ರೇಷ್ಮೆ ಬೆಳೆಗಾರರಿಗೆ ಗಾಯದ ಮೇಲೆ ಬರೆ

7
ಹತ್ತು ವರ್ಷದಲ್ಲಿ ಇದೇ ಮೊದಲ ಬಾರಿಗೆ ಹಿಪ್ಪುನೇರಳೆ ಸೊಪ್ಪು ಬೆಲೆಯಲ್ಲಿ ಕುಸಿತ

ರೇಷ್ಮೆ ಬೆಳೆಗಾರರಿಗೆ ಗಾಯದ ಮೇಲೆ ಬರೆ

Published:
Updated:
ವಿಜಯಪುರ ಸಮೀಪದ ಭಟ್ರೇನಹಳ್ಳಿಯ ಬಳಿ ಬೆಳೆದಿರುವ ಹಿಪ್ಪುನೇರಳೆ ಸೊಪ್ಪಿನಲ್ಲಿನ ಹಣ್ಣೆಲೆ 

ವಿಜಯಪುರ: ರೇಷ್ಮೆಗೂಡಿನ ಬೆಲೆ ಕುಸಿತ ನಂತರ ಈಗ ಹಿಪ್ಪುನೇರಳೆ ಸೊಪ್ಪಿನ ಬೆಲೆ ಕುಸಿದಿದೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತ ನಂಜುಂಡಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

‘1,500 ಅಡಿ ಆಳದ ಕೊಳವೆಬಾವಿಗಳಿಂದ ನೀರು ತೆಗೆದು ಹಿಪ್ಪುನೇರಳೆ ಸೊಪ್ಪಿನ ತೋಟ ಮಾಡಲಾಗಿದೆ. ಈಗ ರೇಷ್ಮೆಗೂಡಿಗೂ ಬೆಲೆಯಿಲ್ಲ. ಸೊಪ್ಪಿಗೂ ಬೇಡಿಕೆಯಿಲ್ಲದೆ ಕಂಗಾಲಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು. ‌

ಕಳೆದ ತಿಂಗಳಲ್ಲಿ ಆರಂಭವಾದ ರೇಷ್ಮೆಗೂಡಿನ ಬೆಲೆ ಕುಸಿತದ ಓಟ ಮುಂದುವರೆಯುತ್ತಲೇ ಇದೆ. ಅಧಿಕಾರಿಗಳು ಉತ್ಪಾದನೆ ಜಾಸ್ತಿಯಾಗಿರುವುದೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ. ಒಂದು ಮೂಟೆ ಹಿಪ್ಪುನೇರಳೆ ಸೊಪ್ಪಿನ ಬೆಲೆ ₹450ರಷ್ಟಿತ್ತು. ಈಗ ₹200ಕ್ಕೆ ಕುಸಿದಿದೆ. ರೇಷ್ಮೆಗೂಡಿನ ಬೆಲೆ ಕುಸಿತದಿಂದ ಸುಧಾರಿಸಿಕೊಳ್ಳುವ ಮುನ್ನವೇ ಸೊಪ್ಪಿನ ಬೆಲೆಯಲ್ಲಿ ಇಳಿಕೆ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಮುಖಂಡ ಸೋಮಶೇಖರಪ್ಪ ಮಾತನಾಡಿ, ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿಪ್ಪುನೇರಳೆ ಸೊಪ್ಪಿನ ಬೆಲೆ ಈ ಮಟ್ಟಿಗೆ ಇಳಿಕೆ ಕಂಡಿದೆ. ಬಹಳ ಮಂದಿ ರೈತರು ಹಿಪ್ಪುನೇರಳೆ ಕಿತ್ತು ಹಾಕಿದ್ದರು. ಗೂಡಿನ ದರ ಹೆಚ್ಚಾದಾಗ ಪುನಃ ನಾಟಿ ಮಾಡಿ ಉತ್ತಮ ಬೆಳೆ ಬೆಳೆದರು. ಈಗ ಹಣ್ಣೆಲೆ ಬೀಳುತ್ತಿದೆ. ಹಣ್ಣೆಲೆ ಬಿದ್ದರೆ ದನಕರುಗಳೂ ತಿನ್ನುವುದಿಲ್ಲ. ಗೂಡಿನ ಬೆಲೆ ಇಳಿಕೆ ಆಗಿರುವುದರಿಂದ ಹುಳು ಸಾಕಾಣಿಕೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ವಿವರಿಸಿದರು.

ರೈತ ಮುಖಂಡ ಭೈರೇಗೌಡ ಮಾತನಾಡಿ, ಸರ್ಕಾರ ಮಧ್ಯಪ್ರವೇಶ ಮಾಡಬೇಕು. ರೇಷ್ಮೆಗೂಡಿನ ಬೆಲೆ ಇಳಿಕೆಗೆ ಕಡಿವಾಣ ಹಾಕಬೇಕು. ಬಸವರಾಜ್ ವರದಿಯಂತೆ ₹280ಕ್ಕೆ ಬೆಲೆ ಕುಸಿದಾಗ ಮಾತ್ರ ಬೆಂಬಲ ಬೆಲೆ ಘೋಷಿಸುವುದನ್ನು ಬಿಡಬೇಕು. ಬೆಲೆ ಏರಿಕೆಯಾದಾಗಲೂ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ಬೆಲೆ ನೀಡಬೇಕು. ಬಜೆಟ್‌ನಲ್ಲೂ ನಮ್ಮ ಭಾಗಗಳಿಗೆ ಅನ್ಯಾಯವಾಗಿದೆ. ಈ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ನರೇಂದ್ರಬಾಬು ಮಾತನಾಡಿ, ತಾಲ್ಲೂಕಿನಲ್ಲಿ 2962 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗಿದೆ. ಉತ್ಪಾದನೆ ಹೆಚ್ಚಾಗಿರುವ ಕಾರಣ ಈ ರೀತಿ ಸಮಸ್ಯೆ ತಲೆದೋರಿದೆ. ರೇಷ್ಮೆಗೂಡು ಉತ್ಪಾದನೆಯೂ ಜಾಸ್ತಿಯಾಗಿದೆ. ಮೋಡ ಮುಸುಕಿದ ವಾತಾವರಣವೂ ಇದಕ್ಕೆ ಕಾರಣವಾಗಿದೆ. ಸಮಸ್ಯೆ ಬಗೆಹರಿಸಲು ಗಮನ ನೀಡುವುದಾಗಿ ಭರವಸೆ ನೀಡಿದರು.

ಹಿಪ್ಪುನೇರಳೆ ಬೆಳೆಯುವ ರೈತರು ಎಷ್ಟು ಮಂದಿ ಇದ್ದಾರೆ ಎನ್ನುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು  ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !