ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು: ವಾಹನ ಡಿಕ್ಕಿ– ಕಾಲೇಜಿನಿಂದ ಮನೆಗೆ ಹೊರಟಿದ್ದ ಯುವತಿ ಸಾವು

ನ್ಯಾಯಕ್ಕಾಗಿ ‍ಪಟ್ಟು ಹಿಡಿದ ಸಹಪಾಠಿಗಳು, ರಸ್ತೆ ತಡೆದು ದಿಢೀರ್‌ ಪ್ರತಿಭಟನೆ
Published 31 ಜನವರಿ 2024, 10:45 IST
Last Updated 31 ಜನವರಿ 2024, 10:45 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರು– ಬೀಡಿ ರಸ್ತೆಯ ಫಾರೆಸ್ಟ್ ನಾಕಾ ಬಳಿ ಬುಧವಾರ, ಕಾಲೇಜು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚನ್ನಮ್ಮನ ಕಿತ್ತೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ ಓದುತ್ತಿದ್ದ ಕಾವೇರಿ ಬಸಪ್ಪ ಕಾಜಗಾರ (20) ಮೃತ ವಿದ್ಯಾರ್ಥಿನಿ. ದೇವಗಾಂವ್ ಗ್ರಾಮದ ಅನಿಲ್ ಚಿವುಟಗುಂಡಿ ಅಪಘಾತಕ್ಕೆ ಕಾರಣನಾದ ವಾಹನ ಚಾಲಕ.

ಎಂದಿನಂತೆ ಬುಧವಾರ ಕೂಡ ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿನಿ ಮನೆ ಕಡೆಗೆ ಹೊರಟಿದ್ದರು. ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಏಕಾಏಕಿ ಬಂದ ಟಂಟಂ ವಾಹನ ವಿದ್ಯಾರ್ಥಿನಿ ಮೇಲೆಯೇ ಹರಿಯಿತು. ತೀವ್ರ ಗಾಯಗೊಂಡ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ಖಚಿತಪಡಿಸಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಚದುರಿಸಿ, ಆರೋಪಿಯನ್ನು ವಶಕ್ಕೆ ಪಡೆದರು.

ವಿಷಯ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿನಿಯ ಸಹ‍ಪಾಠಿಗಳು ಆಸ್ಪತ್ರೆಯತ್ತ ಧಾವಿಸಿದರು. ವಿದ್ಯಾರ್ಥಿನಿ ಸಾವಿಗೆ ಕಣ್ಣೀರಾದರು. ಆಸ್ಪತ್ರೆ ಆವರಣದಲ್ಲಿ ಮೃತಳ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು.

ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿ– ವಿದ್ಯಾರ್ಥಿನಿಯರು ದಿಢೀರ್‌ ಪ್ರತಿಭಟನೆ ಶುರು ಮಾಡಿದರು. ಆರೋಪಿಯು ಮದ್ಯ ಕುಡಿದ ಮತ್ತಿನಲ್ಲಿ ವಾಹನ ಓಡಿಸಿ ಅಪಘಾತ ಮಾಡಿದ್ದಾನೆ. ಆತನಿಗೆ ಉಗ್ರ ಶಿಕ್ಷೆ ಆಗಬೇಕು. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಈ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT