ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿಗೂ ಪಿಂಚಣಿ: ‘ಸುಪ್ರೀಂ’ ತೀರ್ಪು

Last Updated 28 ಏಪ್ರಿಲ್ 2018, 19:50 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್‌ಗಳ ನಿವೃತ್ತ ನೌಕರರಿಗೆ ನೀಡಲಾಗುವ ಪಿಂಚಣಿ (ನಿವೃತ್ತಿ ವೇತನ) ಸೌಲಭ್ಯವನ್ನು ಗ್ರಾಮೀಣ ಬ್ಯಾಂಕ್‌ಗಳ ಸಿಬ್ಬಂದಿಗೂ ವಿಸ್ತರಿಸುವಂತೆ ಆದೇಶಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಕುರಿಯನ್‌ ಜೋಸೆಫ್‌ ನೇತೃತ್ವದ ವಿಭಾಗೀಯ ಪೀಠ ಇದೇ 25ರಂದು ನೀಡಿರುವ ಈ ತೀರ್ಪಿನಿಂದಾಗಿ ದೇಶದಾದ್ಯಂತ ಇರುವ 56ಕ್ಕೂ ಅಧಿಕ ಗ್ರಾಮೀಣ ಬ್ಯಾಂಕ್‌ಗಳ ಅಂದಾಜು ಒಂದು ಲಕ್ಷ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ದೊರೆಯಲಿದೆ.

ಪಿಂಚಣಿ ಸಮಾನತೆಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್‌ 2012ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠವು, ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರಿಗೆ ಪಿಂಚಣಿ ನೀಡುವ ನಿಟ್ಟಿನಲ್ಲಿ 1993ರ ಅಕ್ಟೋಬರ್‌ 29ರಂದು ರೂಪಿಸಿರುವ ಯೋಜನೆ ಅನ್ವಯ ಮೂರು ತಿಂಗಳೊಳಗೆ ಗ್ರಾಮೀಣ ಬ್ಯಾಂಕ್ ನೌಕರರ ಪಿಂಚಣಿ ಕುರಿತ ರೂಪುರೇಷೆ ಸಿದ್ಧಪಡಿಸಿ, ಯೋಜನೆ ಜಾರಿಗೊಳಿಸುವಂತೆ ನಿರ್ದೇಶನ ನೀಡಿದೆ.

‘ಗ್ರಾಮೀಣ ಬ್ಯಾಂಕ್‌ಗಳು ನಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೌಕರರಿಗೆ ಪಿಂಚಣಿ ನೀಡಿದಲ್ಲಿ ‌ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಹೊರೆಯಾಗಲಿದೆ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸಂದೀಪ್‌ ಸೇಠಿ ಪೀಠಕ್ಕೆ ವಿವರಿಸಿದರು. ಈ ವಿವರಣೆಯನ್ನು ವಿರೋಧಿಸಿದ ಗ್ರಾಮೀಣ ಬ್ಯಾಂಕ್‌ ಪಿಂಚಣಿದಾರರ ಸಮಿತಿ ಪರ ವಕೀಲರು, ಗ್ರಾಮೀಣ ಬ್ಯಾಂಕ್‌ ನೌಕರರು ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರಿಗಿಂತಲೂ ಅಧಿಕ ಪರಿಶ್ರಮದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದರು.

ಕೇಂದ್ರದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠವು, ಪಿಂಚಣಿ ಸೌಲಭ್ಯ ನೀಡುವುದಕ್ಕೆ ಮೂರು ತಿಂಗಳ ಗಡುವು ವಿಧಿಸಿ ಆದೇಶಿಸಿತು.

ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಅವಲೋಕಿಸಿ, ರಾಷ್ಟ್ರೀಯ ಕೈಗಾರಿಕಾ ನ್ಯಾಯಮಂಡಳಿ (ಎನ್‌ಐಟಿ)ಯು ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿಗೂ ಎಲ್ಲ ಯೋಜನೆಗಳನ್ನು ವಿಸ್ತರಿಸುವಂತೆ 1990ರಲ್ಲಿಯೇ ಆದೇಶ ನೀಡಿತ್ತು. ಇದರನ್ವಯ ಬಹುತೇಕ ಸೌಲಭ್ಯ ನೀಡಿದ್ದ ಕೇಂದ್ರ, ಪಿಂಚಣಿ ಮತ್ತು ಭವಿಷ್ಯನಿಧಿ ಸೌಲಭ್ಯ ಒದಗಿಸಿರಲಿಲ್ಲ.ಈ ಅಸಮಾನತೆಯನ್ನು ವಿರೋಧಿಸಿ 2003ರಲ್ಲೇ ಗ್ರಾಮೀಣ ಬ್ಯಾಂಕ್‌ ಪಿಂಚಣಿದಾರರ ಸಮಿತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌, 2011ರಲ್ಲಿ ಪಿಂಚಣಿ ಸಮಾನತೆ ಕಾಯ್ದುಕೊಳ್ಳಲು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT