ಭಾನುವಾರ, ಏಪ್ರಿಲ್ 18, 2021
25 °C
ಕೊರವಿಕೊಪ್ಪ ಗ್ರಾಮದಲ್ಲಿ ಬೆಳೆ ಕ್ಷೇತ್ರೋತ್ಸವ

ಸೋಯಾಅವರೆ ಪ್ರದೇಶ ವಿಸ್ತರಣೆಗೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಸಂಕಲ್ಪದಂತೆ ಸ್ಥಾಪನೆಯಾಗಿರುವ ಕೃಷಿ ವಿಜ್ಞಾನ ಕೇಂದ್ರವು ನೂತನ ಕೃಷಿ ತಂತ್ರಜ್ಞಾನಗಳನ್ನು ಕಾಲಕಾಲಕ್ಕೆ ಅನುಷ್ಠಾನಗೊಳಿಸುವ ಮೂಲಕ ಕೃಷಿಕರಿಗೆ ನೆರವಾಗುತ್ತಿದೆ’ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಹೇಳಿದರು.

ಬಾಗಲಕೋಟೆ ರಸ್ತೆಯಲ್ಲಿರುವ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಇಂದೋರ್‌ನ ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಬೈಲಹೊಂಗಲ ತಾಲ್ಲೂಕಿನ ಕೊರವಿಕೊಪ್ಪದ ಈಶ್ವರ ನಾ. ಏಣಗಿ ಅವರ ಜಮೀನಿನಲ್ಲಿ ಈಚೆಗೆ ಆಯೋಜಿಸಿದ್ದ ಸೋಯಾಅವರೆ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕೇಂದ್ರವು ಅಲ್ಪಾವಧಿಯಲ್ಲೇ ಮಹತ್ತರ ಸಾಧನೆ ಮಾಡಿ, ಈ ಭಾಗದ ರೈತರಿಗೆ ಸೇವೆ ಸಲ್ಲಿಸುತ್ತಿದೆ. ವಿವಿಧ ಬೆಳೆಗಳ ಮೇಲೆ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುತ್ತಿದೆ. ಇದರ ಫಲವಾಗಿ ಕೃಷಿ ಇಲಾಖೆ ಸಹಕಾರದಲ್ಲಿ ಗೋಧಿಯ ಯುಎಎಸ್-304 ತಳಿಯು 1,946 ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಸೋಯಾಬೀನ್‌ನ ಡಿಎಸ್‌ಬಿ-21 ತಳಿಯು 650 ಹೆಕ್ಟೇರ್‌ನಲ್ಲಿದೆ. ಹೆಸರು, ಕಡಲೆ ಬೆಳೆ, ಬಿಟಿ ಹತ್ತಿಯಲ್ಲಿ ಸುಧಾರಿತ ತಂತ್ರಜ್ಞಾನ ಜಾರಿಗೆ ತರಲಾಗಿದೆ. ಈವರೆಗೆ 12,121 ಮಣ್ಣು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೃಷಿ ಇಲಾಖೆ ಸಹಯೋಗದಲ್ಲಿ 1,07,351 ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬೀಜೋತ್ಪಾದನೆಗೆ ಕ್ರಮ:

‘ಜಿಲ್ಲೆಯಲ್ಲಿ ಸೋಯಾಅವರೆಯು ಅಧಿಕ ಕ್ಷೇತ್ರದಲ್ಲಿ ಬೆಳೆಯುವ ಎಣ್ಣೆ ಕಾಳು ಬೆಳೆಯಾಗಿದೆ. ಕೊರವಿಕೊಪ್ಪ ಗ್ರಾಮದಲ್ಲಿ ಈ ಬೆಳೆಯನ್ನು ಮುಂಗಾರು ಹಂಗಾಮಿನಲ್ಲಿ ಹೆಚ್ಚು ಹಾಕಲಾಗುತ್ತದೆ. ಈ ಬೆಳೆಯಲ್ಲಿ ಅಧಿಕ ಇಳುವರಿ ನೀಡುವ ಹಾಗೂ ರೋಗ ನಿರೋಧಕತೆ ಶಕ್ತಿ ಹೊಂದಿದ ತಳಿ ಕಂಡು ಹಿಡಿಯಲು ನಿರಂತರ ಸಂಶೋಧನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇಂದೋರ್‌ನ ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆಯು ಬಿಡುಗಡೆ ಮಾಡಿದ ತಳಿಯ  ಬೀಜೋತ್ಪಾದನೆಯನ್ನು ಇಲ್ಲಿ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ನೀತಾ ಖಾಂಡೇಕರ ಮಾತನಾಡಿ, ‘ದೇಶದಲ್ಲಿ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ₹ 75ಸಾವಿರ ಕೋಟಿ ಖರ್ಚು ಮಾಡಲಾಗುತ್ತದೆ. ಆ ಕಾರಣದಿಂದ ಸೋಯಾಅವರೆಯನ್ನು ನಮ್ಮಲ್ಲೇ ಅಧಿಕ ಕ್ಷೇತ್ರದಲ್ಲಿ ಬೆಳೆಯುವುದು ಅವಶ್ಯವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ‘ಬೇಸಿಗೆಯಲ್ಲಿ ಬೆಳೆದ ಸೋಯಾಅವರೆ ಬೀಜವನ್ನು ಮುಂಗಾರಿನಲ್ಲಿ ಬಿತ್ತಿದರೆ ಉತ್ತಮ ಬೆಳೆ ಬರುತ್ತದೆ. ಆದ್ದರಿಂದ ಎಲ್ಲ ರೈತರು ಹೆಚ್ಚು ಬೀಜೋತ್ಪಾದನೆ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಆರ್.ಆರ್. ಹಂಚಿನಾಳ, ವಿಸ್ತರಣಾ ನಿರ್ದೇಶಕ ಡಾ.ರಮೇಶ ಬಾಬು, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ, ರಾಜ್ಯ ಬೀಜ ನಿಗಮ ಧಾರವಾಡದ ಡಿಜಿಎಂ ಡಾ.ವಿ.ಎಸ್. ಸಂಗಮ, ಡಾ.ಎಸ್.ಎಸ್. ಹಿರೇಮಠ ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಇದ್ದರು.

ಎಸ್.ಎಂ. ವಾರದ ನಿರೂಪಿಸಿದರು. ಜಿ.ಬಿ. ವಿಶ್ವನಾಥ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು