ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ: ಅಧಿಸೂಚನೆ ಮಾರ್ಚ್‌ 23ರಂದು

ಜಿಲ್ಲಾ ಚುನಾವಣಾಧಿಕಾರಿಯಿಂದ ಮಾಹಿತಿ
Last Updated 22 ಮಾರ್ಚ್ 2021, 11:20 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮಂಗಳವಾರ (ಮಾರ್ಚ್‌ 23) ಅಧಿಸೂಚನೆ ಪ್ರಕಟವಾಗಲಿದ್ದು, ಅಂದು ಬೆಳಿಗ್ಗೆ 11ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಕಾರ್ಯಾಲಯ ರೂಪಿಸಲಾಗಿದೆ. ಉಮೇದುವಾರಿಕೆ ಸಲ್ಲಿಕೆಗೆ ಮಾರ್ಚ್‌ 30 ಕೊನೆಯ ದಿನವಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಮಾರ್ಚ್‌ 31ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಏ.3 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಏ.17ರಂದು ಮತದಾನ ನಡೆಯಲಿದೆ. ಮೇ 2ರಂದು ನಗರದ ಆರ್‌ಪಿಡಿ ಕಾಲೇಜು ಕಟ್ಟಡದಲ್ಲಿ ಮತ ಎಣಿಕೆ ನಡೆಯಲಿದೆ. ಮಾದರಿ ನೀತಿಸಂಹಿತೆಯು ಏ.4ರವರೆಗೂ ಜಾರಿಯಲ್ಲಿರಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘ಸಾಮಾನ್ಯ ಅಭ್ಯರ್ಥಿಯು ₹ 25 ಸಾವಿರ ಹಾಗೂ ಮೀಸಲಾತಿ ಅಭ್ಯರ್ಥಿಗಳು ₹ 12,500 ಠೇವಣಿ ಮೊತ್ತ ನೀಡಬೇಕು. ಪ್ರತಿ ಅಭ್ಯರ್ಥಿಗೆ ₹ 77 ಲಕ್ಷ ವೆಚ್ಚ ಮಿತಿ ನಿಗದಿಪಡಿಸಲಾಗಿದೆ. ಮೆರವಣಿಗೆ, ಸಮಾವೇಶ ವೇಳೆ ಮಾರ್ಗಸೂಚಿ ಪಾಲಿಸಬೇಕು. ಇಲ್ಲವಾದಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳ ನೇಮಕ:

‘ಚುಣಾವಣೆಗೆ ಅಗತ್ಯ ಸಿದ್ಧತೆಗಳು ನಡೆದಿವೆ. ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರ್‌ ಜೆ.ಎಂ. ಪಾಟೀಲ (ಅರಭಾವಿ), ಮಹಾನಗರಪಾಲಿಕೆ ಅಧಿಕಾರಿ ಎಸ್.ವಿ. ಗಂಟಿ (ಗೋಕಾಕ), ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ (ಬೆಳಗಾವಿ ಉತ್ತರ), ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿ.ವಿ. ಕೊಡ್ಲಿ (ಬೆಳಗಾವಿ ದಕ್ಷಿಣ), ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ (ಬೆಳಗಾವಿ ಗ್ರಾಮೀಣ), ಉಪ ವಿಭಾಗಾಧಿಕಾರಿ ಶಶಿಧರ ಬಗಲಿ (ಬೈಲಹೊಂಗಲ), ಹಿಪ್ಪರಗಿ ಹೈಡ್ರೊ ಪ್ರಾಜೆಕ್ಟ್ ವಿಶೇಷ ಭೂಸ್ವಾಧೀನಾಧಿಕಾರಿ ಎ.ಎಸ್. ಸಂಪಗಾಂವಿ (ಸವದತ್ತಿ ಯಲ್ಲಮ್ಮ), ಆಹಾರ ಇಲಾಖೆ ಕಚೇರಿ ವ್ಯವಸ್ಥಾಪಕ (ಅಶೋಕ ಗುರಾಣಿ) ನೇಮಿಸಲಾಗಿದೆ. ಹೆಚ್ಚುವರಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಕಾರ್ಯನಿರ್ವಹಿಸುವರು’ ಎಂದು ವಿವರಿಸಿದರು.

‘8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಇದೇ ವರ್ಷದ ಜ.18ರ ಅಂತಿಮ ಮತದಾರರ ಪಟ್ಟಿ ಪ್ರಕಾರ 9,08,103, 8,99,091 ಮಹಿಳೆಯರು, 56 ಇತರೆ ಸೇರಿ 18,07,250 ಮತದಾರರು ಇದ್ದಾರೆ. 22,461 ಯುವ ಮತದಾರರು. 7,925 ಮಂದಿ ಸೇವಾ ಮತದಾರರಿದ್ದಾರೆ. 12,290 ಅಂಗವಿಕಲರಿದ್ದಾರೆ. ಅರಭಾವಿಯಲ್ಲಿ 151, ಬೆಳಗಾವಿ ಗ್ರಾಮೀಣದಲ್ಲಿ 122 ಸೇರಿ ಒಟ್ಟು 329 ಮಂದಿ ವಿಐಪಿ (ಗಣ್ಯ) ಮತದಾರರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅಗತ್ಯಕ್ಕಿಂತಲೂ ಹೆಚ್ಚಿನ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ), ವಿವಿ ಪ್ಯಾಟ್ ಯಂತ್ರಗಳಿವೆ. ಅವುಗಳನ್ನು ಪ್ರಥಮ ಹಂತದ ತಪಾಸಣೆ ಮಾಡಲಾಗಿದೆ. ಸಾರ್ವಜನಿಕರಿಗೆ ತಿಳಿವಳಿಕೆ ನೀಡುವುದಕ್ಕಾಗಿ ಶೇ 5ರಷ್ಟು ಯಂತ್ರಗಳನ್ನು ಸಂಬಂಧಿಸಿದ ತಹಶೀಲ್ದಾರ್‌ಗಳಿಗೆ ಒದಗಿಸಲಾಗಿದೆ. ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ವಿವಿಧ ತಂಡಗಳನ್ನು ರಚಿಸಿ, ತರಬೇತಿ ಕೊಡಲಾಗಿದೆ. ಮತಗಟ್ಟೆ ಸಿಬ್ಬಂದಿಗೆ ಏ.7ರಿಂದ ಮೂರು ಬಾರಿ ತರಬೇತಿ ನೀಡಲಾಗುವುದು. ಮತಗಟ್ಟೆ ಸಾಮಗ್ರಿಗಳಿಗಾಗಿ ಅಲ್ಪಾವಧಿ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.

ಪೋಸ್ಟಲ್ ಬ್ಯಾಲೆಟ್ ಪೇಪರ್‌

‘80 ವರ್ಷ ಮೀರಿದ 41,535 ಮತದಾರರಿದ್ದಾರೆ. ಕೋವಿಡ್–19 ಹಿನ್ನೆಲೆಯಲ್ಲಿ ಅವರಿಗೆ ಪೋಸ್ಟಲ್ ಬ್ಯಾಲೆಟ್ ಪೇಪರ್‌ ನೀಡಲಾಗುವುದು. ಇದಕ್ಕಾಗಿ ಮತಗಟ್ಟೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಅವರು 12ಡಿ ನಮೂನೆಯನ್ನು ಹಿರಿಯ ನಾಗರಿಕರಿಗೆ ನೀಡಿದ್ದಾರೆ. ಮಾರ್ಗಸೂಚಿ ಪ್ರಕಾರ ಈ ಪ್ರಕ್ರಿಯೆ ನಡೆಯಲಿದೆ. ಅಂಗವಿಕಲರು ಹಾಗೂ ಕೋವಿಡ್–19 ಸೋಂಕಿತರಿಗೂ ಇದು ಅನ್ವಯವಾಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಂಕಿ ಅಂಶ

2,566

ಮತಗಟ್ಟೆಗಳು

11,290

ಮತಗಟ್ಟೆ ಸಿಬ್ಬಂದಿ ನಿಯೋಜನೆ

18,07,250

ಒಟ್ಟು ಮತದಾರರು

41,535

80 + ವಯಸ್ಸಿನ ಮತದಾರರು

* ಮತಗಟ್ಟೆ ಸಾಮಗ್ರಿಯನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ವಿತರಿಸಲಾಗುವುದು ಮತ್ತು ಹಿಂಪಡೆಯಲಾಗುವುದು. ಸ್ಟ್ರಾಂಗ್‌ ರೂಂಗಾಗಿ ಆರ್‌ಪಿಡಿ ಕಾಲೇಜಿನ ಕಟ್ಟಡ ಗುರುತಿಸಲಾಗಿದೆ. 27 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

-ಎಂ.ಜಿ. ಹಿರೇಮಠ, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT