ಗುರುವಾರ , ಡಿಸೆಂಬರ್ 5, 2019
21 °C
ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮ

‘ಉತ್ತಮ ಪರಿಸರಕ್ಕಾಗಿ ಗಿಡ ಬೆಳೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮಲೇರಿಯಾ, ಕ್ಷಯ ರೋಗಗಳಿಗಿಂತಲೂ ವಾಯು ಮಾಲಿನ್ಯದಿಂದ ಸಾವಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು, ವಾಯುಮಾಲಿನ್ಯ ನಿಯಂತ್ರಿಸಲು ಹಾಗೂ ಗುಣಮಟ್ಟದ ಗಾಳಿ ಸೇವಿಸಲು ಗಿಡ, ಮರಗಳನ್ನು ಬೆಳೆಸಬೇಕು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್‌ ಹೇಳಿದರು.

ಇಲ್ಲಿನ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಸಾರಿಗೆ ಇಲಾಖೆಯಿಂದ ಆಯೋಜಿಸಿದ್ದ ‘ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಾಯು ಮಾಲಿನ್ಯ ಸಮಸ್ಯೆ ತುಂಬಾ ಗಂಭೀರವಾಗಿದೆ. ಈ ಕುರಿತು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ವಾಯು ಮಾಲಿನ್ಯ ಪರಿಣಾಮವಾಗಿ ಕೆಲ ನಗರಗಳಲ್ಲಿ ವರ್ಷದ ಕೆಲ ಸಮಯ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ವಿಷಕಾರಿ ಗಾಳಿಯಿಂದಾಗಿ  ಸಾಮಾನ್ಯ ಕಾರ್ಯಚಟುವಟಿಕೆ ಅಸಾಧ್ಯವಾಗುತ್ತಿದೆ. ಇದಕ್ಕೆ ನವದೆಹಲಿಯಲ್ಲಿ ಈಚೆಗೆ ನಡೆದ ಬೆಳವಣಿಗೆಗಳು ತಾಜಾ ಉದಾಹರಣೆಯಾಗಿವೆ’ ಎಂದರು.

‘ನವದೆಹಲಿ ಇಂದು ದಟ್ಟ ಹೊಗೆಯಿಂದ ಆವೃತವಾಗಿದೆ. ವಾಯು ಮಾಲಿನ್ಯದ ಅಪಾಯದ ಮಟ್ಟ 20 ಪಟ್ಟು ಅಧಿಕಗೊಂಡಿದೆ. ಅಧ್ಯಯನದ ಪ್ರಕಾರ, ಅಲ್ಲಿ ವಾಸಿಸುವ ಮಕ್ಕಳು ಬಾಲ್ಯದಲ್ಲಿಯೇ ಸುಧಾರಿಸಲಾಗದಷ್ಟು ಶ್ವಾಸಕೋಶದ ಹಾನಿಗೆ ತುತ್ತಾಗಿದ್ದಾರೆ. ಆ ಸ್ಥಿತಿ ಬೇರೆ ಬೇರೆ ನಗರಗಳಲ್ಲಿ ಬಾರದಂತೆ ನೋಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ಕಾಳಜಿ ಎಲ್ಲರಲ್ಲೂ ಮೂಡಬೇಕು. ಆರೋಗ್ಯಕರ ವಾತಾವರಣಕ್ಕಾಗಿ ಕೆಲಸ ಮಾಡುವ ಅನಿವಾರ್ಯ ಎದುರಾಗಿದೆ’ ಎಂದು ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ಜಿ.ಎಂ. ಪಾಟೀಲ ಮಾತನಾಡಿ, ‘ಸಾರ್ವಜನಿಕರು ಅಗತ್ಯವಿದ್ದಾಗ ಮಾತ್ರ ವಾಹನ ಬಳಕೆ ಮಾಡಬೇಕು. ನಗರ ಸಂಚಾರಕ್ಕಾಗಿ ಬೈಸಿಕಲ್ ಬಳಸಬೇಕು’ ಎಂದು ಸಲಹೆ ನೀಡಿದರು.

ಜೈನ್ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ.ಕೆ.ಜಿ. ವಿಶ್ವನಾಥ ಮಾತನಾಡಿ, ‘ಬೈಸಿಕಲ್‌ನಲ್ಲಿ ಬರುವ ವಿದ್ಯಾರ್ಥಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ₹ 500 ಪ್ರೋತ್ಸಾಹಧನ ನೀಡಲಾಗುವುದು’ ಎಂದು ಪ್ರಕಟಿಸಿದರು.

ಪ್ರೊ.ಶಶಾಂಕ ವನಕುದರಿ, ಪ್ರೊ.ಸಿ.ಎ. ನುನುಜಾ ಭತಿ, ಪ್ರೊ.ರವಿ ಪ್ರಕಾಶ, ಆಸಿಫ್, ಯೋಗಿತಾ ಇದ್ದರು.

ಆರ್‌ಟಿಒ ಇನ್‌ಸ್ಪೆಕ್ಟರ್ ಓಂಪ್ರಕಾಶ ಆಡಿನ ಸ್ವಾಗತಿಸಿದರು. ಪ್ರೊ.ಪ್ರಕಾಶ ಕೆ. ಸೋನವಾಲಕರ ವಂದಿಸಿದರು.

ಪ್ರತಿಕ್ರಿಯಿಸಿ (+)