ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಪುರಾತನ ಕಾಲದ ದೇಗುಲಕ್ಕೆ ಕಾಯಕಲ್ಪ

ದೊಡ್ಡಹುಲ್ಲೂರು ಗ್ರಾಮಸ್ಥರಿಂದ ಸೋಮೇಶ್ವರ ದೇವಾಲಯ ಜೀರ್ಣೋದ್ಧಾರ
Published 23 ಜನವರಿ 2024, 6:19 IST
Last Updated 23 ಜನವರಿ 2024, 6:19 IST
ಅಕ್ಷರ ಗಾತ್ರ

ಹೊಸಕೋಟೆ: ದೊಡ್ಡಹುಲ್ಲೂರಿನಲ್ಲಿ ಶಿಥಿಲಾವ್ಯವಸ್ಥೆ ತಲುಪಿದ್ದ ಹೊಯ್ಸಳರ ಕಾಲದಲ್ಲಿ ಸೋಮೇಶ್ವರ ದೇವಾಲಯ ಉಳಿಸಲು ಟೊಂಕ ಕಟ್ಟಿರುವ ಗ್ರಾಮಸ್ಥರು ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ.

ತಾಲ್ಲೂಕಿನ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದಲ್ಲಿ ಸುಮಾರು 800 ವರ್ಷಗಳ ಹಳೆಯದಾದ ಸೋಮೇಶ್ವರ ದೇವಾಲಯ ಪಾಳುಬಿದ್ದಿತು. ಪ್ರಾಚೀನ ದೇಗುಲ ರಕ್ಷಣೆಗೆ ಗ್ರಾಮಸ್ಥರೆಲ್ಲರು ಒಂದುಗೂಡಿ ಯೋಜನೆ ರೂಪಿಸಿದ್ದು, ಕಾಮಗಾರಿ ಆರಂಭಿಸಿದ್ದಾರೆ. ಮುಚ್ಚಿಹೋಗಿದ್ದ ದೇವಾಲಯದ ದಾರಿಗೆ ಮರುಜೀವ ನೀಡಿದ್ದಾರೆ.

ಗ್ರಾಮಸ್ಥರ ಅವಜ್ಞೆಯಿಂದ ಶಿಥಿಲಾವಸ್ಥೆಗೆ ತಲುಪಿ, ಪಾಳುಬಿದಿತ್ತು. ದೇವಾಲಯದ ಸುತ್ತಲು ಗಿಡಗಂಟೆ, ಮುಳ್ಳಿನ ಪೊದೆಗಳು ಬೆಳೆದು ಗ್ರಾಮಸ್ಥರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಇದೀಗ ದೇಗುಲ ಆವರಣ ಸ್ವಚ್ಛಗೊಳಿಸಲಾಗಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ?:

‘ದೇವಾಲಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಶಿಲ್ಪಿಗಳು ಮತ್ತು ತಜ್ಞರನ್ನು ಕರೆಸಿ ಈಗಾಗಲೆ ಚರ್ಚಿಸಿದ್ದೇವೆ. ಪ್ರಸ್ತುತ ಇರುವ ದೇವಾಲಯವನ್ನು ಉಳಿಸಿ ಅದರ ಮೇಲೆ ಮತ್ತೊಂದು ದೇವಾಲಯ ನಿರ್ಮಿಸುವುದೋ ಅಥವಾ ಶಿಥಿಲಾವಸ್ಥೆಯಲ್ಲಿರುವ ದೇವಾಲಯವನ್ನು ಮತ್ತೆ ಜೋಡಿಸುವುದೋ ಎಂಬುದರ ಬಗ್ಗೆ ಗ್ರಾಮಸ್ಥರು ಮತ್ತು ಇತಿಹಾಸ ತಜ್ಞರೊಡನೆ ಚರ್ಚೆ ನಡೆಯುತ್ತಿದೆ. ಎಲ್ಲರ ಅಭಿಪ್ರಾಯದಂತೆ ದೇವಾಲಯದ ಅಭಿವೃದ್ಧಿ ಕಾರ್ಯ ಶುರು ಮಾಡುತ್ತೇವೆ. ಆ ನಂತರ ಇದೊಂದು ಪ್ರವಾಸಿ ತಾಣ ಮಾಡುವ ಯೋಜನೆಯೂ ಇದೆ’ ಎಂದು ಗ್ರಾಮದ ಮುಖಂಡ ರಾಜಗೋಪಾಲ್ ತಿಳಿಸಿದರು.

ಇತಿಹಾಸ ಅಕಾಡೆಮಿ ಸದಸ್ಯರ ಭೇಟಿ:

ಗ್ರಾಮದ ಸೋಮೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯ ಶುರು ಮಾಡುತ್ತಿದ್ದಂತೆ ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರು ಗ್ರಾಮಕ್ಕೆ ಬಂದು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ತಂಡದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾದ ಪ್ರೊ.ಕೆ.ಆರ್.ನರಸಿಂಹನ್, ಕೆ.ಧನಪಾಲ್ ಮಂಚೇನಹಳ್ಳಿ, ಸುದರ್ಶನ್‌ರೆಡ್ಡಿ, ಕೇಶವಮೂರ್ತಿ, ಭಾರ್ಗವ ಅವರನ್ನೊಳಗೊಂಡ ತಂಡ ಐತಿಹಾಸಿಕ ಕುರುಹುಗಳು ನಾಶವಾಗದಂತೆ ಹೇಗೆ ದೇವಾಲಯವನ್ನು ನಿರ್ಮಿಸಬೇಕೆಂದು ಚರ್ಚಿಸಿದ್ದಾರೆ.

ಐತಿಹಾಸಿಕ ಗ್ರಾಮದ ಕೆರೆಯಂಗಳದಲ್ಲಿ ಸಂಪೂರ್ಣ ಕಲ್ಲುಗಳಿಂದಲೆ ನಿರ್ಮಿಸಿರುವ ಈ ದೇವಾಲಯವು ಚೋಳರ ಕಾಲದು ಎಂದು ಕೆಲವರು ಹೇಳಿದರೆ ಸೋಮೇಶ್ವರ ದೇವಾಲಯ ಗಂಗ ನೊಳಂಬರ ಕಾಲವಾದ ಹತ್ತನೇ ಶತಮಾನದಲ್ಲಿ ನಿರ್ಮಾಣವಾಗಿದೆಯೆಂದು ಹೇಳಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

11ನೇ ಶತಮಾನದಲ್ಲಿ ಈ ಭಾಗವು ಚೋಳರ ಆಳ್ವಿಕೆಗೆ ಒಳಪಟ್ಟು ಹೊಸ ವಿಂಗಡಣೆಯ ಭಾಗವಾಗಿ `ಪುಲಿಯೂರು ನಾಡು' ಆಗಿ ಬದಲಾಯಿತು. ಚೋಳರ ನಂತರ ಬಂದ ಹೊಯ್ಸಳರ ಮೂರನೇ ವೀರಬಲ್ಲಾಳದೇವನ ಕಾಲದಲ್ಲಿ ಈ ಭಾಗವು ಆತನ ಭಾವಮೈದುನರಾದ ದಾಡಿ ಸಿಂಗಯದಣ್ಣಾಯಕ ಮತ್ತು ಬಳ್ಳಪ್ಪದಣ್ಣಾಯಕರ ಆಡಳಿತದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಅತ್ಯುನ್ನತ ಸ್ಥಿತಿ ತಲುಪಿತು. ಇವರೆಲ್ಲರ ಕಾಲದಲ್ಲೂ ಸೋಮೇಶ್ವರ ದೇವಾಲಯ ಹಳೆಯ ಶಿವಲಿಂಗವನ್ನು ಹಾಗೇ ಉಳಿಸಿಕೊಂಡು ಪುನರ್ ನಿರ್ಮಾಣವಾಗಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT