ಶನಿವಾರ, ನವೆಂಬರ್ 16, 2019
24 °C

ಮನೆಗೆ ನುಗ್ಗಿ ನಗ–ನಗದು ಕಳವು

Published:
Updated:
Prajavani

ದೊಡ್ಡಬಳ್ಳಾಪುರ: ನಗರದ ಸೋಮೇಶ್ವರ ಬಡಾವಣೆಯಲ್ಲಿನ ಎಂಜಿನಿಯರ್‌ ಮುನಿರಾಜು ಎಂಬುವವರ ಮನೆಯ ಬಾಗಿಲ ಬೀಗ ಒಡೆದು ಸೋಮವಾರ ರಾತ್ರಿ ₹3 ಲಕ್ಷ ನಗದು, 2 ಕೆ.ಜಿ.ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.

ಮುನಿರಾಜು ಅವರು ಕುಟುಂಬ ಸಮೇತ ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿರುವ ಕಳ್ಳರು ಬೆಳಗಿನ ಜಾವ ಒಳ ನುಗ್ಗಿ ಬೀರುಗಳಲ್ಲಿದ್ದ ನಗದು, ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ಕಳ್ಳರ ಕೈಚಳಕ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಮೂರು ಜನ ಕಳ್ಳರ ಪೈಕಿ ಇಬ್ಬರು ಮುಖ ಕಾಣದಂತೆ ಬಟ್ಟೆ ಸುತ್ತಿಕೊಂಡಿದ್ದರು. ಒಬ್ಬ ವ್ಯಕ್ತಿಯ ಮುಖ ಮಾತ್ರ ಕಾಣುತ್ತಿದೆ. ಸುಮಾರು 20 ರಿಂದ 25 ವರ್ಷದ ಯುಕರಂತೆ ಕಾಣುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಸೋಮೇಶ್ವರ ಬಡಾವಣೆಯಲ್ಲಿ ಸರ್ಕಾರಿ ಉದ್ಯೋಗಸ್ಥರು, ವ್ಯಾಪಾರಸ್ಥರು ಹೆಚ್ಚಾಗಿ ವಾಸವಾಗಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ಮನೆ ಕಳವು, ಸರಗಳವು ಹೆಚ್ಚಾಗಿ ನಡೆಯುತ್ತಿವೆ. ಹೀಗಾಗಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರು ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಸೋಮೇಶ್ವರ ಬಡಾವಣೆಯಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿವೆ ಎಂದು ಸ್ಥಳೀಯ ನಿವಾಸಿ ವಡ್ಡರಹಳ್ಳಿ ರವಿ ದೂರಿದ್ದಾರೆ.

ಪ್ರತಿಕ್ರಿಯಿಸಿ (+)