ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಕ್ಕೆ ಮುತ್ತಿಗೆ: ಎಚ್ಚರಿಕೆ

111 ದಿನ ಪೂರೈಸಿದ ರೈತರ ಹೋರಾಟ
Last Updated 24 ಜುಲೈ 2022, 4:47 IST
ಅಕ್ಷರ ಗಾತ್ರ

ವಿಜಯಪುರ:ಚನ್ನರಾಯಪಟ್ಟಣದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನೇತೃತ್ವದಡಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಮುಖ್ಯಮಂತ್ರಿ ಭೇಟಿಯ ನಂತರವೂ ಮುಂದುವರಿದಿದ್ದು, 111 ದಿನಗಳನ್ನು ಪೂರೈಸಿದೆ.

ರೈತ ಮುಖಂಡರು, ಸರ್ಕಾರ ಹಾಗೂ ಕೆಐಎಡಿಬಿ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಸಮಿತಿಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ನಾವು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ. ಹೋರಾಟ ಆರಂಭವಾಗಿ ಏಳು ತಿಂಗಳು ಕಳೆಯುತ್ತಿವೆ. ಹೋರಾಟದ ಪ್ರತಿದಿನವೂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಎಲ್ಲಾ ಸಚಿವರನ್ನು ಭೇಟಿ ಮಾಡಿ ರೈತರ ಸಂಕಷ್ಟ ವಿವರಿಸಿದ್ದೇವೆ ಎಂದರು.

ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡಿ ಸಮಸ್ಯೆ ತಿಳಿಸಿದ್ದೇವೆ. ಒಂದು ವಾರದಲ್ಲಿ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ ನಂತರ ನಿಮ್ಮೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದರು. ಸಚಿವರು ನೀಡಿದ್ದ ಭರವಸೆ ಸುಳ್ಳಾದವು. ಮುಖ್ಯಮಂತ್ರಿ ನೀಡಿದ್ದ ಭರವಸೆಯೂ ಸುಳ್ಳಾಗಿದೆ. ಮುಂದೆ ನಮಗೆ ಉಳಿದಿರುವ ದಾರಿಯನ್ನು ಹುಡುಕಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರಾಂತ ರೈತ ಸಂಘದ ಮುಖಂಡ ಚಂದ್ರ ತೇಜಸ್ವಿ ಮಾತನಾಡಿ, ಈ ಭಾಗದ ರೈತ ಕುಟುಂಬಗಳಿಗೆ ಫಲವತ್ತಾದ ಭೂಮಿ ಎಷ್ಟು ಅನಿವಾರ್ಯವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟ ನಂತರವೂ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯಧೋರಣೆ ತಳೆದಿದೆ. ಕೈಗಾರಿಕೆಗೆ ಕೆಂಪುಹಾಸು ಹಾಕುತ್ತಿರುವುದು ದುರಂತ ಎಂದು ಟೀಕಿಸಿದರು.

ಆಹಾರದ ಕೊರತೆ ಉಂಟಾಗಲು ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ಸಂಪೂರ್ಣವಾಗಿ ಕೈಗಾರಿಕೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಸರ್ಕಾರ ರೈತರ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿದರು.

ರೈತ ಮುಖಂಡ ಅಶ್ವಥಪ್ಪ ಮಾತನಾಡಿ, ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಸರ್ಕಾರ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸುತ್ತಿದೆ. ಸರ್ಕಾರ ಇದೇ ರೀತಿಯ ಧೋರಣೆ ಅನುಸರಿಸುತ್ತಿದ್ದರೆ ಹೋರಾಟದ ದಿಕ್ಕು ಬದಲಿಸುವುದು ಅನಿವಾರ್ಯವಾಗುತ್ತದೆ. ಹೋರಾಟವು ಬೆಂಗಳೂರಿನ ಪ್ರೀಡಂ ಪಾರ್ಕ್ ತಲುಪಿದೆ. ಮುಂದಿನ ದಿನಗಳಲ್ಲಿ ವಿಧಾನಸೌಧ ತಲುಪಲಿದೆ ಎಂದು ತಿಳಿಸಿದರು.

ಮುಖಂಡರಾದ ಲಕ್ಷ್ಮಮ್ಮ, ನಾರಾಯಣಮ್ಮ, ವೆಂಕಟರಮಣಪ್ಪ, ಮೋಹನ್ ಕುಮಾರ್, ರಮೇಶ್, ಮಾರುತೇಶ್, ಕೃಷ್ಣಪ್ಪ, ನಂದೀಶ್, ಮುನಿರಾಜು, ಗಂಗಪ್ಪ, ನಂಜೇಗೌಡ, ರಾಮಾಂಜಿನಪ್ಪ, ವೆಂಕಟೇಶ್, ಗೋಪಾಲಪ್ಪ, ಲೋಕೇಶ್, ರಾಮು, ಆಂಜಿನಪ್ಪ, ಪುನೀತ್ ಕುಮಾರ್, ಮರಿಯಣ್ಣ, ಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT