಹಳ್ಳಿ ಹಾಗೂ ಹೊಸಕೋಟೆ ವಾಡಿಕೆ ಮಳೆ ಪ್ರಮಾಣವೇ ಕಡಿಮೆ ಇದೆ. ಮಳೆ ನೀರು ಸಂಗ್ರಹ ಹೊರತು ಪಡಿಸಿದರೆ ಪರ್ಯಾಯ ಮಾರ್ಗವಿಲ್ಲ. ಪ್ರತಿಯೊಬ್ಬರೂ ಜಲಮೂಲ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಕೇಂದ್ರದ ನ್ಯಾಯಾಂಗ ಸಚಿವಾಲಯದ ನೋಡಲ್ ಜಂಟಿ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ‘ಈಗಾಗಲೇ ಜಿಲ್ಲೆಯಲ್ಲಿ ಅನೇಕ ಕಡೆ ಮಳೆ ನೀರು ಸಂಗ್ರಹಿಸಿ ಬಳಸುತ್ತಿರುವುದು ಉತ್ತಮ ಬೆಳೆವಣಿಗೆ. ಮಳೆ ನೀರು ಸಂಗ್ರಹದಿಂದ ನೀರಿನ ಕೊರತೆ ನೀಗಿಸಲು ಸಾಧ್ಯವಿದೆ. ಬಯಲುಸೀಮೆ ಪ್ರದೇಶದಲ್ಲಿ ಜಲ ಮೂಲ ರಕ್ಷಣೆಗೆ ಕೆರೆಗಳ ಅಭಿವೃದ್ಧಿಯಾಗಬೇಕು’ ಎಂದು ಹೇಳಿದರು.

‘ಜಲ ಶಕ್ತಿ ಅಭಿಯಾನದ ಮಹತ್ವ ಪ್ರತಿ ಕುಟುಂಬಕ್ಕೆ ತಲುಪಬೇಕು. ಈ ಹಿಂದಿ ಮಳೆಗಾಲದ ಗತವೈಭವ ಮರಳಿ ಪಡೆಯಬೇಕಾದರೆ ಸಸಿಗಳನ್ನು ನೆಟ್ಟು ಬೆಳೆಸಬೇಕು. ಭವಿಷ್ಯದ ಪೀಳೀಗೆಗೆ ನಾವು ನೀಡಬೇಕಾದ ಮಹತ್ವವಾದ ಕೊಡುಗೆ ಎಂದರೆ ಜಲ ಮೂಲ ರಕ್ಷಣೆ ಮತ್ತು ಪರಿಸರ ಸಂರಕ್ಷಣೆ’ ಎಂದರು.

‘ಸಾರ್ವಜನಿಕರ ಸಹಭಾಗಿತ್ವದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸಾಮಾಜಿಕ ಸೇವೆ ಎಂದು ತೊಡಗಿಸಿಕೊಳ್ಳಬೇಕು. ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಮತ್ತು ಪ್ರಗತಿ ಪರ ಸಂಘಟನೆಗಳು ಕೈಜೊಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ, ಉಪಕಾರ್ಯದರ್ಶಿ ಕರಿಯಪ್ಪ ಇದ್ದರು.

Post Comments (+)