ಬುಧವಾರ, ಜನವರಿ 27, 2021
16 °C
ರಾಜ್ಯ ಸರ್ಕಾರಕ್ಕೆ ಸಮುದಾಯದ ಮುಖಂಡರ ಒತ್ತಾಯ

ಪ್ರವರ್ಗ 1ಗೆ ಸೇರಿಸಲು ತಿಗಳ ಸಮುದಾಯದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಹಲವಾರು ದಶಕಗಳಿಂದ ತಿಗಳ ಸಮುದಾಯವನ್ನು ಮತ ಬ್ಯಾಂಕ್ ಮಾಡಿಕೊಂಡು ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿಲ್ಲ’ ಎಂದು ರಾಜ್ಯ ವಹ್ನಿಕುಲ ಕ್ಷತ್ರಿಯ ತಿಗಳರ ಸಂಘ ರಾಜ್ಯ ಘಟಕದ ಅಧ್ಯಕ್ಷ ಸಿ. ಜಯರಾಜ್ ಹೇಳಿದರು.

ಇಲ್ಲಿನ ಶ್ರೀಮೌಕ್ತಿಕಾಂಬ ದೇವಿ ದೇವಾಲಯದ ಆವರಣದಲ್ಲಿ ಬುಧವಾರ ನಡೆದ ತಿಗಳ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು.

2011ರ ಜನಗಣತಿಯಂತೆ ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆಯಿದೆ. 2021ರ ಜನಗಣತಿ ವೇಳೆಗೆ 50 ರಿಂದ 60 ಲಕ್ಷ ತಿಗಳರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹಿಂದುಳಿದ ವರ್ಗದಲ್ಲಿ ಗುರುತಿಸಿಕೊಂಡಿರುವ ಸಮುದಾಯವು ಸೊಪ್ಪು, ತರಕಾರಿ ಬೆಳೆಯುವುದು ಬಿಟ್ಟರೆ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎಂದರು.

ತಿಗಳ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಜನಾಂಗವನ್ನು ಪ್ರವರ್ಗ 2ರಿಂದ ತೆಗೆದುಹಾಕಿ ಪ್ರವರ್ಗ 1ಕ್ಕೆ ಸೇರ್ಪಡೆ ಮಾಡಬೇಕು. ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಿ ಕನಿಷ್ಠ ₹ 100 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ತಿಗಳ ಮಹಾಸಭಾದ ಅಧ್ಯಕ್ಷ ಎಚ್. ಸುಬ್ಬಣ್ಣ ಮಾತನಾಡಿ, ಸಂವಿಧಾನದಡಿ ಹಿಂದುಳಿದ ವರ್ಗಗಳಿಗೆ ನಿಗಮ, ಮಂಡಳಿಗಳಲ್ಲಿ ಸ್ಥಾನಮಾನ ಕಲ್ಪಿಸಿ ಅಭಿವೃದ್ಧಿಪಡಿಸಲು ಅವಕಾಶವಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಿದ ನಂತರ ನಿಗಮ, ಮಂಡಳಿ ಘೋಷಣೆ ಮಾಡಬೇಕಿತ್ತು ಎಂದರು

‘ಹಾಗೆಂದು ನಾವು ವೀರಶೈವ ಲಿಂಗಾಯತ ಸಮುದಾಯದ ವಿರೋಧಿಗಳಲ್ಲ. ಹಿಂದುಳಿದ ವರ್ಗಕ್ಕೆ ನಿಗಮ, ಮಂಡಳಿ ರಚಿಸುವಂತೆ ಕೇಳುವ ಹಕ್ಕು ಇದೆ. ಪ್ರವರ್ಗ 2ರಲ್ಲಿ 103 ಜಾತಿಗಳಿವೆ. ಮುಂದುವರಿದ ಜಾತಿಗಳ ನಡುವೆ ತಿಗಳ ಸಮುದಾಯವು ಪೈಪೋಟಿ ನಡೆಸುವುದು ಕಷ್ಟ. 53 ಜಾತಿಗಳನ್ನು ಒಳಗೊಂಡಿರುವ ಪ್ರವರ್ಗ 1ಕ್ಕೆ ಸೇರ್ಪಡೆಗೊಳಿಸಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ವಹ್ನಿಕುಲ ಕ್ಷತ್ರಿಯ ತಿಗಳ ಸಂಘ ರಾಜ್ಯ ಘಟಕದ ನಿರ್ದೇಶಕ ಎಸ್.ಸಿ. ಚಂದ್ರಪ್ಪ, ತಾಲ್ಲೂಕು ತಿಗಳ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿದರು. ಸಂಘದ ರಾಜ್ಯ ಘಟಕದ ಖಜಾಂಚಿ ಲೋಕೇಶ್, ನಿರ್ದೇಶಕ ಚಂದ್ರಶೇಖರ್ ಮಾತನಾಡಿದರು. ಶ್ರೀಮೌಕ್ತಿಕಾಂಬ ದೇವಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯಕುಮಾರ್, ಸದಸ್ಯ ಶಶಿಕುಮಾರ್, ಮುನಿಶಾಮಪ್ಪ, ಮುನಿವೀರಣ್ಣ, ಪುರಸಭೆ ಸದಸ್ಯೆ ಚೈತ್ರಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.