ಬುಧವಾರ, ಡಿಸೆಂಬರ್ 11, 2019
24 °C

ಖರ್ಗೆ ವಿರುದ್ಧ ಹೇಳಿಕೆಗೆ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸೋತಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನಿರಬೇಕು ಎಂದು ಹೇಳಿಕೆ ನೀಡಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಅಧಿಕಾರದ ಮದದಿಂದ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಎಸ್.ಸಿ.ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈತ್ರಿ ಸರ್ಕಾರದಲ್ಲಿನ ಶಾಸಕರನ್ನು ಖರೀದಿಸಿ, ಅವರಿಂದ ರಾಜೀನಾಮೆ ಕೊಡಿಸಿ, ಅವರು ಅನರ್ಹರಾಗಲು ಕಾರಣವಾಗಿರುವ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುತ್ತಿದ್ದಂತೆ ಅವರಿಗೆ ತಲೆ ನಿಲ್ಲುತ್ತಿಲ್ಲ. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಹಾಗೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸುತ್ತಿರುವ ಅವರು, ತಮ್ಮ ರಾಜಕೀಯ ಹಿನ್ನೆಲೆಯನ್ನು ನೆನಪು ಮಾಡಿಕೊಳ್ಳಬೇಕು’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಚುನಾವಣೆಯಲ್ಲಿ ಸೋತಿರಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಅಂದ ಮಾತ್ರಕ್ಕೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳುವ ದಾಟಿಯಲ್ಲಿ ಹೇಳಿಕೆ ನೀಡಿರುವ ಸೋಮಣ್ಣ ಅವರಿಗೆ ಬುದ್ಧಿ ಭ್ರಮಣೆಯಾಗಿರುವಂತಿದೆ. ಬಿಜೆಪಿಯ ಎಸ್.ಎಂ.ಕೃಷ್ಣ ಗೆದ್ದಿದ್ದಾರೆಯೇ? ಇಷ್ಟು ದಿನ ಸುಮ್ಮನಿದ್ದವರು ಇದ್ದಕಿದ್ದಂತೆ ಪ್ರಚಾರಕ್ಕೆ ಯಾಕೆ ಬಂದಿದ್ದಾರೆ’ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರನ್ನು ಸೋಲಿಸಲು ಬಿಜೆಪಿ ಯಾವ ರೀತಿಯ ಷಡ್ಯಂತ್ರ ರೂಪಿಸಿತ್ತು ಎನ್ನುವುದು ದೇಶಕ್ಕೆ ಗೊತ್ತಿದೆ. ಖರ್ಗೆ ಅವರು ಸೋತಿಲ್ಲ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಇಂದಿಗೂ ಇವೆ. ರಾಜ್ಯದ ಜನತೆಗೆ ಅವರ ಪರವಾಗಿದ್ದಾರೆ ಎಂದರು.

ಪ್ರತಿಕ್ರಿಯಿಸಿ (+)