ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ಈ ಬಾರಿ ಎಲ್ಲಿ?

24ರಂದು ತೀರ್ಮಾನ– ತಹಶೀಲ್ದಾರ್‌* ಜಿಲ್ಲಾಡಳಿತ ಭವನದ ಆವರಣ– ಬಿಇಒ
Last Updated 23 ಜನವರಿ 2019, 13:33 IST
ಅಕ್ಷರ ಗಾತ್ರ

ದೇವನಹಳ್ಳಿ: ವಾರ್ಷಿಕ ಗಣರಾಜ್ಯೋತ್ಸವ ಜ.26 ರಂದು ನಡೆಯುವ ರಾಷ್ಟ್ರೀಯ ಹಬ್ಬ. ಇದು ತಾಲ್ಲೂಕು ಕೇಂದ್ರದಲ್ಲಿ ನಡೆಯಲಿದೆಯೇ ಅಥವಾ ಜಿಲ್ಲಾಡಳಿತ ಭವನದಲ್ಲಿ ಇರಬಹುದೇ ಎಂಬುದು ನಗರದ ಶಾಲೆಯ ಶಿಕ್ಷಕರಿಗೆ ಗೊಂದಲವಾಗಿದೆ.

ಜಿಲ್ಲಾಡಳಿತ ಭವನದ ಬಹುತೇಕ ಇಲಾಖೆಗಳು ಈಗಾಗಲೇ ಚಪ್ಪರದಕಲ್ಲು ಬಳಿ ಇರುವ ನೂತನ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಿವೆ. 2018ರ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ಆಚರಣೆ ಮಾಡಲಾಗಿತ್ತು. ಈ ಬಾರಿ ಒಬ್ಬರು ಜಿಲ್ಲಾಡಳಿತ ಭವನ ಎನ್ನುತ್ತಾರೆ. ಕೆಲವರು ತಾಲ್ಲೂಕು ಕೇಂದ್ರದಲ್ಲಿ ನಡೆಸಬಹುದು ಎಂದು ಹೇಳುತ್ತಾರೆ. ಇದರ ಬಗ್ಗೆ ಸ್ಪಷ್ಠ ಸಂದೇಶ ಯಾವುದೇ ಇಲಾಖೆಯಿಂದ ಬಂದಿಲ್ಲ ಎನ್ನುತ್ತಾರೆ ವಿವಿಧ ಶಾಲೆಯ ಶಿಕ್ಷಕರು.

ದೇವನಹಳ್ಳಿ ನಗರದಲ್ಲಿ ಪ್ರಸ್ತುತ ಸರ್ಕಾರಿ, ಅನುದಾನಿತ ಮತ್ತು ಖಾಸಗಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಒಟ್ಟು 22 ಇವೆ. ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಪಥಸಂಚಲನಕ್ಕೆ 32 ವಿದ್ಯಾರ್ಥಿಗಳು, ಪಥ ಸಂಚಲನದ ವಾದ್ಯ ವೃಂದಕ್ಕೆ 32 ವಿದ್ಯಾರ್ಥಿಗಳು ಪ್ರತಿ ಶಾಲೆಯಿಂದ ಭಾಗವಹಿಸುತ್ತಾರೆ. ಇದನ್ನು ಹೊರತು ಪಡಿಸಿ ಸಾಂಸ್ಕೃತಿಕ ನೃತ್ಯದಲ್ಲಿ ಭಾಗವಹಿಸುವ ಒಂದೊಂದು ತಂಡದಲ್ಲಿ ಕನಿಷ್ಠ ಮುನ್ನೂರರಿಂದ ಮುನ್ನೂರೈವತ್ತು ವಿದ್ಯಾರ್ಥಿಗಳು ಭಾವಹಿಸುತ್ತಾರೆ.

ಪ್ರತಿ ವರ್ಷ ಗಣರಾಜ್ಯೊತ್ಸವಕ್ಕೆ ಹತ್ತು ದಿನ ಮೊದಲು ಪೂರ್ವಭಾವಿ ಅಭ್ಯಾಸ ಮತ್ತು ತರಬೇತಿಯನ್ನು ನೀಡುವುದು ರೂಢಿ. ಈ ದಿನದವರೆಗೆ ತಾಲ್ಲೂಕು ಕೇಂದ್ರದಲ್ಲಿ ಗಣರಾಜ್ಯೋತ್ಸವ ನಡೆಯುವ ಸುಳಿವಿಲ್ಲ ಎಂಬುದು ವಿವಿಧ ಶಾಲೆಗಳ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಬೇಸರ.

ಗಣರಾಜ್ಯೋತ್ಸವದಲ್ಲಿ ಕನಿಷ್ಠ ಮೂರು ಸಾವಿರ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಕಾರ್ಯಕ್ರಮ ವೀಕ್ಷಿಸಲು ಒಂದು ಸಾವಿರ ಮಕ್ಕಳು ಸೇರುತ್ತಾರೆ. ಅನಿವಾರ್ಯವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಾಡಲೇಬೇಕಿದ್ದರೂ ಜಾಗದ ಸಮಸ್ಯೆ ಉಂಟಾಗಲಿದೆ. ಮೈದಾನ ಇಲ್ಲ ಏನೋ ಕಾಟಚಾರಕ್ಕೆ ಮಾಡಬಹುದು ಅಷ್ಟೇ ಎನ್ನುತ್ತಾರೆ ಶಿಕ್ಷಕ ಚಂದ್ರಪ್ಪ.

ಜಿಲ್ಲಾಡಳಿತ ಭವನದಲ್ಲಿ ಕಾರ್ಯಕ್ರಮ ನಡೆದರೆ ಖಾಸಗಿ ಶಾಲೆ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆ ತರುತ್ತವೆ. ಸರ್ಕಾರಿ ಶಾಲೆಯ ಮಕ್ಕಳಿಗೆ 13 ಕಿ.ಮೀ ದೂರವಿರುವ ಜಿಲ್ಲಾಡಳಿತ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೇಗೆ ಸಾಧ್ಯ. ಬಸ್ ವ್ಯವಸ್ಥೆ ಕಲ್ಪಿಸುವವರು ಯಾರು, ಮಕ್ಕಳು ಅವಕಾಶ ವಂಚಿತರಾಗುವುದಿಲ್ಲವೇ ಎಂಬುದು ಶಾಂತಿ ನಿಕೇತನ ಶಾಲಾ ಅಡಳಿತ ಮಂಡಳಿ ಸಂಸ್ಥಾಪಕ ಅಧ್ಯಕ್ಷ ವೈ.ಕೆ.ಚಂದ್ರಶೇಖರ್ ಪ್ರಶ್ನೆ.

‘ಜಿಲ್ಲಾಡಳಿತ ಭವನದಲ್ಲಿ ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿ ತಾಲ್ಲೂಕು ಕೇಂದ್ರದ ಮೈದಾನದಲ್ಲಿ ನಡೆಸಿದರೆ ಕಾರ್ಯಕ್ರಮ ಸಾರ್ಥಕವಾಗಲಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು, ಎಲ್ಲ ಮಕ್ಕಳಿಗೂ ಅವಕಾಶ ಸಿಗಲಿ ಎಂಬುದು ನಮ್ಮ ಸಲಹೆ’ ಎಂದು ಅವರು ಹೇಳಿದರು.

ಗಣರಾಜ್ಯೋತ್ಸವ ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ನಡೆಸಬೇಕೇ ಜಿಲ್ಲಾಡಳಿತ ಭವನದಲ್ಲಿ ಇರಬೇಕೇ ಎಂಬುದರ ಬಗ್ಗೆ ಅಂತಿಮ ತಿರ್ಮಾನವಾಗಿಲ್ಲ. ಜ.24 ರಂದು ಸಂಜೆ ನಡೆಯುವ ಪೂರ್ವಭಾವಿ ಸಭೆಯಲ್ಲಿ ಸ್ವಷ್ಟತೆ ಸಿಗಲಿದೆ ಎನ್ನುತ್ತಾರೆ ತಹಶೀಲ್ದಾರ್ ಎಂ.ರಾಜಣ್ಣ.

ಜಿಲ್ಲಾಡಳಿತ ಭವನದ ಆವರಣದಲ್ಲಿ ಗಣರಾಜ್ಯೋತ್ಸವ ನಡೆಯಲಿದೆ. ಈಗಾಗಲೇ ಈ ಹಿಂದೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನವಾಗಿದೆ. ನಾಲ್ಕು ವಾದ್ಯವೃಂದ, ನಾಲ್ಕು ಪಥ ಸಂಚಲನ ತಂಡ, ನಾಲ್ಕು ಸಾಂಸ್ಕೃತಿಕ ನೃತ್ಯ ತಂಡಗಳಿಗೆ ಸಿಮಿತಗೊಳಿಸಲಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ; ಹಿರಿಯ ಅಧಿಕಾರಿಗಳ ತೀರ್ಮಾನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT