ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ: ಪ್ರಸ್ತಾವ ಸಲ್ಲಿಸಲು ನಿರ್ಧಾರ

ಸಭೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರಸ್ತಾಪ; ಸ್ಪಂದನೆ
Last Updated 25 ಅಕ್ಟೋಬರ್ 2018, 10:30 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ನ. 1ರಂದು ಆಯೋಜಿಸಲಾಗುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಲು ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ನೇತೃತ್ವದಲ್ಲಿ ನಿಯೋಗ ತೆರಳಲು ಮತ್ತು ₹ 1 ಕೋಟಿ ರೂಪಾಯಿ ವಿಶೇಷ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

‘ಪ್ರಜಾವಾಣಿ’ ವರದಿ ‍ಪ್ರಸ್ತಾಪಿಸಿದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಅನುದಾನ ಕೋರಿ ಜಿಲ್ಲಾಡಳಿತದಿಂದ ಈವರೆಗೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತ‍ಪಡಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ‘ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಲಾಗಿದೆ. ಅನುದಾನ ಕೋರಿ ಪ್ರಸ್ತಾವ ಕಳುಹಿಸಲಾಗುವುದು. ಮೆರವಣಿಗೆ ವೇಳೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುವುದು’ ಎಂದು ತಿಳಿಸಿದರು.

ನವೀಕರಣ, ದೀಪಾಲಂಕಾರ:‘ಮುಖ್ಯಮಂತ್ರಿ ಆಹ್ವಾನಿಸುವ ಕುರಿತು ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ ಯಾವುದೇ ಕೆಲಸವಾಗಿಲ್ಲ’ ಎಂದು ಜಾಗೃತ ಸಮಿತಿ ಸದಸ್ಯ ಅನಂತಕುಮಾರ ಬ್ಯಾಕೋಡ ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಆಹ್ವಾನಿಸಲು ತಮ್ಮ ನೇತೃತ್ವದಲ್ಲಿ ನಿಯೋಗ ತೆರಳಲಾಗುವುದು’ ಎಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ:‘ರಾಜ್ಯೋತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕುಮಾರಗಂಧರ್ವ ರಂಗಮಂದಿರದಲ್ಲಿ ನಡೆಸುವ ಬದಲು ನ. 2ರಂದು ಸಾರ್ವಜನಿಕ ಸ್ಥಳದಲ್ಲಿ ಆಯೋಜಿಸಬೇಕು’ ಎಂದು ಕನ್ನಡ ಹೋರಾಟಗಾರ ಮೆಹಬೂಬ್ ಮಕಾನದಾರ ಸಲಹೆ ನೀಡಿದರು. ಈ ಪ್ರಕಾರ ಕಾರ್ಯಕ್ರಮ ಆಯೋಜಿಸುವಂತೆ ಡಿಸಿ ಸೂಚಿಸಿದರು. ರಾಜ್ಯೋತ್ಸವದಂದು ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು ಎಂದರು.

ಕನ್ನಡ ಹೋರಾಟಗಾರರಾದ ಸಿದ್ದನಗೌಡ ಪಾಟೀಲ, ಮಹದೇವ ತಳವಾರ, ಶ್ರೀನಿವಾಸ್ ತಾಳೂರಕರ ಸಲಹೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ, ಹೆಚ್ಚುವರಿ ಎಸ್ಪಿ ರವೀಂದ್ರ ಗಡಾದಿ, ಕನ್ನಡ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

10ಸಾವಿರ ಲಡ್ಡು ವಿತರಣೆ:‘ರಾಣಿ ಚನ್ನಮ್ಮ ಪ್ರತಿಮೆಗೆ ಬಣ್ಣ ಹಚ್ಚಲಾಗುತ್ತಿದೆ. ಸುತ್ತಲಿನ ಕಟ್ಟೆ ನವೀಕರಿಸಿ ದೀಪಾಲಂಕಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.

ರಾಜ್ಯೋತ್ಸವದಂದು 10ಸಾವಿರ ಲಡ್ಡುಗಳನ್ನು ವಿತರಿಸಲು ಹೋಟೆಲ್ ಮಾಲೀಕರ ಸಂಘದವರು ಒಪ್ಪಿದ್ದಾರೆ. ಅಂದು ಹೋಟೆಲ್‌ಗಳಲ್ಲಿ ಉಪಾಹಾರ ದರದಲ್ಲಿ ಶೇ25ರಷ್ಟು ರಿಯಾಯಿತಿ ನೀಡಲಿದ್ದಾರೆ’ ಎಂದು ಹೇಳಿದರು.

‘ಅಂಗಡಿಗಳ ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸುವವರ ಉದ್ದಿಮೆ ಪರವಾನಗಿ ಅಮಾನತು ಮಾಡಬೇಕು. ಹೋದ ವರ್ಷ 80 ಸ್ತಬ್ಧಚಿತ್ರಗಳನ್ನು ರೂಪಿಸಲಾಗಿತ್ತು. ಅದರಲ್ಲಿ 18 ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರಗಳಿದ್ದವು. ಅದೇ ಪ್ರಕಾರ ಈ ಬಾರಿಯೂ ರೂಪಕಗಳನ್ನು ಸಿದ್ಧಪಡಿಸಬೇಕು’ ಎಂದು ಡಿಸಿ ನಿರ್ದೇಶನ ನೀಡಿದರು.

‘ಪ್ರತಿ ವರ್ಷದಂತೆ ಕವಾಯತು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT