ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ದಿಕ್ಕೆಟ್ಟ ರೇಷ್ಮೆ ಬೆಳೆಗಾರರು: ನಷ್ಟದ ಭೀತಿ

ಸೊಪ್ಪು ಕೊಯ್ಲಿಗೆ ಸಂಕಷ್ಟ l ರೈತರಿಗೆ ನಷ್ಟದ ಭೀತಿ
Last Updated 22 ನವೆಂಬರ್ 2021, 7:31 IST
ಅಕ್ಷರ ಗಾತ್ರ

ವಿಜಯಪುರ:ಸತತವಾಗಿ ಬೀಳುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ರೈತರು, ರೇಷ್ಮೆ ಹುಳುಗಳಿಗೆ ಉತ್ತಮವಾದ ಹಿಪ್ಪುನೇರಳೆ ಸೊಪ್ಪು ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಹುಳುಗಳನ್ನು ಸಾಕಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಯಲ್ಲಿ ರೇಷ್ಮೆ ಹುಳುಗಳಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಹಿಪ್ಪುನೇರಳೆ ಸೊಪ್ಪು ಒದಗಿಸಲು ಸಾಧ್ಯವಾಗುತ್ತಿಲ್ಲ. ಸಿಗುವ ಸೊಪ್ಪಿನಲ್ಲಿ ಅಧಿಕ ತೇವಾಂಶ ಇರುತ್ತದೆ. ತೇವಾಂಶ ಭರಿತ ಸೊಪ್ಪು ಕೊಟ್ಟರೆ, ಸುಣ್ಣಕಟ್ಟು ರೋಗ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸೊಪ್ಪು ಒಣಗಿಸಿ, ನೀಡುವುದು ಕಷ್ಟವಾಗುತ್ತಿದೆ.

ಮಳೆ ಬಿಡುವು ನೀಡದ ಕಾರಣ ಜಮೀನಿನಲ್ಲಿ ಸೊಪ್ಪು ಕೊಯ್ಲು ಮಾಡಲು ರೈತರಿಗೆ ಸಮಸ್ಯೆ ಉಂಟಾಗಿದೆ. ಇದರಿಂದ ರೇಷ್ಮೆ ಹುಳುಗಳಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಸೊಪ್ಪು ಒದಗಿಸಲು ಸಾಧ್ಯವಾಗದಿರುವುದರಿಂದ ಹುಳುಗಳು ಉಪವಾಸ
ಇರುವಂತಾಗಿದೆ.

ನಿರಂತರ ಮಳೆಯಿಂದಾಗಿ ಭೂಮಿಯಲ್ಲಿ ಅತಿಯಾದ ತೇವಾಂಶ ಇರುವುದರಿಂದ ಸೊಪ್ಪು ಗುಣಮಟ್ಟ ಕಳೆದುಕೊಂಡಿದೆ. ಇದಲ್ಲದೆ, ರೇಷ್ಮೆ ಹುಳು ಸಾಕುವ ಮನೆಗಳು ಮಳೆಗೆ ವಿಪರೀತ ಥಂಡಿಯಾಗಿದ್ದು, ಹುಳುಗಳಿಗೆ ರೋಗ ಬಾಧೆ ಆವರಿಸಿರುವುದು ಕೂಡ ರೈತರ ಶ್ರಮಕ್ಕೆ ತಕ್ಕಂತೆ ಬೆಳೆ ಬೆಳೆಯಲು ಸಾಧ್ಯವಾಗದಂತಾಗಿದೆ.

ರೇಷ್ಮೆ ಹುಳುವಿನಲ್ಲಿ ಸುಣ್ಣಕಟ್ಟು ರೋಗ ಹೆಚ್ಚು ಕಾಣಿಸಿಕೊಳ್ಳಲಾರಂಭಿಸಿದೆ. ಈ ರೋಗ ಬಂದ ಹುಳುಗಳು ಸೊಪ್ಪು ತಿನ್ನದೆ ಚಟುವಟಿಕೆ ಕಳೆದುಕೊಂಡು ಸಾಯುತ್ತಿವೆ. ಸತ್ತ ಹುಳುವಿನ ದೇಹವು ಗಟ್ಟಿಯಾಗಿ ಮೈಮೇಲೆ ಬಿಳಿಯ ಪೌಡರ್‌ ವಸ್ತುವಿನ ರೂಪದಲ್ಲಿ ವೈರಾಣುಗಳು ಉತ್ಪತ್ತಿಯಾಗುತ್ತಿವೆ. ಹೀಗೆ ಉತ್ಪತ್ತಿಯಾದ ವೈರಾಣುಗಳು ಗಾಳಿ ಮೂಲಕ ಆರೋಗ್ಯವಂತ ಹುಳುವಿಗೆ ತಾಕುವುದರಿಂದ ಎಲ್ಲಾ ಹುಳುಗಳು ಸುಣ್ಣಕಟ್ಟು ರೋಗಕ್ಕೆತುತ್ತಾಗುತ್ತಿವೆ.

ಈಗಿರುವ ವಾತಾವರಣದಲ್ಲಿ ರೇಷ್ಮೆ ಹುಳುವಿನಲ್ಲಿ ಸಪ್ಪೆ, ಹಾಲು ತೆನೆ ರೋಗ ಕಾಣಿಸಿಕೊಳ್ಳುತ್ತಿದೆ. ಹಣ್ಣಾಗಿರುವ ರೇಷ್ಮೆ ಹುಳುವನ್ನು ಗೂಡು ಕಟ್ಟಲು ಚಂದ್ರಿಕೆಗೆ ಹಾಕಿದರೆ ಮೂರು ದಿನಗಳಾದರೂ ರೇಷ್ಮೆ ಹುಳು ಗೂಡು ಕಟ್ಟುತ್ತಿಲ್ಲ. ಇದರಿಂದ ರೈತರಿಗೆ ಮತ್ತಷ್ಟು ನಷ್ಟವಾಗುವಂತಾಗಿದೆ.

ಬೆಳೆಗಾರನಿಗೆ ನಷ್ಟ: ಪ್ರಸ್ತುತ ಒಂದು ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ ₹ 500ಕ್ಕೆ ತಲುಪಿದೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡಿಗೆ ಉತ್ತಮ ದರವಿದ್ದರೂ ಬೆಳೆ ಕೈಕೊಡುತ್ತಿರುವುದರಿಂದ ಬೆಳೆಗಾರರು ನಷ್ಟಅನುಭವಿಸುತ್ತಿದ್ದಾರೆ.

ಸ್ಥಳೀಯ ರೇಷ್ಮೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ರೇಷ್ಮೆ ಗೂಡಿನ ದರ ₹ 400ರಿಂದ ₹ 600 ಆಸುಪಾಸಿನಲ್ಲಿದೆ. ಈಗಿನ ಮಳೆಯ ವಾತಾವರಣದಲ್ಲಿ ಹುಳುಗಳು ರೋಗಕ್ಕೆ ತುತ್ತಾಗಿ ಬೆಳೆಗಾರರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.

‘ನೂರು ಮೊಟ್ಟೆ ರೇಷ್ಮೆ ಹುಳು ಸಾಕಲು 40 ಮೂಟೆ ಹಿಪ್ಪುನೇರಳೆ ಸೊಪ್ಪು ಬೇಕು. ಇದಕ್ಕೆ ₹ 20 ಸಾವಿರ ಖರ್ಚು ಮಾಡಬೇಕು. ಆದರೆ, ಈಗಿನ ವಾತಾವರಣಕ್ಕೆ ರೇಷ್ಮೆ ಹುಳು ರೋಗ ಬಾಧೆಯಿಂದ ಗೂಡು ಕಟ್ಟುತ್ತಿಲ್ಲ. ಹುಳು ಸಾಕಲು ಹಾಕಿದ ಬಂಡವಾಳ ಕೈಗೆ ಬರುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು’ ಎಂದು ರೇಷ್ಮೆ ಬೆಳೆಗಾರರಾಮಮೂರ್ತಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT