ಪಹಣಿಯಲ್ಲಿ ಮಾಲೀಕತ್ವ ಬದಲಾವಣೆ: ಶೀಘ್ರ ಬಂಧನ

7

ಪಹಣಿಯಲ್ಲಿ ಮಾಲೀಕತ್ವ ಬದಲಾವಣೆ: ಶೀಘ್ರ ಬಂಧನ

Published:
Updated:

ದೇವನಹಳ್ಳಿ: ತಾಲ್ಲೂಕಿನ ಕಸಬಾ ಹೋಬಳಿ ಗೊಬ್ಬರಗುಂಟೆ ಗ್ರಾಮದ ಸರ್ವೇ ನಂಬರ್‌ 64ರ ಸರ್ಕಾರಿ ಜಮೀನನ್ನು ಪಹಣಿಯಲ್ಲಿ ಖಾಸಗಿ ವ್ಯಕ್ತಿಗೆ ಮಾಲೀಕತ್ವ ಬದಲಾವಣೆ ಆಗಿರುವ ಸಂಬಂಧ ಅಪರಾಧಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮಾಲೀಕತ್ವ ಅಕ್ರಮವಾಗಿ ಬದಲಾವಣೆಯಾಗಿರುವುದನ್ನು ಈಗಾಗಲೇ ತಡೆ ಹಿಡಿಯಲಾಗಿದೆ. ಪಹಣಿಯಲ್ಲಿ ಸರ್ಕಾರದ ಹೆಸರಿಗೆ ಮರುಬದಲಾವಣೆಯನ್ನು ಸಹಾಯಕ ಆಯುಕ್ತರು ಮಾಡಿದ್ದಾರೆ. ಅಕ್ರಮ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘ತಾಂತ್ರಿಕವಾಗಿ ಲಾಗಿನ್ ಆಗಿರುವ ವಿವರಗಳ ಬಗ್ಗೆ ಮತ್ತು ಇತರ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅದನ್ನು ಪೊಲೀಸ್ ಇಲಾಖೆಯೊಂದಿಗೆ ವಿನಿಮಯ ಮಾಡಿಕೊಳ್ಳವ ಮೂಲಕ ತಪ್ಪಿತಸ್ಥರನ್ನು ಬಂಧಿಸಲಾಗುವುದು’ ಎಂದು ಹೇಳಿದ್ದಾರೆ.

ಪಾಸ್‌ವರ್ಡ್‌ ದುರ್ಬಳಕೆ: ‘ಈ ಪ್ರಕರಣದಲ್ಲಿ ತಂತ್ರಾಂಶ ಪ್ರವೇಶಾವಕಾಶದ ಪಾಸ್‌ವರ್ಡ್‌ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ. ಇದು, ಭೂಮಿ ತಂತ್ರಾಂಶವನ್ನು ಹ್ಯಾಕ್ ಮಾಡಿರುವ ಕಾರ್ಯವಲ್ಲ. ಭೂಮಿ ತಂತ್ರಾಂಶದಲ್ಲಿ ಭೂ ದಾಖಲೆಗಳ ಮಾಹಿತಿ ಕೋಶವು ಅಂತರ್ಜಾಲದಲ್ಲಿ ಇರುವುದಿಲ್ಲ. ಹೊರಗಿನ ವ್ಯಕ್ತಿಗಳಿಗೆ ಪಾಸ್‌ವರ್ಡ್‌ ಪಡೆಯಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಯಾರಾದರೂ ಪಾಸ್‌ವರ್ಡ್ ದುರ್ಬಳಕೆ ಮಾಡಿದರೂ ಅದರ ಮೂಲಕ ಅಕ್ರಮ ಬದಲಾವಣೆ ಮಾಡಲು ಸಾಧ್ಯವಾಗದಂತೆ ಈಗಾಗಲೇ ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಅಂಕಿ ಅಂಶ ಸಮರ್ಪಕವಾಗಿ ಕಾಯ್ದಿರಿಸಲಾಗಿದೆ. ಸಿಸ್ಟಂ ಆಡ್ಮಿನಿಸ್ಟ್ರೇಟರ್‌ಗಳ ಬೆರಳ ಗುರುತನ್ನು ಅಧಿಕೃತಗೊಳಿಸಲಾಗಿದೆ. ಆಡಳಿತ ಕಚೇರಿಯಲ್ಲಿ ಸಿ.ಸಿ. ಟಿವಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ

ಪ್ರತಿಯೊಂದು ಪಹಣಿಗಳನ್ನು ತಂತ್ರಾಂಶದ ಮೂಲಕ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು ಬೇರೆ ಯಾವುದೇ ರೀತಿಯ ಅಕ್ರಮವಾಗಿ ಬದಲಾವಣೆಯಾಗಿರುವುದು ಈವರೆವಿಗೂ ಕಂಡುಬಂದಿಲ್ಲ. ನಿರಂತರ ಕ್ರಮಗಳಿಂದ ಭೂಮಿ ಅಂಕಿ ಅಂಶ ದಾಖಲೆಗಳು ಸುರಕ್ಷಿತವಾಗಿವೆ ಎಂದು ವಿವರಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !