ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: ಕೂಸಿನ ಮನೆಗಿಲ್ಲ ಅಡುಗೆ ಸಾಮಗ್ರಿ

ಹೊಸಕೋಟೆ ತಾಲ್ಲೂಕಿನ 22 ಕೂಸಿನ ಮನೆಗಳಲ್ಲಿ ಮೂಲಸೌಕರ್ಯ ಕೊರತೆ
Published 2 ಏಪ್ರಿಲ್ 2024, 4:08 IST
Last Updated 2 ಏಪ್ರಿಲ್ 2024, 4:08 IST
ಅಕ್ಷರ ಗಾತ್ರ

ಹೊಸಕೋಟೆ: ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಕೂಸಿನ ಮನೆಗಳನ್ನು ತೆರೆಯಲಾಗಿದೆಯಾದರೂ (ಶಿಶುಪಾಲನಾ ಕೇಂದ್ರ) ಅವುಗಳನ್ನು ಸೂಕ್ತವಾಗಿ‌ ನಿರ್ವಹಿಸುವಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್‌) ಇಲಾಖೆ ವಿಫಲವಾಗಿದೆ. 

ಕೂಸಿನ ಮನೆಗಳು ಪ್ರಾರಂಭವಾಗಿ ಸುಮಾರು ಒಂದೂವರೆ ತಿಂಗಳು ಕಳೆಯುತ್ತಿದ್ದರೂ ಮಕ್ಕಳಿಗೆ ಬೇಕಾದ ಅಡುಗೆ ಸಾಮಗ್ರಿಗಳನ್ನು ಒದಗಿಸಿಲ್ಲ ಎಂಬ ದೂರು ಕೇಳಿಬಂದಿದೆ. 

ತಾಲ್ಲೂಕಿನ ಬಹುತೇಕ ಕೂಸಿನ ಮನೆಗಳಿಗೆ ಸೂಕ್ತ ಮೂಲಸೌಲಭ್ಯಗಳನ್ನು ಒದಗಿಸಿಲ್ಲ. ಮಕ್ಕಳಿಗೆ ಮುಖ್ಯವಾಗಿ ಶೌಚಾಲಯ ಸೌಲಭ್ಯ, ನೀರಿನ ಸೌಲಭ್ಯ, ಅಡುಗೆ ಸಾಮಗ್ರಿಗಳ ರವಾನೆ ಸೇರಿದಂತೆ ಹಲವು ಸಮಸ್ಯೆಗಳು ಕೂಸಿನ ಮನೆಯನ್ನು ಕಾಡುತ್ತಿವೆ. ಬಹುತೇಕ ಕಡೆಗಳಲ್ಲಿ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸಾಮಗ್ರಿಗಳನ್ನು ಪಡೆಯುವುದು ಅಥವಾ ಅಂಗನವಾಡಿಯಲ್ಲಿಯೇ ಅಡುಗೆ ಮಾಡಿ ಬಡಿಸುವುದು ಆಗುತ್ತಿದೆ. ಈ ಪುರುಷಾರ್ಥಕ್ಕೆ ಕೂಸಿನ ಮನೆ ಯಾತಕ್ಕೆ ಬೇಕು ಎಂಬುದು ಸಾರ್ವಜನಿಕರ‌ ಅಭಿಪ್ರಾಯ.

ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ ಬೇಡಿಕೆಗೆ ಅನುಗುಣವಾಗಿ 22 ಪಂಚಾಯಿತಿಗಳಲ್ಲಿ ಕೂಸಿನ ಮನೆಗಳನ್ನು ತೆರೆಯಲಾಗಿದೆ. ಉಳಿದ 6 ಗ್ರಾಮ ಪಂಚಾಯಿತಿಗಳಲ್ಲಿ ತೆರೆದಿಲ್ಲ.

ಬಸ್ ವ್ಯವಸ್ಥೆ ಮಾಡಿ ಎನ್ನುತ್ತಾರೆ: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದರಿಂದ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳ ಮಕ್ಕಳನ್ನು ಇಲ್ಲಿಗೆ ತಂದು ಬಿಡಬೇಕು. ಇನ್ನಿತರೆ ಗ್ರಾಮಗಳ ಕಾರ್ಮಿಕರ ಮಕ್ಕಳನ್ನು ತಂದು ಬಿಡಲು ಹೇಳಿದರೆ, ಬಸ್ ವ್ಯವಸ್ಥೆ ಮಾಡಿ, ಬೆಳಗ್ಗೆ ಕರೆತಂದು ಮತ್ತೆ ಸಂಜೆ ನೀವೇ ಕರೆತಂದು ಬಿಡಿ ಎನ್ನುತ್ತಾರೆ ಎಂದು ಕೂಸಿನ ಮನೆಯ ಮೇಲ್ವಿಚಾರಕಿಯೊಬ್ಬರು ಹೇಳುತ್ತಾರೆ.

ಪಂಚಾಯಿತಿಗೊಂದು ಕೂಸಿನ ಮನೆಯೇ ಅವೈಜ್ಞಾನಿಕ. ಉಳಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಯಲ್ಲೂ ಮನರೇಗಾ ಕಾಮಗಾರಿಗಳು ನಡೆಯುತ್ತವೆ. ಆದರೆ, ಕೂಸಿನ ಮನೆ ಮಾತ್ರ ಪಂಚಾಯಿತಿಗೆ ಒಂದರಂತೆ ಮಾಡಿರುವುದು ಅವೈಜ್ಞಾನಿಕ. ಗ್ರಾಪಂ ವ್ಯಾಪ್ತಿಯ ಎಲ್ಲಾ ಕಾರ್ಮಿಕರ ಮಕ್ಕಳನ್ನು ಕೂಸಿನ ಮನೆಗೆ ತಂದು ಬಿಡುವುದು ಅಸಾಧ್ಯ. ಬದಲಿಗೆ ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ನರೇಗಾದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿದರೆ ಸಾಕಿತ್ತು ಎಂಬುದು ಕಾರ್ಮಿಕರ ಅಭಿಪ್ರಾಯ.

ಅಂಗನವಾಡಿ ಮಕ್ಕಳೇ ಕೂಸಿನ ಮನೆಯ ಮಕ್ಕಳು: ಹಲವು ಕೂಸಿನ ಮನೆಗಳಲ್ಲಿ ಇರುವ ಮಕ್ಕಳು ಅಂಗನವಾಡಿ ಮಕ್ಕಳೇ ಫಲಾನುಭವಿಗಳಾಗಿರುತ್ತಾರೆ.  6 ತಿಂಗಳಿನಿಂದ 3 ವರ್ಷದ ಮಕ್ಕಳೇ ಕೂಸಿನ ಮನೆಯ ಮಕ್ಕಳಾಗಿರುವುದರಿಂದ ಎರಡೂ ಕಡೆಗಳಲ್ಲಿ ಈ ಮಕ್ಕಳು ಸಲ್ಲುತ್ತಾರೆ. ಆದ್ದರಿಂದ ಕೂಸಿನ ಮನೆ ಯೋಜನೆ ಯಾವ ದಿಕ್ಕಿನಲ್ಲೂ ಅನುಕೂಲವಾಗಿಲ್ಲ.

ಕಾಟಾಚಾರಕ್ಕೆ ತೆರೆಯುತ್ತಾರೆ: ನಮ್ಮ ಮಕ್ಕಳು ಅಂಗನವಾಡಿಗೆ ಹೋಗುತ್ತಿದ್ದರು. ಈಗ ಕೂಸಿನ ಮನೆ ಆದ ನಂತರ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಒಮ್ಮೆಮ್ಮೆ ತೆರೆಯುತ್ತಾರೆ, ಒಮ್ಮೊಮ್ಮೆ ಇಲ್ಲ. ಅಂಗನವಾಡಿ ಇದ್ದರೂ ಕೂಸಿನ ಮನೆ ಏತಕ್ಕೆ ತಿಳಿಯುತ್ತಿಲ್ಲ. ಕೂಸಿನ ಮನೆಯನ್ನು ಒಮ್ಮೊಮ್ಮೆ ತರೆಯುವುದೇ ಇಲ್ಲ ಎಂದು ಸಮೇತನಹಳ್ಳಿ ಗ್ರಾ.ಪಂ. ನ ಕೊರಳೂರು ಗ್ರಾಮದ ಪೋಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದು ಇಡೀ ರಾಜ್ಯದ ಸಮಸ್ಯೆ. ಮೇಲಿನಿಂದ ನಮಗೆ ಏನು ಆದೇಶ ಬಂದಿದೆಯೋ ಅದನ್ನು ಮಾಡಿದ್ದೇವೆ. ಸುಮಾರು 48 ಸಾಮಗ್ರಿಗಳನ್ನು ಕೊಟ್ಟಿದ್ದೇವೆ. ಕೇರ್ ಟೇಕರ್ ನೇಮಿಸಿದ್ದೇವೆ. ಸುಸಜ್ಜಿತ ಕೊಠಡಿ ನೀಡಿದ್ದೇವೆ‌. ಅಡುಗೆ ಸಾಮಗ್ರಿ ಆಯಾ ಪಂಚಾಯಿತಿ ಜವಾಬ್ದಾರಿಯಾಗಿದೆ.

-ಮೆಹಬೂಬ್ ಪಾಷಾ ಎಡಿ ನರೇಗಾ . ಹೊಸಕೋಟೆ ತಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT