ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ರೇಷ್ಮೆ ಗೂಡು ಆವಕ ಕುಸಿತ, ಸಂಕಷ್ಟಕ್ಕೆ ಸಿಲುಕಿದ ನೂಲು ಬಿಚ್ಚಾಣಿಕೆದಾರ

Last Updated 28 ನವೆಂಬರ್ 2021, 6:14 IST
ಅಕ್ಷರ ಗಾತ್ರ

ವಿಜಯಪುರ:ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ-ಹರಾಜು ಹಾಗೂ ಆನ್‌ಲೈನ್ ಹಣ ಪಾವತಿ ಮಾಡುವ ವಿಧಾನ ಜಾರಿಯಾದ ನಂತರವೂ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕಡಿಮೆಯಾಗಿದ್ದು, ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕು
ವಂತಾಗಿದೆ.

ಪಟ್ಟಣದ ಮಾರುಕಟ್ಟೆಯಲ್ಲಿ ಶನಿವಾರ ಕೇವಲ 8 ಲಾಟುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ನೂಲು ಬಿಚ್ಚಾಣಿಕೆದಾರರು ಚರ್ಚಿಸಿದರು.

ರೈತರು ಮಾರುಕಟ್ಟೆಗೆ ಗೂಡು ತೆಗೆದುಕೊಂಡು ಬಂದು ಇಲ್ಲಿ ಹರಾಜು ಮಾಡಿದರೂ ನಮ್ಮಿಂದ ಕಟ್ಟಿಸಿಕೊಂಡ ಹಣವನ್ನು ತಕ್ಷಣ ರೈತರ ಖಾತೆಗಳಿಗೆ ಜಮೆ ಮಾಡುವುದಿಲ್ಲ. ಸಂಜೆಯ ನಂತರ ದೇವನಹಳ್ಳಿಯ ಎಚ್.ಡಿ.ಎಫ್.ಸಿ ಬ್ಯಾಂಕಿಗೆ ಹೋಗಿ ಅಲ್ಲಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಾರೆ. ಕೆಲವು ತಾಂತ್ರಿಕ ದೋಷಗಳಿಂದ ರೈತರ ಖಾತೆಗಳಿಗೆ ಜಮೆ ಆಗದಿದ್ದರೆ ಅವರು ಪುನಃ ಮಾರುಕಟ್ಟೆಗೆ ಗೂಡು ತರುವುದರ ಬದಲಿಗೆ ಮನೆಗಳಲ್ಲೇ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ನೂಲು ಬಿಚ್ಚಾಣಿದಾರರು ಸಂಕಷ್ಟ ತೋಡಿಕೊಂಡರು.

ನೂಲು ಬಿಚ್ಚಾಣಿಕೆದಾರ ಜಮೀರ್ ಪಾಷ ಮಾತನಾಡಿ, ರೈತರು ಬ್ಯಾಂಕುಗಳಲ್ಲಿ ಕೃಷಿ ಸಾಲ ಮಾಡಿಕೊಂಡಿದ್ದಾರೆ. ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾದ ಕೂಡಲೇ ಬ್ಯಾಂಕಿನವರು ಕಡಿತ ಮಾಡಿಕೊಳ್ಳುತ್ತಾರೆ ಎನ್ನುವ ಕಾರಣದಿಂದಲೂ ಬಹಳಷ್ಟು ರೈತರು ಗೂಡಿನ ಬೆಲೆ ಕಡಿಮೆಯಾದರೂ ಪರವಾಗಿಲ್ಲ ಎಂದು ಮಾರುಕಟ್ಟೆಯಿಂದ ಹೊರಗೆ ಮಾರಾಟ ಮಾಡುತ್ತಿದ್ದಾರೆ ಎಂದರು.

ಮಾರುಕಟ್ಟೆಯಲ್ಲೇ ಗೂಡು ಖರೀದಿ ಮಾಡಿಕೊಂಡು ನೂಲು ಬಿಚ್ಚಾಣಿಕೆ ಮಾಡಿಕೊಳ್ಳುವವರು ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ. ನೂಲು ಬಿಚ್ಚಾಣಿಕೆ ಮಾಡುವ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಹಿಡಿದು ಸಾವಿರಾರು ಮಂದಿ ಅವಲಂಬಿತರು ಬೀದಿ ಪಾಲಾಗುವಂತಾಗಿದೆ. ಆದ್ದರಿಂದ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ರೈತ ಹನುಮಂತರಾಯಪ್ಪ ಮಾತನಾಡಿ, ‘ಮಳೆಯಿಂದಾಗಿ ನಾವು ಖರೀದಿ ಮಾಡುತ್ತಿರುವ ಚಾಕಿಯಲ್ಲೂ ಗುಣಮಟ್ಟವಿಲ್ಲ. ಹುಳುಗಳು 2ನೇ ಜ್ವರಕ್ಕೆ ಬರುವುದಕ್ಕೆ ಸಾಧ್ಯವಾಗದ ಕಾರಣ ಸಾಕಷ್ಟು ಬೆಳೆ ನಷ್ಟವಾಗುತ್ತಿದೆ. ಹುಳು ಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶ ಹೆಚ್ಚು ಮಾಡಿಕೊಂಡು ಕಷ್ಟಪಟ್ಟು ಬೆಳೆ ಬೆಳೆದರೂ ಅರ್ಧ ಬೆಳೆ ಕೈಬಿಟ್ಟಿದೆ’ ಎಂದು
ವಿವರಿಸಿದರು.

ಸುಣ್ಣಕಟ್ಟು ರೋಗ, ಹಾಲುತೊಂಡೆ ಬರುತ್ತಿದೆ. ಹುಳುಗಳು ಅಲ್ಪಸ್ವಲ್ಪ ಗೂಡು ಕಟ್ಟಿದರೂ ನೂಲು ಬಿಚ್ಚಾಣಿಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ನಮಗೂ ನಷ್ಟ. ಬಿಚ್ಚಾಣಿಕೆದಾರರಿಗೂ ನಷ್ಟ. ಆದ್ದರಿಂದ ಸಾಕಷ್ಟು ರೈತರು ಹುಳು ಮೇಯಿಸುವುದನ್ನು ಬಿಟ್ಟಿದ್ದಾರೆ ಎಂದರು.

ರೈತ ಕೃಷ್ಣಪ್ಪ ಮಾತನಾಡಿ, ಬ್ಯಾಂಕಿನವರು ಸಾಲ ಕಟ್ಟುವಂತೆ ಒತ್ತಡ ಹೇರುತ್ತಿದ್ದಾರೆ. ಕೊರೊನಾ ಬಂದ ಮೇಲಂತೂ ನಾವು ಬೆಳೆದಂತಹ ಯಾವುದೇ ಬೆಳೆಗಳಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ಕುಟುಂಬ ನಿರ್ವಹಣೆ ಮಾಡುವುದೂ ಕಷ್ಟವಾಗಿದೆ. ಕನಿಷ್ಠ ಹಿಪ್ಪುನೇರಳೆ ಸೊಪ್ಪು ಖರೀದಿ ಮಾಡಿಕೊಂಡು ಹುಳುಗಳನ್ನಾದರೂ ಮೇಯಿಸೋಣವೆಂದರೆ ಕಷ್ಟಪಟ್ಟು ಬೆಳೆದ ಗೂಡಿನ ಹಣವನ್ನು ಬ್ಯಾಂಕಿನವರು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಾರೆ’ ಎಂದು
ಪ್ರತಿಕ್ರಿಯಿಸಿದರು.

ಕೆಲವು ಪರಿಚಯಸ್ಥ ರೀಲರ್‌ಗಳಿಗೆ ಗೂಡು ತೂಕ ಹಾಕಿಕೊಟ್ಟು ಹಣ ಪಡೆಯುತ್ತಿದ್ದೇವೆ. ಸರ್ಕಾರವೂ ಒಂದು ಕೆ.ಜಿ. ಗೂಡಿಗೆ ₹ 30 ಪ್ರೋತ್ಸಾಹಧನ ನೀಡುವುದಿಲ್ಲ. ಆದ್ದರಿಂದ ನಾವು ಮಾರುಕಟ್ಟೆಗೂ ಹೋಗುತ್ತಿಲ್ಲಎಂದರು.

‘ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಆವಕ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ. ರೈತರು ತಂದ ಗೂಡಿಗೆ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಕಡಿತ ಮಾಡುವುದಕ್ಕೂ ನಮಗೂ ಸಂಬಂಧವಿಲ್ಲ. ಆದರೆ, ರೈತರಿಗೆ ತಲುಪಬೇಕಾಗಿರುವ ಹಣವನ್ನು ಸಮರ್ಪಕವಾಗಿ ತಲುಪಿಸಬೇಕು ಎನ್ನುವುದು ನಮ್ಮ ಉದ್ದೇಶ. ನೂಲು ಬಿಚ್ಚಾಣಿಕೆದಾರರ ಮನವಿಯನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುತ್ತದೆ’ ಎಂದು ರೇಷ್ಮೆ ಮಾರುಕಟ್ಟೆಯ ಪ್ರಭಾರ ಉಪ ನಿರ್ದೇಶಕಅಮರನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT