ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ: ಸಂಸದ

ಆನೇಕಲ್ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎನ್.ಎಸ್.ಪದ್ಮನಾಭ್ ಆಯ್ಕೆ
Last Updated 30 ಅಕ್ಟೋಬರ್ 2020, 11:07 IST
ಅಕ್ಷರ ಗಾತ್ರ

ಆನೇಕಲ್ : ಇಲ್ಲಿನ ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎನ್‌.ಎಸ್‌.ಪದ್ಮನಾಭ್‌ ಮತ್ತು ಉಪಾಧ್ಯಕ್ಷರಾಗಿ ಎಸ್‌.ಲಲಿತಾ ಅವರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌ ಸಿ.ಮಹಾದೇವಯ್ಯ ತಿಳಿಸಿದರು.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಎನ್‌.ಎಸ್‌.ಪದ್ಮನಾಭ್‌, ಬಿಜೆಪಿಯಿಂದ ಶ್ರೀಕಾಂತ್‌ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಎಸ್‌.ಲಲಿತಾ, ಬಿಜೆಪಿಯಿಂದ ಕೆ.ಟಿ.ಪವಿತ್ರಾ ನಾಮಪತ್ರ ಸಲ್ಲಿಸಿದ್ದರು.

27ಮಂದಿ ಪುರಸಭಾ ಸದಸ್ಯರು, ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ಬಿ.ಶಿವಣ್ಣ ಅವರು ಮತ ಚಲಾಯಿಸಿದರು. ಈ ಪೈಕಿ 19 ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗಳು ಪಡೆದು ವಿಜಯಶಾಲಿಯಾದರು. 10 ಮತಗಳನ್ನು ಬಿಜೆಪಿ ಅಭ್ಯರ್ಥಿಗಳು ಪಡೆದಿದ್ದಾರೆ.

2019ರ ಮೇ ತಿಂಗಳಿನಲ್ಲಿ ಪುರಸಭೆ ಚುನಾವಣೆ ನಡೆದಿತ್ತು. ಆಯ್ಕೆಯಾಗಿ ಒಂದೂವರೆ ವರ್ಷ ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವಿವಿಧ ಕಾರಣಗಳಿಂದ ಮುಂದೂಡಿತ್ತು. ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಯಿತು.

ನೂತನ ಅಧ್ಯಕ್ಷರನ್ನು ಸಂಸದ ಡಿ.ಕೆ.ಸುರೇಶ್‌ ಅಭಿನಂದಿಸಿ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ ಆನೇಕಲ್‌ ಮತದಾರರು ಕಾಂಗ್ರೆಸ್‌ಗೆ ನಿಚ್ಚಳ ಬಹುಮತ ನೀಡಿದ್ದಾರೆ. ಆನೇಕಲ್‌ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಆನೇಕಲ್‌ ಪುರಸಭೆ ವ್ಯಾಪ್ತಿಯ 27ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ತಯಾರಿಸಲಾಗುವುದು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕ್ರಿಯಾಶೀಲ ಚಟುವಟಿಕೆಗಳಿಂದ ಜನಸ್ನೇಹಿ ಆಡಳಿತ ನೀಡಬೇಕು. ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಪಟ್ಟಣದ ಬಹುದಿನಗಳ ಬೇಡಿಕೆಯಾದ ಥಳೀ ರಸ್ತೆ ವಿಸ್ತರಣೆ ಕಾರ್ಯಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಆನೇಕಲ್‌ನಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಬೆಂಗಳೂರು ಜಲಮಂಡಳಿಯೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಪುರಸಭೆ ನೂತನ ಅಧ್ಯಕ್ಷ ಎನ್‌.ಎಸ್.ಪದ್ಮನಾಭ್‌ ಮಾತನಾಡಿ, ಎಲ್ಲ ಸದಸ್ಯರನ್ನು ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಶಾಸಕರು ಮತ್ತು ಸಂಸದರ ಅನುದಾನ ಸದುಪಯೋಗಪಡಿಸಿಕೊಂಡು ಅಭಿವೃದ್ಧಿಗೆ ವೇಗ ನೀಡಲಾಗುವುದು ಎಂದರು.

ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಜಯಘೋಷ ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT