ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ‘ಅನಂತ’

ಹಲವು ಕಾರ್ಯಕ್ರಗಳಲ್ಲಿ ಭಾಗವಹಿಸುತ್ತಿದ್ದರು
Last Updated 12 ನವೆಂಬರ್ 2018, 15:51 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತಕುಮಾರ ಅವರು ಬೆಳಗಾವಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

ಪಕ್ಷದ ಕಾರ್ಯಕ್ರಮಗಳು, ಚುನಾವಣಾ ಪ್ರಚಾರ ಸಮಾವೇಶ–ಸಭೆಗಳು ಮಾತ್ರವಲ್ಲದೇ, ಸಾಮಾಜಿಕ ಹಾಗೂ ಧಾರ್ಮಿಕ ಸಭೆ, ಸಮಾರಂಭಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ತಮ್ಮ ಮಾತಿನ ಶೈಲಿಯಿಂದ ಎಲ್ಲರನ್ನೂ ಗಮನಸೆಳೆಯುತ್ತಿದ್ದರು.

ಮಹದಾಯಿ ನದಿ ನೀರಿನಲ್ಲಿ ಕರ್ನಾಟಕಕ್ಕೆ ಪಾಲು ದೊರೆಯಬೇಕು. ಕಳಸಾ–ಬಂಡೂರಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದವರು ಹಾಗೂ ಹೋರಾಡುತ್ತಿದ್ದವರಲ್ಲಿ ಪ್ರಮುಖರಾಗಿದ್ದರು.

ಮೂಲನಿಧಿ ಸ್ಥಾಪಿಸಲು ಸಲಹೆ:ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಭಾಗ್ಯನಗರ ಕೃಷಿ ಕಾಲೊನಿಯಲ್ಲಿ 2016ರ ಡಿ. 11ರಂದು ಆಯೋಜಿಸಿದ್ದ ಅಖಿಲ ಕರ್ನಾಟಕ 9ನೇ ಬ್ರಾಹ್ಮಣ ಮಹಾಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ‘ಭಾರತ ಜ್ಞಾನಾಧರಿತ ದೇಶವಾಗಬೇಕು. ಬ್ರಾಹ್ಮಣ ಸಮಾಜದವರು ಸಂಸ್ಕಾರಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಸ್ನಾನ, ಸಂಧ್ಯಾವಂದನೆ, ಪಥ್ಯ, ಕಟ್ಟುಪಾಡು, ಜ್ಞಾನಸಂಪಾದನೆ ಬಿಡಬಾರದು. ಕೆಲವು ಸಂದರ್ಭಗಳಲ್ಲಿ, ಕೆಲವರಿಗೆ ಇದು ಕರ್ಮಕಾಂಡ ಎನಿಸಬಹುದು. ಆದರೂ ಮುಂದುವರಿಸಬೇಕು. ಜೀವನಶೈಲಿ, ರೋಗಗಳಿಗೆ, ಮಾನಸಿಕ ಸಮಸ್ಯೆಗಳಿಗೆ ಜ್ಞಾನ ಆಧರಿಸಿದ ಜೀವನ ಪದ್ಧತಿಯೇ ಪರಿಹಾರ. ಇದೇ ಮುಂದಿನ ದಿನಗಳಿಗೆ ಬೆಳಕು’ ಎಂದು ಪ್ರತಿಪಾದಿಸಿದ್ದರು.

‘ಸಮಾಜದ ಅಭಿವೃದ್ಧಿಗೆಂದು ಮೂಲನಿಧಿಯನ್ನು ಸ್ಥಾಪಿಸಬೇಕು. ಪೇಜಾವರ ಶ್ರೀಗಳು ಸೇರಿದಂತೆ ಎಲ್ಲರೂ ಈ ನಿಟ್ಟಿನಲ್ಲಿ ಚಿಂತಿಸಬೇಕು’ ಎಂದು ಸಲಹೆಯನ್ನೂ ನೀಡಿದ್ದರು.

ಪಾಟೀಲಗೆ ಮೆಚ್ಚುಗೆ:2017ರ ಜೂನ್ 4ರಂದು ಬಿಜೆಪಿ ಮುಖಂಡ ಅಭಯ ಪಾಟೀಲ ನೇತೃತ್ವದಲ್ಲಿ ಗೋವಾವೇಸ್ ಸಮೀಪದ ರಸ್ತೆಯ ಇಕ್ಕೆಲಗಳಲ್ಲಿ ‘ಹುತಾತ್ಮರ ಸ್ಮರಣೆ ಹಸಿರಾಗಿಸಲು ವೃಕ್ಷಾರೋಪಣ’ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆದು ಚಾಲನೆ ನೀಡಿದ್ದರು.

‘ಹಸಿರು ಭಾರತ ನಿರ್ಮಾಣವಾಗಬೇಕು. ಇದಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ನಮ್ಮ ಅದಮ್ಯ ಚೇತನ ಸಂಸ್ಥೆಯಿಂದ ಹಸಿರು ಕರ್ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಮಹಾತ್ಮಾ ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛಾಗ್ರಹ ಮಾಡುತ್ತಿದ್ದಾರೆ. ನಾವು ಸಸಿ ನೆಟ್ಟು ಬೆಳೆಸುವ ಕಾರ್ಯಕ್ರಮದ ಮೂಲಕ ಸಸ್ಯಾಗ್ರಹ ಮಾಡುತ್ತಿದ್ದೇವೆ’ ಎಂದಿದ್ದರು.

‘ಸಸಿಗಳಿಗೆ ಸ್ವಾತಂತ್ರ್ಯ ಸೇನಾನಿಗಳ ಹೆಸರಿಡುವ ಮೂಲಕ, ಅವರ ಕೊಡುಗೆಯನ್ನು ಅಭಯ ಪಾಟೀಲ ವಿನೂತನವಾಗಿ ನೆನೆದು ಮಾದರಿಯಾಗಿದ್ದಾರೆ. ಪರಿಸರ ಸಂರಕ್ಷಣೆ ಪಾಠ ಹೇಳುತ್ತಿದ್ದಾರೆ’ ಎಂದು ಶ್ಲಾಘಿಸಿದ್ದರು.

ಔಷಧ ಕೇಂದ್ರ ಘೋಷಿಸಿದ್ದರು

2016ರ ನ. 13ರಂದು ನಡೆದಿದ್ದ ಕೆಎಲ್ಇ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಿದ್ದರು. 2017ರ ಆ.28ರಂದು ಚಿಕ್ಕೋಡಿಯ ದೂಧ್‌ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕೇಂದ್ರ ಸರ್ಕಾರದಿಂದ ಆಯೋಜಿಸಿದ್ದ ‘ಸಂಕಲ್ಪದಿಂದ ಸಿದ್ಧಿ’ ಕಾರ್ಯಕ್ರಮ ಉದ್ಘಾಟಿಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ 25 ಜೆನರಿಕ್ ಔಷಧ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. ನಂತರ ವಿವಿಧೆಡೆ ಕೇಂದ್ರಗಳು ಆರಂಭಗೊಂಡಿವೆ. 2017ರ ಸೆ.14ರಂದು ಸಾಂಬ್ರಾದಲ್ಲಿ ಉನ್ನತೀಕರಿಸಿದ ವಿಮಾನನಿಲ್ದಾಣ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT