ತೂಬಗೆರೆ ಹೋಬಳಿಗೆ ಕುಡಿಯುವ ನೀರು

7

ತೂಬಗೆರೆ ಹೋಬಳಿಗೆ ಕುಡಿಯುವ ನೀರು

Published:
Updated:
Deccan Herald

ತೂಬಗೆರೆ (ದೊಡ್ಡಬಳ್ಳಾಪುರ): ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕಪ್‌ ಡ್ಯಾಮನ್ನು 5 ಅಡಿಗಳಷ್ಟು ಎತ್ತರ ಮಾಡಿ ತೂಬಗೆರೆ ಹೋಬಳಿಯ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಅವರು ಮಂಗಳವಾರ ತಾಲ್ಲೂಕಿನ ತೂಬಗೆರೆ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಂದಿಗಿರಿ ಶ್ರೇಣಿಯಲ್ಲಿನ ಚನ್ನರಾಯಸ್ವಾಮಿ ಬೆಟ್ಟದ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾದರು ಚಿಕ್ಕರಾಯಪ್ಪನಹಳ್ಳಿ ಕೆರೆ ಪ್ರತಿ ವರ್ಷವು ತುಂಬಿ ಕೋಡಿ ಬೀಳುತ್ತಿದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಂಡು ಮೆಳೇಕೋಟೆ, ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಮಗ್ರ ಯೋಜನಾ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದರು.

ಜನರಿಗೆ ಭಾಗ್ಯಗಳನ್ನು ನೀಡಲು ಹೋಗಿ ಸರ್ಕಾರದ ಖಜಾನೆಗೆ ಹೊರೆಯಾಗಿದೆ. ಆದರೆ ರೈತರ ಸಾಲಮನ್ನಾವೂ ಆಗಲಿದೆ. ರೈತರು ವಿರೋಧ ಪಕ್ಷಗಳ ಮಾತುಗಳಿಗೆ ಕಿವಿಗೊಡೆದೆ ತಾಳ್ಮೆಯಿಂದ ಇರಬೇಕು ಎಂದು ತಿಳಿಸಿದರು.

ಕೃಷಿ ಕೂಲಿ ಕಾರ್ಮಿಕನ ಮಗನಾಗಿ ಬೆಳೆದು ಬಂದವನು ನಾನು. ಎಂತಹದ್ದೇ ಕಷ್ಟ ಬಂದರು ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಯಂತಹ ಪ್ರಯತ್ನಕ್ಕೆ ಮುಂದಾಗಬೇಡಿ. ರಾಜ್ಯದಲ್ಲಿನ ಸಮ್ಮೀಶ್ರ ಸರ್ಕಾರ ರೈತರ, ಬಡವರ ಪರವಾಗಿ ಕೆಲಸ ಮಾಡಲಿದೆ ಎಂದರು.

ಕುಂದು–ಕೊರತೆ ಸಭೆ: ‘ತಿಂಗಳಿಗೆ ಒಂದು ಬಾರಿ ತೂಬಗೆರೆಯಲ್ಲಿ ಸಭೆ ನಡೆಸಿ ಜನರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸಲಾಗುವುದು. ಈ ಭಾಗದ ಸಮಗ್ರ ಅಭಿವೃದ್ದಿಯೇ ನನ್ನ ಮುಖ್ಯ ಗುರಿಯಾಗಿದೆ. ಯಾವುದೇ ಕೆಲಸಗಳು ಆಗಬೇಕಿದ್ದರು ನೇರವಾಗಿ ನನ್ನ ಬಳಿಗೆ ಬನ್ನಿ. ದಲ್ಲಾಳಿಗಳನ್ನು ನಂಬಿ ಮೋಸಕ್ಕೆ ಒಳಗಾಗಬೇಡಿ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್‌.ಅರವಿಂದ ಮಾತನಾಡಿ, ತೂಬಗೆರೆ ಹೋಬಳಿಯ ಕಾಚಹಳ್ಳಿ ಹಲಸು ರಾಜ್ಯಕ್ಕೆ ರುಚಿಯಲ್ಲಿ ಹೆಸರು ಮಾಡಿದೆ ಎಂದು ತಿಳಿಸಿದರು.

ಹೀಗಾಗಿ ಈ ಭಾಗದಲ್ಲಿ ಹೆಚ್ಚಾಗಿ ಸ್ಥಳೀಯ ಹಲಸು ಸಸಿಗಳನ್ನು ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿ ಪಡಿಸಿ ರೈತರಿಗೆ ನೀಡಬೇಕು. ಹಲಸು ಬೆಳೆಯಲು ರೈತರನ್ನು ಉತ್ತೇಜಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ ಮಾತನಾಡಿ, ರೈತರು ರಾಗಿ, ಮುಸುಕಿನ ಜೋಳದ ಬೆಳೆಗೆ ವಿಮೆ ಮಾಡಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು.ಇದರಿಂದ ಮಳೆ ಅತಿಯಾಗಿ ಅಥವಾ ಮಳೆ ಇಲ್ಲದೆ ಬೆಳೆ ನಷ್ಟವಾದರೆ ಪರಿಹಾರ ದೊರೆಯಲಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಅಕ್ಕಯ್ಯಮ್ಮ, ಉಪಾಧ್ಯಕ್ಷ ಪ್ರಕಾಶ್‌ಬಾಬು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಸ್‌.ಎಲ್‌.ವೆಂಕಟೇಶ್‌ಬಾಬು, ಕೆಪಿಸಿಸಿ ಸದಸ್ಯ ಎಸ್‌.ಆರ್‌.ಮುನಿರಾಜು, ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಸುನಿಲ್‌ ಕುಮಾರ್‌,ಜೆಡಿಎಸ್‌ ರಾಜ್ಯ ಸಂಘಟನ ಕಾರ್ಯದರ್ಶಿ ಎ.ನರಸಿಂಹಯ್ಯ, ಜೆಡಿಎಸ್‌ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಗೌರೀಶ್‌, ವೆಂಕಟರಮಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್‌, ಮುನಿ ಕೃಷ್ಣಪ್ಪ,ಗಂಗಾಧರ್‌, ಮುನಿರಾಜು, ತೂಬಗೆರೆ ಉಪ ತಹಶೀಲ್ದಾರ್‌ ನಾರಾಯಣಸ್ವಾಮಿ, ಕೃಷಿ ಇಲಾಖೆಯ ಅಧಿಕಾರಿಗಳಾದ ವಿನೋದಮ್ಮ, ನಟರಾಜ್‌, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !