ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹಂಗು ಮೀರಿದ ಕಟ್ಟುವ ಕೆಲಸ

ಕೆತ್ತನೆಗಾರ ಮುಸ್ತಾಫ ಅವರ ದುಡಿಮೆ ಕೋಮು ಸಾಮರಸ್ಯಕ್ಕೆ ಸಾಕ್ಷಿ
Last Updated 2 ನವೆಂಬರ್ 2019, 13:19 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ನೂರಾರು ದೇಗುಲಗಳ ಕಂಬಗಳು, ಮೇಲ್ಭಾಗದ ಕೆತ್ತನೆಯಲ್ಲಿ ಇವರ ಕೈಚಳಕ ಕಾಣಬಹುದು. ಇವರ ಉಳಿ–ಸುತ್ತಿಗೆ ಏಟಿಗೆ ಕಲ್ಲು ಕೂಡ ಸುಂದರ ರೂಪ ತಾಳುತ್ತದೆ. ಇವರ ಕೆಲಸದ ಶ್ರದ್ಧೆ ಮತ್ತು ತಲ್ಲೀನತೆಗೆ ಧರ್ಮ, ಜಾತಿಯ ಹಂಗು ಇಲ್ಲ. ಕೆತ್ತನೆಗಾರ ಮುಸ್ತಾಫ ಅವರ ದುಡಿಮೆ ಕೋಮು ಸಾಮರಸ್ಯಕ್ಕೆ ಸಾಕ್ಷಿ.

ಬೆಂಗಳೂರಿನ ಯಲಹಂಕ, ಮಂಡ್ಯ ಜಿಲ್ಲೆ ಮೇಲುಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ 12 ದೇವಾಲಯಗಳು ಇವರ ಕೆತ್ತನೆಯಲ್ಲಿ ಅರಳಿ ನಿಂತಿವೆ. ತಲೆಮಾರುಗಳಿಂದಲೂ ಇವರ ಕುಟುಂಬ ಸದಸ್ಯರು ದೇವಾಲಯಗಳ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಮೈಲಾರಲಿಂಗೇಶ್ವರಸ್ವಾಮಿ ದೇಗುಲ ಕೂಡ ಮುಸ್ತಾಫ ಅವರ ಕೈಚಳಕದಲ್ಲಿ ನಿರ್ಮಾಣಗೊಳ್ಳುತ್ತಿರುವುದು ವಿಶೇಷ.

ಮೂಲತಃ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮದ ಮುಸ್ತಾಫ ಕಲ್ಲಿನ ಕೆತ್ತನೆ ಕೆಲಸವನ್ನು ತಂದೆ ಇಮಾಮ್‌ ಸಾಬ್‌ ಅವರಿಂದ ಕಲಿತರು. ಮೊದಲಿಗೆ ಉಳಿ,ಸುತ್ತಿಗೆ ಬಳಸಿ ಕೈಯಿಂದ ಕೆತ್ತನೆ ಕೆಲಸ ಮಾಡಲಾಗುತಿತ್ತು. 2005ರ ನಂತರ ಎಲ್ಲ ಕೆಲಸವನ್ನು ಪುಟ್ಟಯಂತ್ರ ಬಳಸಿ ಮಾಡಲಾಗುತ್ತಿದೆ. ದೇವಾಲಯದ ನಕ್ಷೆ, ವಿಸ್ತೀರ್ಣದ ಮಾಹಿತಿ ನೀಡಿದರೆ ಸಾಕು ಉಳಿದ ಎಲ್ಲ ಕೆಲಸ ಅವರೇ ಮಾಡುತ್ತಾರೆ. ದೇವರಮೂರ್ತಿ ವಿಗ್ರಹದಿಂದ ಮೊದಲುಗೊಂಡು ದೇವಾಲಯದ ಬಾಗಿಲಿನ ತೋರಣದವರೆಗೂ ಒಪ್ಪದಂತೆ ನಿರ್ಮಿಸಿಕೊಡುತ್ತಾರೆ.

ದೊಡ್ಡಬಳ್ಳಾಪುರ ನಗರದ ತೇರಿಬೀದಿಯಲ್ಲಿನ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯ ₹1.20ಕೋಟಿ, ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯ ₹1.15ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ ಎನ್ನುತ್ತಾರೆ ಮುಸ್ತಾಫ.

ಆಂಧ್ರಪ್ರದೇಶದ ಕುಪ್ಪಂ, ತಮಿಳುನಾಡಿನ ಮಹಾಬಲಿಪುರಂ, ರಾಜ್ಯದ ಕಾರ್ಕಳ ಸೇರಿದಂತೆ ವಿವಿಧ ಕಡೆಗಳಿಂದ ದೇವಾಲಯ ಕೆಲಸಕ್ಕೆ ಹೆಚ್ಚುವರಿ ಕೆಲಸಗಾರರನ್ನು ಕರೆತರಬೇಕಾಗಿದೆ. ರಾಜ್ಯದಲ್ಲಿ ಉತ್ತಮ ಕೌಶಲ ಹೊಂದಿರುವ ಕಾರ್ಮಿಕರ ಸಂಖ್ಯೆ ಕಡಿಮೆ ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ಮುಸ್ಲಿಮರು ಹಿಂದೂ ದೇವಾಲಯಗಳ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ಅಪರೂಪ. ಜನರು ಕೂಡ ಅನುಮಾನದಿಂದ ನೋಡುತ್ತಾರೆ. ಕೆಲಸದಲ್ಲಿನ ಶ್ರದ್ಧೆ ಮತ್ತು ನಂಬಿಕೆಯೇ ಬಂಡವಾಳ. ಈ ನಂಬಿಕೆ ಮೇಲೆಯೇ ಇದುವರೆಗೂ 100ಕ್ಕೂ ಹೆಚ್ಚಿನ ದೇವಾಲಯಗಳನ್ನು ನಿರ್ಮಿಸುವ ಕೆಲಸ ಮಾಡಿದ್ದೇನೆ’ ಎನ್ನುತ್ತಾರೆ ಅವರು.

ಆಂಜನೇಸ್ವಾಮಿ ವಿಗ್ರಹದಿಂದ ಮೊದಲುಗೊಂಡು ಶಿವ, ನಂದಿ, ಯಲ್ಲಮ್ಮದೇವಿ, ಗಂಗಮ್ಮದೇವಿ ಸೇರಿದಂತೆ ಎಲ್ಲ ರೀತಿಯ ಮೂರ್ತಿಗಳು ಇವರ ಕೈಯಲ್ಲಿ ಕೆತ್ತನೆಗೊಂಡಿವೆ. ‘ಜನರು ವಹಿಸಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇನೆ.ಧರ್ಮಕ್ಕೂ ಮೀರಿದ ಕೆಲಸ’ ಇದಾಗಿದೆ ಎಂದು ವಿನಮ್ರತೆಯಿಂದ ನುಡಿದರು.

ನಿಖರವಾದ ಶೈಲಿ ಇಲ್ಲ: ಈ ಹಿಂದೆ ಹೆಚ್ಚಾಗಿ ಈ ಭಾಗದಲ್ಲಿ ಜೋಳರ ಕಾಲದ ದೇವಾಲಯಗಳ ಶೈಲಿ ಇಷ್ಟಪಡುತಿದ್ದರು. ಆದರೆ, ಈಗ ಇಂತಹದ್ದೇ ಶೈಲಿ ಎನ್ನುವಂತಿಲ್ಲ. ದೇವಾಲಯದಲ್ಲಿ ಈಗಿನ ಆಧುನಿಕ ಸೌಲಭ್ಯ ಒಳಗೊಂಡ ಹಳತು, ಹೊಸತು ಸೇರಿದ ಸಮ್ಮಿಶ್ರ ಶೈಲಿಯಲ್ಲಿ ಎಂಜಿನಿಯರ್‌ಗಳು ದೇವಾಲಯದ ನೀಲನಕ್ಷೆ ಸಿದ್ಧಪಡಿಸುತ್ತಾರೆ. ಅದರಂತೆ ದೇವಾಲಯ ನಿರ್ಮಿಸಿ ಕೊಡಲಾಗುತ್ತದೆ ಎನ್ನುತ್ತಾರೆ ಮುಸ್ತಾಫ ಅವರ ಕುಟುಂಬದವರೇ ಆಗಿರುವ ಜಮೀರ್‌.

ಮಾಹಿತಿಗೆ: 9886334596

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT