ಪ್ರತಿಭಾ ಕಾರಂಜಿಗೆ ಉತ್ತೇಜನ ಅವಶ್ಯ

7
ಮಕ್ಕಳಲ್ಲಿ ವಿವಿಧ ಕಲೆಗಳ ಬೆಳವಣಿಗೆಗೆ ಸಹಕಾರಿ

ಪ್ರತಿಭಾ ಕಾರಂಜಿಗೆ ಉತ್ತೇಜನ ಅವಶ್ಯ

Published:
Updated:
Deccan Herald

ದೊಡ್ಡಬಳ್ಳಾಪುರ: ಮಕ್ಕಳಲ್ಲಿನ ಸೃಜನಶೀಲ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮಹತ್ವದ್ದಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು  ಮುಖ್ಯವಾಹಿನಿಗೆ ಬರಲು ಇದು ಸಹಕಾರಿಯಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ ಹೇಳಿದರು.

ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ 2018-19ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ಮಕ್ಕಳಿಗೆ ಆಂಗ್ಲಭಾಷೆ ಜೊತೆಗೆ ವಿದೇಶಿ ಸಂಸ್ಕೃತಿ ಹೇರಲಾಗುತ್ತಿದೆ. ಮಕ್ಕಳಿಗೆ ಕನ್ನಡ ಭಾಷೆ ಸರಿಯಾಗಿ ಕಲಿಸುತ್ತಿಲ್ಲ. ಮಕ್ಕಳಿಗೆ ಕಲೆ ಕಲಿಸುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡಬೇಕಿದೆ. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಮಾನ್ಯ ಜ್ಞಾನಕ್ಕೆ ಒತ್ತು ನೀಡಬೇಕಿದೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಮಕ್ಕಳಲ್ಲಿ ವಿವಿಧ ರೀತಿ ಪ್ರತಿಭೆ ಇರುತ್ತದೆ. ಆದರೆ, ಉತ್ತಮ ವೇದಿಕೆ ಕೊರತೆ ಇದೆ. ಬರೀ ಬಹುಮಾನ ಗಳಿಸುವುದಕ್ಕಷ್ಟೇ ಕಲಾ ಪ್ರದರ್ಶನ ಸೀಮಿತವಾಗಬಾರದು. ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಮಾತನಾಡಿ, ಶಿಕ್ಷಣ ಇಲಾಖೆಯಿಂದ ನಡೆಸಲಾಗುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಮಕ್ಕಳಲ್ಲಿ ವಿವಿಧ ಕಲೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಸದಾ ನಾಲ್ಕು ಗೋಡೆಗಳ ಮಧ್ಯದ್ಲಲೇ ಕುಳಿತು ಕಲಿಯುವ ಪಾಠಕ್ಕಿಂತಲೂ ಭಿನ್ನವಾಗಿರಲಿ ಎನ್ನುವ ಉದ್ದೇಶ ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಈಡೇರಿದೆ. ಕ್ಲಸ್ಟರ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸಲಾಗಿದೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಸುನಿಲ್ ಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಉಪಪ್ರಾಂಶು ಪಾಲರಾದ ಸರೋಜಮ್ಮ, ಕ್ಷೇತ್ರ ಸಮನ್ವಯಾಕಾರಿ ಹನುಮಂತಪ್ಪ.ಬಿ. ಹಿಂದಿನಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಜಯರಾಮಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎಂ.ಎಸ್.ರಾಜಶೇಖರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಸಿದ್ಧಗಂಗಯ್ಯ, ಕಾರ್ಯದರ್ಶಿ ಕೆ.ಜೈಕುಮಾರ್, ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ದಾಕ್ಷಾಯಿಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !