ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಕಲೆ ಉಳಿಸುವ ಕೆಲಸವಾಗಲಿ’

Last Updated 3 ಸೆಪ್ಟೆಂಬರ್ 2019, 13:15 IST
ಅಕ್ಷರ ಗಾತ್ರ

ವಿಜಯಪುರ: ರಂಗಕಲೆಯು ನಶಿಸಬಾರದು. ಅದನ್ನು ಉಳಿಸಿ ಬೆಳೆಸುವಂತಹ ಕೆಲಸ ಮಾಡಿದಾಗ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಹೇಳಿದರು.

ಇಲ್ಲಿನ ಸಂತೆಬೀದಿಯಲ್ಲಿರುವ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ 51ನೇ ಮಾಸದ ಕನ್ನಡ ದೀಪ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಕಲಾವಿದರ ಬದುಕು ಸಂಕಷ್ಟದಲ್ಲಿದೆ ಎನ್ನುವುದನ್ನು ಸರ್ಕಾರ ಅರಿಯಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸದೃಢವಾಗಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಎಲ್ಲೆಡೆ ಹರಡುವಂತೆ ಮಾಡಲು ಒಂದು ಇಲಾಖೆ ಕೆಲಸ ಮಾಡುತ್ತಿದ್ದರೂ ಕೂಡಾ ಕನ್ನಡ ಭಾಷೆಯ ಉಳಿವಿಗಾಗಿ, ಸಾಹಿತ್ಯ ಲೋಕದ ಉಳಿವಿಗಾಗಿ ನಾವು ಹೋರಾಟ ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ’ ಎಂದರು.
‘ರಾಜ್ಯದಲ್ಲಿನ ಯುವ ಪ್ರತಿಭೆಗಳನ್ನು ಗುರುತಿಸಲು ಒಂದು ಖಾಸಗಿ ಚಾನಲ್‌ಗೆ ಸಾಧ್ಯವಾದಾಗ ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ಯುವಕಲಾವಿದರನ್ನು ಗುರುತಿಸಿ ಅವರಲ್ಲಿನ ಅಗಾಧ ಪ್ರಮಾಣದ ಕಲೆಯನ್ನು ಹೊರತರುವ ಕಾರ್ಯವಾಗಬೇಕು’ ಎಂದರು.

ಜೆಡಿಎಸ್ ಮುಖಂಡ ಪಾಳ್ಯಮುನೇಗೌಡ ಮಾತನಾಡಿ, ‘ಕಲೆಯೆಂಬುದು ರಕ್ತಗತವಾಗಿ ಸಿಗುವಂತಹ ಪ್ರಾಕೃತಿಕ ವರ. ಅದನ್ನು ಯಾರಿಂದಲೂ ಕದಿಯಲು ಅಸಾಧ್ಯ. ಇಂತಹ ಕಲೆಯನ್ನು ಗುರುತಿಸುವ ಕೆಲಸವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಲಾಭವನ ನಿರ್ಮಾಣಕ್ಕೆ ಅಗತ್ಯವಾಗಿರುವ ಪರಿಕರಗಳನ್ನು ಪೂರೈಸಲು ಸಿದ್ಧನಿದ್ದೇನೆ’ ಎಂದರು.

ಬಿ.ಕೆ.ಎಸ್.ಪ್ರತಿಷ್ಠಾನದ ಸಂಸ್ಥಾಪಕ ಬಿ.ಕೆ.ಶಿವಪ್ಪ ಮಾತನಾಡಿ, ‘ನಮ್ಮಲ್ಲಿ ಕಲಾವಿದರಿಗೆ ಕೊರತೆಯಿಲ್ಲ, ಅವರಿಗೆ ವೇದಿಕೆ ಕಲ್ಪಿಸುವವರು ಲಭ್ಯವಿಲ್ಲದಂತಾಗಿದೆ. ಜನರ ಮನಸ್ಸನ್ನು ರಂಜಿಸುವಂತಹ ಕಲಾವಿದರ ಬದುಕಿನ ಹಿಂದಿನ ಕತ್ತಲನ್ನು ಹೋಗಲಾಡಿಸುವ ಕೆಲಸವಾಗಬೇಕು’ ಎಂದರು.

ಮುಖಂಡ ಕನಕರಾಜು, ಚಪ್ಪರಕಲ್ಲು ರವಿಕುಮಾರ್ ಮಾತನಾಡಿದರು.

ಕಲಾವಿದ ಸುನೀಲ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕಲಾವಿದರಾದ ಎಂ.ವಿ.ನಾಯ್ಡು, ಮಹಾತ್ಮಾಂಜನೇಯ, ಅವರ ತಂಡದಿಂದ ರಂಗಗೀತೆಗಳ ಗಾಯನ ನಡೆಯಿತು. ಹಲವು ಮಂದಿ ರಂಗ ಕಲಾವಿದರು ಪೌರಾಣಿಕ ನಾಟಕಗಳ ಸನ್ನಿವೇಶಗಳನ್ನು ಪ್ರದರ್ಶನ ಮಾಡಿದರು. ಸಾಹಿತಿಗಳಾದ ಚಂದ್ರಶೇಖರ ಹಡಪದ್, ವಿ.ಎನ್.ರಮೇಶ್, ಮುಖಂಡರಾದ ಮಹೇಶ್, ರವಿಕುಮಾರ್, ಸುಬ್ರಮಣಿ, ಗೋವಿಂದರಾಜು, ಪುರಕೃಷ್ಣಪ್ಪ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT